ಬೆಂಗಳೂರು: ಕಳೆದ ಒಂದೂವರೆ ವರ್ಷದಿಂದ ಸ್ಟೈಪೆಂಡ್ (Increase Stipend) ಹೆಚ್ಚಳಕ್ಕೆ ಮನವಿ ಮಾಡುತ್ತಿದ್ದರೂ ಸರ್ಕಾರದಿಂದ ಯಾವುದೇ ಸ್ಪಂದನೆ ಸಿಗುತ್ತಿಲ್ಲ. ಹೀಗಾಗಿ ಏಕಕಾಲಕ್ಕೆ ಎಲ್ಲ ಪಶು ಕಾಲೇಜುಗಳ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಹೆಬ್ಬಾಳದ ಹೈನು ವಿಜ್ಞಾನ ಮಹಾವಿದ್ಯಾಲಯದ ಎದುರೂ ದೊಡ್ಡ ಮಟ್ಟದ ಪ್ರತಿಭಟನೆ ನಡೆಯಿತು.
ಪಶುವೈದ್ಯಕೀಯ ಕೋರ್ಸ್ ಪೂರೈಸಲು ಐದೂವರೆ ವರ್ಷ ಹಿಡಿಯುತ್ತದೆ. ಕೋರ್ಸ್‌ಗೆ ನಾಲ್ಕುವರೆ ವರ್ಷ ಹಾಗೂ ಒಂದು ವರ್ಷದ ಇಂಟರ್ನ್‌ಷಿಪ್ ಮಾಡಬೇಕಾಗುತ್ತದೆ. ಅಂತಿಮ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಇಂಟರ್ನ್‌ಷಿಪ್ ತರಬೇತಿ ನೀಡಲಾಗುತ್ತಿದೆ. ಈ ವೇಳೆ 15 ದಿನಗಳಿಗೊಮ್ಮೆ ರಾಜ್ಯದ ಪೂರ್ತಿ ವಿವಿಧ ಭಾಗಗಳ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸಬೇಕಾಗುತ್ತದೆ ಎಂದು ವಿದ್ಯಾರ್ಥಿನಿ ಪವಿತ್ರಾ ವಿವರಿಸಿದರು.
ಯಾವುದೇ ರಜೆ ಇಲ್ಲದೆ ಕೆಲಸ ಮಾಡುವ ನಮಗೆ ಪ್ರಸ್ತುತ ಪಶುವೈದ್ಯಕೀಯ ವಿದ್ಯಾರ್ಥಿಗಳಿಗೆ ತಿಂಗಳ ಸ್ಟೈಪೆಂಡ್ ಆಗಿ 14 ಸಾವಿರ ರೂ. ನೀಡಲಾಗುತ್ತಿದೆ. 2015ರಲ್ಲಿ 11 ಸಾವಿರದಿಂದ 14 ಸಾವಿರಕ್ಕೆ ಹೆಚ್ಚಳ ಮಾಡಿದರು. ಕಳೆದ 8 ವರ್ಷಗಳಿಂದ ಕೇವಲ 14 ಸಾವಿರ ರೂಪಾಯಿ ಸಿಗುತ್ತಿದೆ. ಇದನ್ನು ಹೆಚ್ಚಿಸಬೇಕು ಎಂದು ಅವರು ಆಗ್ರಹಿಸಿದರು.
ಇದನ್ನೂ ಓದಿ: Leopard trapped: ನಾಯಿ ಕೊಂದ ಚಿರತೆ ಕೊನೆಗೂ ಸೆರೆ; ಅರಣ್ಯ ಇಲಾಖೆಯ ಆಪರೇಶನ್ ಯಶಸ್ವಿ
14 ಸಾವಿರ ರೂ. ನಮ್ಮ ಊಟ, ವಸತಿ, ಸಾರಿಗೆ ಇತ್ಯಾದಿ ಖರ್ಚುಗಳಿಗೆ ಸಾಲುತ್ತಿಲ್ಲ. ಹೀಗಾಗಿ ಈ ಕೂಡಲೇ ಸ್ಟೈಪೆಂಡ್ ಹೆಚ್ಚಿಸುವಂತೆ ಆಗ್ರಹಿಸಿದ್ದಾರೆ. ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ಸ್ಟೈಪೆಂಡ್ ಹೆಚ್ಚಳ ಮಾಡಲಾಗಿದೆ. ಪಶುವೈದ್ಯಕೀಯ ವಿದ್ಯಾರ್ಥಿಗಳಿಗೂ ಏರಿಕೆ ಮಾಡುವಂತೆ ಪಟ್ಟು ಹಿಡಿದಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ