Site icon Vistara News

India energy week 2023: ಪರಿಸರಕ್ಕೆ ಹಾನಿ ಮಾಡುವ ಪ್ಲಾಸ್ಟಿಕ್ ಬಾಟಲಿಗಳಿಂದ ಬಟ್ಟೆ! ಹೇಗೆ ತಯಾರಿಸುತ್ತಾರೆ?

India energy week 2023: How to make clothes from environmentally harmful plastic bottles?

ಬೆಂಗಳೂರು: ಪರಿಸರಕ್ಕೆ ಮಾರಕ ಎಂದೇ ಪರಿಗಣಿಸಲಾಗಿರುವ ಪ್ಲಾಸ್ಟಿಕ್ ಬಾಟಲಿಗಳನ್ನು ಮರು ಬಳಕೆಯಲ್ಲಿ ಬಂಗಾರವಾಗಿಸುವ ಪ್ರಯತ್ನಗಳು ನಡೆದಿವೆ. ಈ ನಿಟ್ಟಿನಲ್ಲಿಈಗಾಗಲೇ ಬಿಸ್ಲೇರಿ ಇಂಡಿಯಾ ಮಹತ್ವದ ಹೆಜ್ಜೆ ಇಟ್ಟು, ತನ್ನ ಎಲ್ಲ ಸಿಬ್ಬಂದಿಗೆ ಬಾಟಲಿಯಿಂದ ತಯಾರಿಸಿದ ಬಟ್ಟೆಯ ಸಮವಸ್ತ್ರಗಳನ್ನು ಒದಗಿಸಿದೆ. ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕೂಡ ಇದೇ ಹಾದಿಯಲ್ಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ತೈಲ ಕಂಪನಿಯ ‘ಅನ್‌ಬಾಟಲ್ಡ್’ ಉಪಕ್ರಮಕ್ಕೆ ಬೆಂಗಳೂರಿನಲ್ಲಿ ಸೋಮವಾರ ಚಾಲನೆ ನೀಡಿದ್ದಾರೆ. ಏಕ-ಬಳಕೆಯ ಪ್ಲಾಸ್ಟಿಕ್ ಅನ್ನು ಹಂತಹಂತವಾಗಿ ಹೊರಹಾಕುವ ಗುರಿಯೊಂದಿಗೆ, ಇಂಡಿಯನ್ ಆಯಿಲ್ ಮರುಬಳಕೆಯ ಪಾಲಿಯೆಸ್ಟರ್ (recycling polyethylene terephthalate – rPET) ಮತ್ತು ಹತ್ತಿಯಿಂದ ಮಾಡಿದ ಚಿಲ್ಲರೆ ಗ್ರಾಹಕ ಸಹಾಯಕರು ಮತ್ತು ಎಲ್‌ಪಿಜಿ ವಿತರಣಾ ಸಿಬ್ಬಂದಿಗೆ ಸಮವಸ್ತ್ರಗಳನ್ನು ಒದಗಿಸಿದೆ(India energy week 2023).

ಇಂಡಿಯನ್ ಆಯಿಲ್‌ನ ಗ್ರಾಹಕ ಅಟೆಂಡೆಂಟ್‌ನ ಪ್ರತಿಯೊಂದು ಸಮವಸ್ತ್ರವು ಸುಮಾರು 28 PET ಬಾಟಲಿಗಳ ಮರುಬಳಕೆಯನ್ನು ಬೆಂಬಲಿಸುತ್ತದೆ. ಇಂಡಿಯನ್ ಆಯಿಲ್ ಈ ಉಪಕ್ರಮವನ್ನು ‘ಅನ್‌ಬಾಟಲ್ಡ್’ ಮೂಲಕ ಮುಂದಕ್ಕೆ ತೆಗೆದುಕೊಂಡು ಹೋಗಲಾಗುತ್ತಿದೆ. ಈ ಬ್ರ್ಯಾಂಡ್ ಅನ್ನು ಸುಸ್ಥಿರ ಉಡುಪುಗಳ ಬ್ರ್ಯಾಂಡ್, ಮರುಬಳಕೆಯ ಪಾಲಿಯೆಸ್ಟರ್‌ನಿಂದ ತಯಾರಿಸಿದ ಸರಕುಗಳಿಗಾಗಿ ಪ್ರಾರಂಭಿಸಲಾಗಿದೆ. ಈ ಬ್ರ್ಯಾಂಡ್ ಅಡಿಯಲ್ಲಿ, ಇಂಡಿಯನ್ ಆಯಿಲ್ ಇತರ ತೈಲ ಮಾರುಕಟ್ಟೆ ಕಂಪನಿಗಳ ಗ್ರಾಹಕರ ಪರಿಚಾರಕರಿಗೆ ಸಮವಸ್ತ್ರದ ಅವಶ್ಯಕತೆಗಳನ್ನು ಪೂರೈಸಲು ಗುರಿಯನ್ನು ಹೊಂದಿದೆ, ಸೈನ್ಯಕ್ಕೆ ಯುದ್ಧ-ಅಲ್ಲದ ಸಮವಸ್ತ್ರಗಳು, ಸಂಸ್ಥೆಗಳಿಗೆ ಸಮವಸ್ತ್ರಗಳು / ಉಡುಪುಗಳು ಮತ್ತು ಚಿಲ್ಲರೆ ಗ್ರಾಹಕರಿಗೆ ಮಾರಾಟ ನಡೆಯಲಿದೆ.

ಬಿಸ್ಲೇರಿ ಕಂಪನಿಯಿಂದಲೂ ಬಳಕೆ

ಇಂಡಿಯನ್ ಆಯಿಲ್‌ಕ್ಕಿಂತ ಮುಂಚೆಯ ಬಿಸ್ಲೇರಿ ಇಂಟರ್‌ನ್ಯಾಷನಲ್ ಕಂಪನಿಯು ತನ್ನ ಎಲ್ಲ ಸಿಬ್ಬಂದಿಗೆ 2020ರಲ್ಲೇ ಪಿಇಟಿ ಸಮವಸ್ತ್ರಗಳನ್ನು ಒದಗಿಸಿದೆ. ದೇಶಾದ್ಯಂತ ಬಿಸ್ಲೇರಿಯ 5000 ಸಾವಿರ ಉದ್ಯೋಗಿಗಳಿಗೆ ಬಾಟಲಿಗಳಿಂದ ತಯಾರಿಸಿದ ಬಟ್ಟೆಯಿಂದ ಮಾಡಲಾದ ಉಡುಪು ಧರಿಸುತ್ತಿದ್ದಾರೆ.

ಬಾಟಲಿಯಿಂದ ಬಟ್ಟೆ ತಯಾರಿ ಹೇಗೆ?

ಈಗ ಲಭ್ಯವಿರುವ ರಿ-ಸೈಕ್ಲಿಂಗ್ ಟೆಕ್ನಾಲಜಿಯನ್ನು ಬಳಸಿಕೊಂಡು ಬಾಟಲಿಗಳನ್ನು ಬಟ್ಟೆಯಾಗಿ ಪರಿವರ್ತಿಸಲಾಗುತ್ತಿದೆ. ಈ ಪ್ರಕ್ರಿಯೆ ತುಂಬಾ ದೀರ್ಘವಾಗಿದೆ. ಮೊದಲಿಗೆ ಸಂಗ್ರಹಿಸಲಾದ ಬಾಟಲಿಗಳನ್ನು ನೇರವಾಗಿ ರಿ-ಸೈಕ್ಲರ್‌ಗೆ ಕಳುಹಿಸಲಾಗುತ್ತದೆ. ಈ ಹಂತದಲ್ಲಿ ಪ್ಲಾಸ್ಟಿಕ್‌ ಬಾಟಲಿಗಳನ್ನು ಪುಡಿ ಪುಡಿ ಮಾಡಿ, ಚಕ್ಕೆಗಳಾಗಿ ಮಾರ್ಪಾಡಿಸಲಾಗುತ್ತದೆ. ಕನ್ವರ್ಷನ್ ಮಷಿನ್ ಮೂಲಕ ಚಕ್ಕೆಗಳಿಂದ ನಾರು ಹೊರ ತೆಗೆಯಲಾಗುತ್ತದೆ.

ಇದನ್ನೂ ಓದಿ: World Environment Day | ಪ್ರಕೃತಿ ಸಂರಕ್ಷಣೆಗಾಗಿ ಈ ಅಭ್ಯಾಸ ಅನುಸರಿಸಿ

ಈ ಪಿಇಟಿ ನಾರುಗಳನ್ನು ಅಗತ್ಯವಿರುವ ಛಾಯೆಗಳಲ್ಲಿ ಬಣ್ಣಕ್ಕೆ ಹಾಕಲಾಗುತ್ತದೆ. ಶರ್ಟಿಂಗ್‌ಗಾಗಿ ಹತ್ತಿಯೊಂದಿಗೆ ಮತ್ತು ಪ್ಯಾಂಟ್‌ಗೆ ವಿಸ್ಕೋಸ್‌ನೊಂದಿಗೆ ಈ ನಾರುಗಳನ್ನು ಬೆರೆಸಲಾಗುತ್ತದೆ. ಒಂದು ಶರ್ಟ್‌‌ ರೆಡಿಯಾಗಲು ಸುಮಾರು 40 ಬಾಟಲಿಗಳು ಬೇಕಾದರೆ, ಪ್ಯಾಂಟ್‌ಗಾಗಿ ಸುಮಾರು 45 ಬೇಕಾಗುತ್ತವೆ. ಹತ್ತಿ ಮತ್ತು ವಿಸ್ಕೋಸ್‌ನೊಂದಿಗೆ ಮಿಶ್ರಣ ಮಾಡಿದ ಬಳಿಕ, ನೂಲಿನ ಯಂತ್ರದ ಮೂಲಕ ನಾರನ್ನು ನೂಲಾಗಿ ಪರಿವರ್ತಿಸಲಾಗುತ್ತದೆ. ನೂಲು ಸಿದ್ಧವಾದ ನಂತರ, ರೇಪಿಯರ್ ಮತ್ತು ಏರ್ ಜೆಟ್ ಲೂಮ್‌ಗಳ ಮೂಲಕ ನೇಯ್ಗೆ ಮಾಡಿ, ಅದನ್ನು ಬಟ್ಟೆಯ ರೂಪಕ್ಕೆ ತರಲಾಗುತ್ತದೆ. ನೇಯ್ಗೆ ಪೂರ್ತಿಗೊಂಡ ಬಳಿಕ, ಬಟ್ಟೆಯನ್ನು ವಾಷಿಂಗ್ ಮತ್ತು ಅಂತಿಮ ಪ್ರಕ್ರಿಯೆಗೆ ಕಳುಹಿಸಿ ಕೊಡಲಾಗುತ್ತದೆ. ಇದರೊಂದಿಗೆ ಶರ್ಟ್ ಅಥವಾ ಪ್ಯಾಂಟ್ ಹೊಲಿಸಲು ಬಾಟಲ್‌ಗಳಿಂದ ಮಾಡಿದ ಬಟ್ಟೆ ಸಿದ್ಧವಾಗುತ್ತದೆ.

Exit mobile version