ಬೆಂಗಳೂರು: 2020-21ನೇ ಸಾಲಿನಲ್ಲಿ ದ್ವಿತೀಯ ಪಿಯುಸಿ ಉತ್ತೀರ್ಣರಾದವರ ಶೇ. 50 ಅಂಕವನ್ನು ಸಿಇಟಿಯಲ್ಲಿ ಪರಿಗಣಿಸದ ಹಿನ್ನೆಲೆಯಲ್ಲಿ ತಮಗೆ ಅನ್ಯಾಯವಾಗಿದೆ ಎಂದು ಪುನರಾವರ್ತಿತ ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಫಲಿತಾಂಶದಲ್ಲಿ ಪಿಯು ಅಂಕವನ್ನು ಪರಿಗಣಿಸದೆ ಇರುವುದರಿಂದ ತಮಗೆ ರ‍್ಯಾಂಕ್‌ನಲ್ಲಿ ಹಿನ್ನಡೆಯಾಗಿದೆ ಎಂದು ಆಕ್ಷೇಪಿಸಿ ಪುನರಾವರ್ತಿತ ವಿದ್ಯಾರ್ಥಿಗಳು(ರಿಪೀಟರ್ಸ್) ಹಾಗೂ ಪೋಷಕರು ನಗರದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಎದುರು ಶನಿವಾರ ಪ್ರತಿಭಟನೆ ನಡೆಸಿದರು.
ಈ ಸಾಲಿನ ರಾಜ್ಯ ಪಿಯು ಮಂಡಳಿ ವಿದ್ಯಾರ್ಥಿಗಳು ಹಾಗೂ ಕೇಂದ್ರೀಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (ಸಿಬಿಎಸ್ಇ) ವಿದ್ಯಾರ್ಥಿಗಳ ದ್ವಿತೀಯ ಪಿಯುಸಿ ಫಲಿತಾಂಶದ ಶೇ.50 ಅಂಕಗಳನ್ನು ಮಾತ್ರ ಸಿಇಟಿಗೆ ಪರಿಗಣಿಸಲಾಗಿದೆ. ಕಳೆದ ಬಾರಿ 90 ಅಂಕ ಪಡೆದವರಿಗೂ 15,000 ಒಳಗೆ ರ‍್ಯಾಂಕ್ ದೊರೆತಿತ್ತು. ಆದರೆ ಈ ಬಾರಿ 98 ಅಂಕ ಪಡೆದಿದ್ದರೂ 1 ಲಕ್ಷದ ಮೇಲೆ ರ‍್ಯಾಂಕಿಂಗ್ ದೊರೆತಿದೆ. ಆದರೆ ರಾಜ್ಯ ಪಿಯು ಮಂಡಳಿ ರಿಪೀಟರ್ಸ್ ವಿದ್ಯಾರ್ಥಿಗಳ ಫಲಿತಾಂಶಕ್ಕೆ ಶೇ.50 ಅಂಕ ಪರಿಗಣಿಸಿಲ್ಲ. ಇದರಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ ಎಂದು ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ.
ಬಳಿಕ ಮಲ್ಲೇಶ್ವರಂನ ನಿವಾಸದಲ್ಲಿ ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ ಅವರನ್ನು ಭೇಟಿ ಮಾಡಿ, 2020-21ನೇ ಸಾಲಿನಲ್ಲಿ ದ್ವಿತೀಯ ಪಿಯುಸಿ ಉತ್ತೀರ್ಣರಾದ ಅಭ್ಯರ್ಥಿಗಳ ಶೇ.50 ಅಂಕಗಳನ್ನು 2022ನೇ ಸಾಲಿನ ಸಿಇಟಿ ಫಲಿತಾಂಶಕ್ಕೆ ಪರಿಗಣಿಸಬೇಕು ಎಂದು ವಿದ್ಯಾರ್ಥಿಗಳು ಮನವಿ ಪತ್ರ ಸಲ್ಲಿಸಿದ್ದಾರೆ. ವಿದ್ಯಾರ್ಥಿಗಳ ಮನವಿ ಸ್ವೀಕರಿಸಿ ಮಾತನಾಡಿದ ಅಶ್ವತ್ಥನಾರಾಯಣ ಅವರು, ಈ ಬಗ್ಗೆ ನಾನು ಕೆ ಇ ಎ ನಿರ್ದೇಶಕರ ಜತೆ ಮಾತನಾಡುತ್ತೇನೆ. ಈ ಮಾನದಂಡದ ಬಗ್ಗೆ ನನಗೆ ಮಾಹಿತಿ ಇಲ್ಲ, ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.
ಸಚಿವರು ಭರವಸೆ ಈಡೇರಿಸದೇ ಹೋದಲ್ಲಿ ಸೋಮವಾರ ಕೆಇಎ ಮುಂದೆ ಮತ್ತೆ ಪ್ರತಿಭಟನೆ ಮಾಡಲು ವಿದ್ಯಾರ್ಥಿಗಳು ನಿರ್ಧರಿಸಿದ್ದಾರೆ. ಶೇ.50 ಅಂಕ ಪರಿಗಣಿಸದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ 20 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಬೇಡಿಕೆ ಈಡೇರದಿದ್ದರೆ ನ್ಯಾಯಾಲಯದ ಮೂಲಕ ಕಾನೂನು ಹೋರಾಟವನ್ನೂ ಮಾಡಲು ಸಿದ್ಧೆ ಎಂದು ವಿದ್ಯಾರ್ಥಿಗಳ ಪೋಷಕರು ತಿಳಿಸಿದ್ದಾರೆ.
ಇದನ್ನೂ ಓದಿ | CET Result | ಜಿಲ್ಲಾವಾರು ಸಿಇಟಿ ಫಲಿತಾಂಶ, ಯಾವುದು ಫಸ್ಟ್, ಯಾವುದು ಲಾಸ್ಟ್?