ಮಂಗಳೂರು: ರಾಜ್ಯದ ಮುಜರಾಯಿ ಅಧೀನದ ಅತ್ಯಂತ ಶ್ರೀಮಂತ ದೇವಾಲಯವೆನಿಸಿಕೊಂಡಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪೂಜಾ ಪದ್ಧತಿ ಕುರಿತು ಎದ್ದಿರುವ ವಿವಾದ ಬಗೆಹರಿಯುವಂತೆ ಕಾಣುತ್ತಿಲ್ಲ. ಶೈವ ಸಂಪ್ರದಾಯಕ್ಕೆ ವಿರುದ್ಧವಾಗಿ ಪೂಜಾ ಕಾರ್ಯಗಳು ನಡೆಸುತ್ತಿರುವ ಅರ್ಚಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಮತ್ತೆ ಕೇಳಿಬಂದಿದೆ.
ಕುಕ್ಕೆ ಸುಬ್ಮಹ್ಮಣ್ಯ ದೇವಸ್ಥಾನದ ಪೂಜಾ ವಿಧಾನಗಳಲ್ಲಿ ನ್ಯೂನತೆಗಳಿವೆ. ಶೈವ ದೇವಾಲಯವಾದ ಸುಬ್ರಹ್ಮಣ್ಯ ದೇಗುಲದಲ್ಲಿ ದಿಟ್ಟಂ ಪೂಜಾ ಪದ್ಧತಿಯ ಬದಲಾಗಿ ತಂತ್ರಸಾರ(ವೈಷ್ಣವ) ಪದ್ಧತಿಯಲ್ಲಿ ಪೂಜಾ ಕೈಂಕರ್ಯ ನಡೆಯುತ್ತಿದೆ. ನ್ಯಾಯಾಲಯದ ತೀರ್ಪಿನ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಹಾಗೂ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರ ಬಗ್ಗೆ ಕಪೋಲ ಕಲ್ಪಿತ ಆರೋಪಗಳನ್ನು ಮಾಡಿರುವ ಅರ್ಚಕರ ವಿರುದ್ಧ ಮುಜರಾಯಿ ಸಚಿವರು ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕು ಸುಬ್ರಹ್ಮಣ್ಯ ಗ್ರಾಮದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಹಿತರಕ್ಷಣಾ ವೇದಿಕೆ ಒತ್ತಾಯಿಸಿದೆ.
ಶೈವ ಕ್ಷೇತ್ರವಾಗಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಪೂಜಾ ವಿಧಿವಿಧಾನಗಳ ಬಗ್ಗೆ, ಗರ್ಭಗುಡಿಯ ಒಳಗೆ ಅನಾಥವಾಗಿರುವ ಮೂಲ ಮಹಾಗಣಪತಿ ದೇವರಿಗೆ ಗುಡಿ ನಿರ್ಮಿಸುವ ವಿಚಾರದ ಬಗ್ಗೆ ಸಲ್ಲಿಸಲಾಗಿರುವ ಮನವಿ ಬಗ್ಗೆ ಪರಿಶೀಲಿಸಿ, ವರದಿ ಸಲ್ಲಿಸಲು ಸಮಿತಿ ರಚನೆ ಕುರಿತು ರಾಜ್ಯ ಧಾರ್ಮಿಕ ಪರಿಷತ್ ಸಭೆಗೆ ಮಂಡಿಸಲು ಆದೇಶವಾಗಿತ್ತು. ಆದರೆ ಇದುವರೆಗೂ ಸಮಿತಿ ರಚನೆ ಆಗಿಲ್ಲ. ದೇವಳದಲ್ಲಿ ದಿಟ್ಟಂ ಪ್ರಕಾರ, ಪರಿವಾರ ದೇವರುಗಳಿಗೆ ನಿತ್ಯ ಮೂರು ಹೊತ್ತು ಪೂಜೆ, ನೈವೇದ್ಯ ನೆರವೇರಿಸುವಂತೆ ಮನವಿ ಸಲ್ಲಿಸಲಾಗಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದಾರೆ.
ಕುಕ್ಕೆ ದೇಗುಲದ ಅಧೀನದಲ್ಲಿರುವ ಶೃಂಗೇರಿ ಮಠ ಕಟ್ಟಡದಲ್ಲಿರುವ ಶ್ರೀ ಚಂದ್ರಮೌಳೀಶ್ವರ ದೇವರ ಗುಡಿಯನ್ನು ಜೀರ್ಣೋದ್ಧಾರಗೊಳಿಸಿ, ಶೃಂಗೇರಿ ಮಠದ ಸಂಪ್ರದಾಯ ಪ್ರಕಾರ ಮರು ಪ್ರತಿಷ್ಠಾಪನೆ, ಅಷ್ಟಬಂಧ, ಬ್ರಹ್ಮಕಲಶೋತ್ಸವ ನಡೆಸುವಂತೆ ಧಾರ್ಮಿಕ ಪರಿಷತ್‌ಗೆ ಮನವಿ ಸಲ್ಲಿಸಲಾಗಿದೆ. ದೇಗುಲದಲ್ಲಿ ಶ್ರೀ ಕಾಲಭೈರವ ಆಚರಣೆ ನಡೆಸುವುದು, ಏಕಾದಶಿ ದಿವಸಗಳಲ್ಲಿ ಭಕ್ತರಿಗೆ ಅನ್ನ ಸಂತರ್ಪಣೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಕಳೆದ ಏಳು ತಿಂಗಳುಗಳಿಂದ ರಾಜ್ಯ ಧಾರ್ಮಿಕ ಪರಿಷತ್ ಸಭೆ ನಡೆಸದೆ ರಾಜ್ಯ ಧಾರ್ಮಿಕ ಪರಿಷತ್ ಸಂಪೂರ್ಣ ನಿಷ್ಕ್ರಿಯಗೊಂಡಿದೆ. ಹೀಗಾಗಿ ಮುಜರಾಯಿ ಸಚಿವರು ತಕ್ಷಣ ರಾಜ್ಯ ಧಾರ್ಮಿಕ ಪರಿಷತ್ ಸಭೆ ನಡೆಸಿ ದೇವಾಲಯಗಳ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ರಾಜ್ಯ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಗೆ ಒಳಪಟ್ಟ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿ ರಚನೆ, ಪೂಜಾ ವಿಧಿವಿಧಾನ, ಧಾರ್ಮಿಕ ಆಚರಣೆಗಳು, ಇನ್ನಿತರ ಸಮಸ್ಯೆಗಳು, ದೂರುಗಳ ಬಗ್ಗೆ ಸೂಕ್ತವಾದ ಕ್ರಮ ಕೈಗೊಳ್ಳುವ ಅಧಿಕಾರ ರಾಜ್ಯ ಧಾರ್ಮಿಕ ಪರಿಷತ್‌ಗೆ ಇದೆ. ಮುಜರಾಯಿ ಸಚಿವರು ಇದರ ಅಧ್ಯಕ್ಷರಾಗಿರುತ್ತಾರೆ. ಕಳೆದ ಡಿಸೆಂಬರ್ ತಿಂಗಳ ನಂತರ ಇದುವರೆಗೆ ರಾಜ್ಯ ಧಾರ್ಮಿಕ ಪರಿಷತ್ ಸಭೆ ನಡೆದಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.
ರಾಜ್ಯ ಧಾರ್ಮಿಕ ಪರಿಷತ್ ಸಭೆಯನ್ನು ಪ್ರತಿ ತಿಂಗಳಿಗೊಮ್ಮೆ ನಡೆಸಿ, ರಾಜ್ಯದ ಪ್ರಮುಖ ಹಿಂದೂ ದೇವಾಲಯಗಳ ಬೇರೆ ಬೇರೆ ಸಮಸ್ಯೆ ವಿಚಾರಗಳಲ್ಲಿ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುವುದು ರಾಜ್ಯ ಧಾರ್ಮಿಕ ಪರಿಷತ್‌ನ ಅಧ್ಯಕ್ಷರೂ ಆಗಿರುವ ಮುಜರಾಯಿ ಸಚಿವರ ಕರ್ತವ್ಯವಾಗಿರುತ್ತದೆ. ಆದರೆ ಕಳೆದ ಏಳು ತಿಂಗಳುಗಳಿಂದ ರಾಜ್ಯ ಧಾರ್ಮಿಕ ಪರಿಷತ್‌ನ ಸಭೆ ನಡೆಯದೆ ನಿಷ್ಕ್ರಿಯಗೊಂಡು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಸೇರಿ ರಾಜ್ಯದ ಹಲವು ದೇವಸ್ಥಾನಗಳ ಸಮಸ್ಯೆ ವಿವಾದಗಳನ್ನು ನನೆಗುದಿಗೆ ಇರಿಸಲಾಗಿದೆ. ಇದಕ್ಕೆ ಮುಜರಾಯಿ ಸಚಿವರು ನೇರ ಹೊಣೆಯಾಗಿದ್ದಾರೆ. ಕೂಡಲೇ ಧಾರ್ಮಿಕ ಪರಿಷತ್ ಸಭೆ ನಡೆಸಿ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ | ಮದುವೆ ಮನೆಯಲ್ಲಿ ಕಳೆದುಹೋದ ಚಿನ್ನದ ಸರ ದೇವಸ್ಥಾನದಲ್ಲಿ ಸಿಕ್ತು: ಪಡುಬಿದ್ರಿಯ ಪವಾಡ !