ಬೆಂಗಳೂರು : ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಯೋಜನೆಯಡಿ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳ ವಿವಿಧ ಕಾರ್ಯಕ್ರಮಗಳಿಗೆ ಪ್ರಸಕ್ತ ಸಾಲಿನಲ್ಲಿ 28,000 ಕೋಟಿ ರೂಪಾಯಿ ಬಿಡುಗಡೆಗೆ ಅನುಮೋದನೆ ನೀಡಲಾಗಿದ್ದು, ಗಂಗಾ ಕಲ್ಯಾಣ ಯೋಜನೆಯಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ನಗರದಲ್ಲಿ ಶುಕ್ರವಾರ ಅನುಸೂಚಿತ ಜಾತಿ, ಅನುಸೂಚಿತ ಬುಡಕಟ್ಟುಗಳ ರಾಜ್ಯ ಅಭಿವೃದ್ಧಿ ಪರಿಷತ್ತಿನ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಸಭೆಯಲ್ಲಿ ಕಳೆದ ವರ್ಷದ ಅನುದಾನದಲ್ಲಿ ಎಷ್ಟು ಬಳಕೆಯಾಗಿದೆ ಹಾಗೂ ಎಷ್ಟು ಬಾಕಿ ಇದೆ ಎನ್ನುವುದನ್ನು ಪರಿಶೀಲನೆ ಮಾಡಲಾಗಿದೆ. ಕೆಲವು ಯೋಜನೆಗಳಿಗೆ ಮಾತ್ರ ಬದಲಾವಣೆ ಮಾಡಿ ಉಳಿದವುಗಳಿಗೆ ಅನುಮೋದನೆ ನೀಡಲಾಗಿದೆ. ಬಜೆಟ್‌ನಲ್ಲಿ ಇದಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಸಭೆಯಲ್ಲಿ ಉನ್ನತ ಮಟ್ಟದ ಪರಿಷತ್ತಿನ ಅನುಮೋದನೆ ದೊರೆತಿದೆ ಎಂದರು.
ಸಮಾಜ ಕಲ್ಯಾಣ ಇಲಾಖೆಗೆ 500 ಕೋಟಿ ಹೆಚ್ಚುವರಿ, ಕೃಷಿ ಇಲಾಖೆಗೆ 851 ಕೋಟಿ ರೂ.ಗಳಿದ್ದ ಅನುದಾನವನ್ನು 1061 ಕೋಟಿ ರೂ.ಗಳಿಗೆ ಏರಿಸಲಾಗಿದೆ. ತೋಟಗಾರಿಕೆ ಇಲಾಖೆ ಅನುದಾನವನ್ನು 142 ಕೋಟಿ ರೂ.ಗಳಿಂದ 187 ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ. ಆರೋಗ್ಯ ಇಲಾಖೆ ಅನುದಾನವನ್ನು 899 ಕೋಟಿ ರೂ.ಗಳಿಂದ 1,300 ಕೋಟಿ ರೂ. ಹೆಚ್ಚಳ ಮಾಡಲಾಗಿದೆ. ಸಹಕಾರ ಇಲಾಖೆಯಲ್ಲಿ ಎಸ್ಸಿ ಎಸ್ಟಿ ಸಮುದಾಯದ ಜನರಿಗೆ ಸದಸ್ಯತ್ವ ನೀಡಲು 203 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಕಂದಾಯ ಇಲಾಖೆಯಲ್ಲಿ ಪಿಂಚಣಿಗಳ ಮೊತ್ತ ಹೆಚ್ಚಳ ಮಾಡಿದ್ದು, ಕಳೆದ ವರ್ಷ 2,900 ಕೋಟಿ ರೂ.ಗಳಿದ್ದ ಅನುದಾನವನ್ನು ಈ ಬಾರಿ 3,748 ಕೋಟಿ ರೂ.ಅನುದಾನ ಒದಗಿಸಲಾಗಿದೆ. ಕೌಶಲ್ಯಾಭಿವೃದ್ಧಿಗೆ 180 ಕೋಟಿ ರೂ. ಒದಗಿಸಲಾಗಿದೆ, ಗಂಗಾ ಕಲ್ಯಾಣ ಯೋಜನೆಯಡಿ 9,000 ಕೋಟಿ ರೂ.ಅನುದಾನಕ್ಕೆ ಅನುಮೋದನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಉಚಿತ ಬಸ್ ಪಾಸ್
ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಾಜ್ಯದಲ್ಲಿ ಪ್ರವಾಸ ಮಾಡಿದ್ದ ಸ್ಥಳಗಳ ಅಭಿವೃದ್ಧಿಗೆ ಒಟ್ಟು 20 ಕೋಟಿ ರೂ.,ಮೀಸಲಿಡಲಾಗಿದೆ. ಎಸ್ಟಿ, ಎಸ್ಟಿ ಮಕ್ಕಳಿಗೆ ಉಚಿತ ಬಸ್ ಪಾಸ್ ಸಂಪೂರ್ಣ ನೀಡಲು ತೀರ್ಮಾನಿಸಲಾಗಿದೆ. ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಅನುದಾನವನ್ನು ನೀಡುವುದಲ್ಲದೆ, ನಿಗಮ ಮಂಡಳಿಗಳಿಗೂ ಅನುದಾನ ಒದಗಿಸಲಾಗಿದೆ. ಇದನ್ನೂ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. ಮಲೆನಾಡು ಅಭಿವೃದ್ಧಿ ಮಂಡಳಿ, ಬಯಲುಸೀಮೆ ಅಭಿವೃದ್ಧಿ ಮಂಡಳಿ ಮತ್ತು ಕರಾವಳಿ ಅಭಿವೃದ್ಧಿ ಮಂಡಳಿಯ ಶಾಸಕರಿಗೆ ಒಂದು ಕೋಟಿ ರೂ.ಗಳನ್ನು ನೀಡಲಾಗುವುದು. ಹಿಂದಿನ ಸರ್ಕಾರ ಅನುದಾನ ಒದಗಿಸುವುದಾಗಿ ಘೋಷಣೆ ಮಾಡಿತ್ತು. ಅನುದಾನ ಒದಗಿಸಿ ಕ್ರಿಯಾ ಯೋಜನೆ ರೂಪಿಸಲು ಅನುಮತಿ ನೀಡಲಾಗಿದೆ ಎಂದರು.
ಇದನ್ನೂ ಓದಿ | ನೀರು ನುಗ್ಗಿರುವ ಮನೆಗಳಿಗೆ ₹25,000 ಪರಿಹಾರ: CM ಬಸವರಾಜ ಬೊಮ್ಮಾಯಿ