ಬೆಂಗಳೂರು: ಶಾಲಾ ಶಿಕ್ಷಣದಲ್ಲಿ ಮೌಲ್ಯ ಶಿಕ್ಷಣವನ್ನು (Moral education) ಅನುಷ್ಠಾನಗೊಳಿಸುವ ಉದ್ದೇಶದೊಂದಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವತಿಯಿಂದ ಸೋಮವಾರ (ಜ.9) ಹಮ್ಮಿಕೊಳ್ಳಲಾಗಿರುವ ದುಂಡು ಮೇಜಿನ ಸಮಾಲೋಚನಾ ಸಭೆಗೆ ಕೊನೇ ಘಳಿಗೆಯಲ್ಲಿ ಮುಸ್ಲಿಂ, ಕ್ರೈಸ್ತ ಹಾಗೂ ಜೈನ ಧರ್ಮ ಗುರುಗಳಿಗೆ ಆಹ್ವಾನ ನೀಡಲಾಗಿದ್ದು, ಹಲವರು ಶಿಕ್ಷಣ ತಜ್ಞರು, ಧರ್ಮ ಗುರುಗಳ ಸಹಿತ ಸಭೆ ಆರಂಭವಾಗಿದೆ.
ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅಧ್ಯಕ್ಷತೆಯಲ್ಲಿ ಸಭೆ ಆರಂಭವಾಗಿದ್ದು, ಶಿಕ್ಷಣ ತಜ್ಞ ಪ್ರೊಫೆಸರ್ ಎಂ.ಕೆ ಶ್ರೀಧರ್, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮೀಜಿ, ಪ್ರಮುಖ ಕ್ರಿಚ್ಚಿಯನ್ ಮುಖಂಡರು, ಮೌಲ್ವಿಗಳು, ಪ್ರಮುಖ ಶಿಕ್ಷಣ ತಜ್ಞರಾದ ಪ್ರೊಫೆಸರ್ ಎಂ.ಕೆ ಶ್ರೀಧರ್, ರಾಮಯ್ಯ ಸಂಸ್ಥೆಯ ಜಯರಾಂ, ತೇಜಸ್ವಿನಿ ಅನಂತ್ ಕುಮಾರ್, ಕಸ್ತೂರಿ ರಂಗನ್ ಸೇರಿದಂತೆ 67 ಮಂದಿ ಭಾಗಿಯಾಗಿದ್ದಾರೆ.
ಕೊನೇ ಘಳಿಗೆಯಲ್ಲಿ ಆಹ್ವಾನ
ಈ ಸಭೆಗೆ ಸರ್ವ ಧರ್ಮ ಗುರುಗಳನ್ನು ಕರೆಯುವುದಾಗಿ ಶಿಕ್ಷಣ ಇಲಾಖೆ ಹೇಳಿಕೊಂಡಿದ್ದು, ಹಿಂದು ಸ್ವಾಮೀಜಿಯವರನ್ನು ಬಿಟ್ಟರೆ ಇದುವರೆಗೂ ಮುಸ್ಲಿಂ, ಕ್ರೈಸ್ತ, ಜೈನ ಧರ್ಮ ಗುರುಗಳನ್ನು ಕರೆದಿಲ್ಲ ಎಂಬ ಆರೋಪವು ಭಾನುವಾರ (ಜ. ೯) ರಂದು ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ನಡೆ ಭಾರಿ ಚರ್ಚೆಗೆ ಹಾಗೂ ವಿವಾದಕ್ಕೆ ಗುರಿಯಾಗಿತ್ತು. ಇದರಿಂದ ಎಚ್ಚೆತ್ತ ಶಿಕ್ಷಣ ಇಲಾಖೆಯು ಕೊನೇ ಘಳಿಗೆಯಲ್ಲಿ ಮುಸ್ಲಿಂ, ಕ್ರಿಶ್ಚಿಯನ್, ಜೈನ ಸೇರಿದಂತೆ ಇತರೆ ಧರ್ಮದ ಗುರುಗಳನ್ನು ಸಭೆಗೆ ಆಹ್ವಾನಿಸಿದೆ. ಈಗ ಹಲವಾರು ಮಂದಿ ಸಭೆಯಲ್ಲಿ ಪಾಲ್ಗೊಂಡಿದ್ದಾರೆ.
ಈ ಬಗ್ಗೆ ಸೋಮವಾರ (ಜ. ೯) ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿರುವ ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ಮೌಲ್ಯಗಳನ್ನು ಧರ್ಮದ ಜತೆ ಸೇರಿಸಬೇಡಿ. ಮೌಲ್ಯಗಳೇ ಬೇರೆ, ಧರ್ಮವೇ ಬೇರೆ. ಶಿಕ್ಷಣ ವ್ಯವಸ್ಥೆಯಲ್ಲಿ ಮೌಲ್ಯ ಯಾವ ರೀತಿ ತರಬೇಕು ಎಂಬುದನ್ನು ಚರ್ಚೆ ನಡೆಸಲು ಈ ಸಭೆಯನ್ನು ಕರೆಯಲಾಗಿದೆ. ಸ್ವಾಮೀಜಿಗಳು, ಮಠಾಧೀಶರನ್ನು ಮಾತ್ರ ಸಭೆಗೆ ಕರೆದಿಲ್ಲ. ಶಿಕ್ಷಣ ತಜ್ಞರು, ವಿದ್ಯಾರ್ಥಿಗಳನ್ನೂ ಸಭೆಗೆ ಕರೆದಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ | Suicide Case | ಕುಟುಂಬ ಕಲಹಕ್ಕೆ ಬೇಸತ್ತು ರೈಲಿನಡಿ ಸಿಲುಕಿ ವ್ಯಕ್ತಿ ಆತ್ಮಹತ್ಯೆಗೆ ಶರಣು