ಬೆಂಗಳೂರು: ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಂಲೆಂಜರ್ಸ್ ಬೆಂಗಳೂರು ವಿರುದ್ಧದ ಭಾನುವಾರದ ಐಪಿಎಲ್(IPL 2023) ಪಂದ್ಯವನ್ನು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(siddaramaiah) ಅವರು ವೀಕ್ಷಿಸಿದ್ದಾರೆ. ಚಿನ್ನಸ್ವಾಮಿಯಲ್ಲಿ ಪಂದ್ಯ ವೀಕ್ಷಿಸುತ್ತಿರುವ ಫೋಟೊವನ್ನು ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದಾರೆ. ಈ ಫೋಟೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಕ್ರಿಕೆಟ್ ನನ್ನ ಇಷ್ಟದ ಆಟ, ಆರ್‌ಸಿಬಿ ನನ್ನ ಹೆಮ್ಮೆಯ ತಂಡ.. ನನ್ನಂತಹ ಕೋಟ್ಯಂತರ ಅಭಿಮಾನಿಗಳ ಹಾರೈಕೆ ಆರ್.ಸಿ.ಬಿ ಹುಡುಗರ ಜತೆಗಿದೆ.. ಇಂದಲ್ಲ ನಾಳೆ ನಮ್ಮವರೂ ಕಪ್ ಗೆಲ್ಲುತ್ತಾರೆ ಎಂಬ ವಿಶ್ವಾಸ ನನಗಿದೆ. ಓರ್ವ ಕನ್ನಡಿಗನಾಗಿ ನನ್ನ ಬೆಂಬಲ ಯಾವಾಗಲೂ ನಮ್ಮ ಆರ್‌ಸಿಬಿಗೆ ತಂಡಕ್ಕೆ ಎಂದು ಟ್ವೀಟ್ ಮೂಲಕ ಆರ್‌ಸಿಬಿ ತಂಡಕ್ಕೆ ಸಿದ್ದರಾಮಯ್ಯ ಬೆಂಬಲ ಸೂಚಿಸಿದ್ದಾರೆ. ಚುನಾವಣ ಪ್ರಚಾರದ ಮಧ್ಯೆಯೂ ಬಿಡುವು ಮಾಡಿಕೊಂಡು ಕನ್ನಡಿಗರ ನೆಚ್ಚಿನ ತಂಡವಾದ ಆರ್‌ಸಿಬಿಗೆ ಓರ್ವ ಅಪ್ಪಟ ಕನ್ನಡಿಗನಾಗಿ ಸಿದ್ದರಾಮಯ್ಯ ಅವರು ಬೆಂಬಲ ಸೂಚಿಸಿದ್ದಾರೆ. ಅವರ ಈ ನಡೆಗೆ ಇದೀಗ ನೆಟ್ಟಿಗರು ಭಾರಿ ಮೆಚ್ಚುಗೆ ವ್ಯಕ್ಯಪಡಿಸಿದ್ದಾರೆ.
ಅಜೇಯ ಅರ್ಧಶತಕ ಬಾರಿಸಿ ಮಿಂಚಿದ ತಿಲಕ್ ವರ್ಮ
ನಂಬುಗೆಯ ಬ್ಯಾಟರ್ಗಳೆಲ್ಲ ಔಟಾದಾಗ ಟೊಂಕ ಕಟ್ಟಿ ನಿಂತ ತಿಲಕ್ ವರ್ಮ ಮುಂಬೈ ತಂಡಕ್ಕೆ ಆಸರೆಯಾದರು. ಇವರಿಗೆ ಯುವ ಆಟಗಾರ ನಿಹಾಲ್ ವಧೀರಾ ಕೆಳ ಕ್ರಮಾಂಕದಲ್ಲಿ ಉತ್ತಮ ಸಾಥ್ ನೀಡಿದರು. ಬಿರುಸಿನ ಬ್ಯಾಟಿಂಗ್ ನಡೆಸಿದ ವಧೀರಾ ಅವರು ಕರಣ್ ಶರ್ಮ ಅವರಿಗೆ ಸತತ ಸಿಕ್ಸರ್ ಸಿಡಿಸಿ ಮಿಂಚಿದರು. ಇದರಲ್ಲೊಂದು ಸಿಕ್ಸ್ ಸ್ಟೇಡಿಯಂನಿಂದ ಹೊರಕ್ಕೆ ಚಿಮ್ಮಿತು. ಈ ವೇಳೆ ಅವರು ಅಪಾಯಕಾರಿಯಾಗುವ ಸೂಚನೆಯೊಂದು ಲಭಿಸಿತು. ಆದರೆ ಆತ್ಮವಿಶ್ವಾಸ ಕಳೆದುಕೊಳ್ಳದ ಕರಣ್ ಶರ್ಮ ಮುಂದಿನ ಎಸೆತದಲ್ಲಿ ವಿಕೆಟ್ ಉಡಾಯಿಸುವಲ್ಲಿ ಯಶಸ್ವಿಯಾದರು. ವಧೀರಾ 21 ರನ್ ಗಳಿಸಿದರು.
ತಿಲಕ್ ವರ್ಮ ಮತ್ತೊಂದು ಬದಿಯಲ್ಲಿ ಆರ್‌ಸಿಬಿ ದಾಳಿಯನ್ನು ಸಮರ್ಥವಾಗಿ ಎದುರಿಸಿ ಅರ್ಧಶತಕ ಬಾರಿಸಿ ತಂಡದ ಪಾಲಿಗೆ ಆಪದ್ಬಾಂಧವರಾದರು. ಇವರ ಈ ಏಕಾಂಗಿ ಹೋರಾಟದಿಂದ ತಂಡ ಸ್ಪರ್ಧಾತ್ಮಕ ಮೊತ್ತ ಪೇರಿಸುವಲ್ಲಿ ಯಶಸ್ಸು ಕಂಡಿತು. 46 ಎಸೆತ ಎದುರಿಸಿದ ಅವರು ಬರೋಬ್ಬರಿ ನಾಲ್ಕು ಸಿಕ್ಸರ್ ಮತ್ತು 9 ಬೌಂಡರಿ ನೆರವಿನಿಂದ ಅಜೇಯ 84 ರನ್ ಬಾರಿಸಿದರು.
ಬ್ಯಾಟಿಂಗ್ ಆಹ್ವಾನ ಪಡೆದ ಮುಂಬೈ ಆರಂಭದಲ್ಲೇ ಸತತ ವಿಕೆಟ್ ಕಳೆದುಕೊಂಡಿತು. ಮೊಹಮ್ಮದ್ ಸಿರಾಜ್ ಅವರು ಇಶಾನ್ ಕಿಶನ್ ವಿಕೆಟ್ ಕಿತ್ತು ಆರ್‌ಸಿಬಿಗೆ ಮೊದಲ ಮುನ್ನಡೆ ತಂದುಕೊಟ್ಟರು. ಮುಂದಿನ ಓವರ್ನಲ್ಲಿ ರೇಸ್ ಟಾಪ್ಲಿ ಕ್ಯಾಮರೂನ್ ಗ್ರೀನ್ ವಿಕೆಟ್ ಉರುಳಿಸಿದರು. ಗ್ರೀನ್ 5 ರನ್ ಗಳಿಸಿದರೆ ಇಶಾನ್ ಕಿಶನ್ 11 ರನ್ ಬಾರಿಸಿದರು. ಸಿರಾಜ್ ಓವರ್ನಲ್ಲಿ ಜೀವದಾನ ಪಡೆದ ರೋಹಿತ್ ಈ ಅವಕಾಶವನ್ನು ಬಳಸಿಕೊಳ್ಳುವಲ್ಲಿ ವಿಫಲರಾದರು. ಆಕಾಶ್ ದೀಪ್ ಅವರ ಮುಂದಿನ ಓವರ್ನಲ್ಲಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಅವರಿಗೆ ಕ್ಯಾಚ್ ನೀಡಿ ಒಂದು ರನ್ಗೆ ಸೀಮಿತರಾದರು. ತಂಡದ ಮೊತ್ತ 50 ಆಗುವ ಮುನ್ನವೇ ನಾಲ್ಕು ವಿಕೆಟ್ ಕಳೆದುಕೊಂಡು ಮುಂಬೈ ಶೋಚನೀಯ ಸ್ಥಿತಿ ಕಂಡಿತು. ಟಿ20 ನಂ.1 ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರ ಬ್ಯಾಟ್ ಈ ಪಂದ್ಯದಲ್ಲಿ ಸದ್ದು ಮಾಡಲಿಲ್ಲ. ರನ್ ಗಳಿಸಲು ಪರದಾಡಿದ ಅವರು 16 ಎಸೆತ ಎದುರಿಸಿ 15 ರನ್ ಬಾರಿಸಲಷ್ಟೇ ಶಕ್ತರಾದರು.