ಬೆಂಗಳೂರು: ಐಪಿಎಲ್ (IPL 2023) ಫೀವರ್ ಶುರುವಾಗಿದ್ದು, ಕ್ರೀಡಾ ಪ್ರೇಮಿಗಳ ಹಾಟ್ ಫೇವರಿಟ್ ಆಗಿರುವ ಈ ಚುಟುಕು ಪಂದ್ಯದಲ್ಲಿ ಬೆಂಗಳೂರಿಗರು ಸೇರಿದಂತೆ ರಾಜ್ಯದವರಿಗೆ ರಾಯಲ್ ಚ್ಯಾಲೆಂಜರ್ಸ್ ಬೆಂಗಳೂರು (Royal challengers bangalore) ನೆಚ್ಚಿನ ತಂಡವಾಗಿದೆ. ಆದರೆ, ಇದನ್ನೇ ದುರ್ಬಳಕೆ ಮಾಡಿಕೊಳ್ಳುತ್ತಿರುವ ಕಿಡಿಗೇಡಿಗಳು ನಕಲಿ ಟಿಕೆಟ್‌ಗಳನ್ನು ಸೃಷ್ಟಿಸಿ ದುಬಾರಿ ಬೆಲೆ ಮಾರಾಟ ಮಾಡುತ್ತಿರುವುದು ವರದಿ ಆಗಿದೆ. ಹೀಗಾಗಿ ಸೋಮವಾರ ನಡೆಯುವ ಪಂದ್ಯಕ್ಕೆ ಖಾಕಿ ಪಡೆ ಅಲರ್ಟ್ ಆಗಿದೆ.
ಕಳೆದ ಏಪ್ರಿಲ್ 2ರಂದು ನಡೆದಿದ್ದ ಮುಂಬೈ ಹಾಗೂ ಆರ್‌ಸಿಬಿ ಕ್ರಿಕೆಟ್ ಪಂದ್ಯದಲ್ಲಿ 7 ಸಾವಿರಕ್ಕೂ ಅಧಿಕ ನಕಲಿ ಟಿಕೆಟ್ ಮಾರಾಟವಾಗಿತ್ತು. ಈ ನಕಲಿ ಟಿಕೆಟ್ ದಂಧೆ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೆ ಬೆಂಗಳೂರು ನಗರ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ಮುಂಬೈ-ಆರ್‌ಸಿಬಿ ತಂಡದ ಮ್ಯಾಚ್‌ನಲ್ಲಿ ಹಲವು ಟಿಕೆಟ್‌ಗಳು ಸ್ಕ್ಯಾನ್ ಆಗುತ್ತಿರಲಿಲ್ಲ. ಮೊದಮೊದಲು ಇದು ತಾಂತ್ರಿಕ ದೋಷ ಇರಬಹುದೆಂದು ಭದ್ರತಾ ಸಿಬ್ಬಂದಿ ಕ್ರೀಡಾಭಿಮಾನಿಗಳನ್ನು ಒಳಗಡೆ ಬಿಟ್ಟಿದ್ದರು.
ಆದರೆ ಒಟ್ಟು 33 ಸಾವಿರ ಸೀಟುಗಳ ಬದಲಿಗೆ 40 ಸಾವಿರ ಟಿಕೆಟ್ ಮಾರಾಟವಾಗಿತ್ತು. ಆ ಬಳಿಕ ಇದು ನಕಲಿ ಟಿಕೆಟ್ ದಂಧೆಕೋರರ ಕರಾಮತ್ತು ಎಂಬುದು ತಿಳಿದು ಬಂದಿತ್ತು. ಈ ಬಗ್ಗೆ ಕಬ್ಬನ್‌ಪಾರ್ಕ್‌ನಲ್ಲಿ ಪ್ರಕರಣವನ್ನು ದಾಖಲು ಮಾಡಲಾಗಿತ್ತು. ಬ್ಲ್ಯಾಕ್‌ನಲ್ಲಿ ಟಿಕೆಟ್ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಕೃತ್ಯವನ್ನು ಒಪ್ಪಿಕೊಂಡಿದ್ದಾರೆ.
ಸದ್ಯ, ಏ.10ರ ಸೋಮವಾರದಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಲಕ್ನೋ ಸೂಪರ್ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಕ್ರಿಕೆಟ್ ಪಂದ್ಯ ನಡೆಯಲಿದೆ. ಹೀಗಾಗಿ ಕೇಂದ್ರ ವಿಭಾಗ ಡಿಸಿಪಿ ಶ್ರೀನಿವಾಸ ಗೌಡ ಅವರು ಪಂದ್ಯಕ್ಕೆ ಮಫ್ತಿಯಲ್ಲಿ ಸುಮಾರು 200 ಜನಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಿದ್ದಾರೆ. ಯಾರಾದರೂ ಟಿಕೆಟ್ ಮಾರಾಟ ಮಾಡಲು ಬಂದರೂ, ಬ್ಲಾಕ್‌ನಲ್ಲಿ ಟಿಕೆಟ್ ತೆಗೆದುಕೊಳ್ಳುವವರಿಗೂ ಬಿಸಿ ಮುಟ್ಟಿಸಲಿದ್ದಾರೆ.
ರಜತ್ ಪಾಟೀದಾರ್ ಬದಲು ಆರ್‌ಸಿಬಿ ಸೇರಿದ ಕನ್ನಡಿಗ ವೈಶಾಖ್
ಪಾದದ ನೋವಿಗೆ ಒಳಗಾಗಿ ಐಪಿಎಲ್ ಟೂರ್ನಿಯಿಂದ ಹೊರಬಿದ್ದ ರಜತ್ ಪಾಟೀದಾರ್ ಬದಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕನ್ನಡಿಗನಿಗೆ ಮಣೆ ಹಾಕಿದೆ. ಬದಲಿ ಆಟಗಾರನಾಗಿ ಕರ್ನಾಟಕ ತಂಡದ ಪ್ರಮುಖ ವೇಗಿ ಬೌಲರ್ ವೈಶಾಖ್ ವಿಜಯ್ ಕುಮಾರ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಇದರೊಂದಿಗೆ ಆರ್‌ಸಿಬಿ ತಂಡದಲ್ಲಿ ಇಬ್ಬರು ಕನ್ನಡಿಗರು ಸೇರ್ಪಡೆಯಾದಂತಾಗಿದೆ. ಇದಕ್ಕೂ ಮುನ್ನ ಹರಾಜಿನ ಮೂಲಕ ಆರ್‌ಸಿಬಿ ಫ್ರಾಂಚೈಸಿಯು ಯುವ ಆಟಗಾರ ಮನೋಜ್ ಭಾಂಡಗೆ ಅವರನ್ನು ಖರೀದಿಸಿತ್ತು.
ರಜತ್ ಪಾಟೀದಾರ್ ಅವರು ಪಾದದ ಗಾಯದಿಂದ ಸಂಪೂರ್ಣವಾಗಿ ಗುಣಮುಖರಾಗದ ಕಾರಣ ಐಪಿಎಲ್ ಟೂರ್ನಿಯಿಂದ (IPL 2023) ಹೊರ ನಡೆದಿದ್ದರು. ಆದರೆ ಆರ್‌ಸಿಬಿ ಯಾವುದೇ ಆಟಗಾರನನ್ನು ಬದಲಿಯಾಗಿ ಆಯ್ಕೆ ಮಾಡಿಕೊಂಡಿರಲಿಲ್ಲ. ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಕಳಪೆ ಬೌಲಿಂಗ್ ನಡೆಸಿ ಸೋಲು ಕಂಡ ಬೆನ್ನಲ್ಲೇ ಕನ್ನಡಿಗ ವೈಶಾಖ್ ವಿಜಯಕುಮಾರ್ ಅವರನ್ನು ಪಾಟೀದಾರ್ ಬದಲಿಗೆ ತಂಡಕ್ಕೆ ಆಯ್ಕೆ ಮಾಡಿದೆ.
26 ವರ್ಷದ ಕರ್ನಾಟಕ ತಂಡದ ಪ್ರಮುಖ ವೇಗಿ ಆಗಿರುವ ವೈಶಾಖ್ ಇದುವರೆಗೆ 10 ಪ್ರಥಮ ದರ್ಜೆ ಪಂದ್ಯಗಳಿಂದ ಒಟ್ಟು 38 ವಿಕೆಟ್ ಕಬಳಿಸಿದ್ದಾರೆ. 7 ಲೀಸ್ಟ್ ‘ಎ’ ಪಂದ್ಯಗಳಿಂದ 11 ವಿಕೆಟ್, 14 ಟಿ20 ಪಂದ್ಯಗಳಿಂದ 22 ವಿಕೆಟ್ ಪಡೆದಿದ್ದಾರೆ. ವೈಶಾಖ್ ಈ ಹಿಂದೆ ಕರ್ನಾಟಕ, ಮಂಗಳೂರು ಯುನೈಟೆಡ್ ಹಾಗೂ ಮೈಸೂರು ವಾರಿಯರ್ಸ್ ಪರ ಕಣಕ್ಕಿಳಿದಿದ್ದರು. ಐಪಿಎಲ್ನಲ್ಲಿ ಚೊಚ್ಚಲ ಅವಕಾಶ ಪಡೆದ ಅವರು ಪ್ಲೇಯಿಂಗ್ ಇಲೆವೆನ್ನಲ್ಲಿ ಕಾಣಿಸಿಕೊಳ್ಳಲಿದ್ದಾರಾ ಎಂದು ಕಾದು ನೋಡಬೇಕಿದೆ.
ಟಾಪ್ಲಿ ಬದಲು ಪಾರ್ನೆಲ್
ಮುಂಬಯಿ ಇಂಡಿಯನ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಆಡುವ ವೇಳೆ ಫೀಲ್ಡಿಂಗ್ ಮಾಡುತ್ತಿದ್ದ ಟಾಪ್ಲಿ ಆಯ ತಪ್ಪಿ ನೆಲಕ್ಕೆ ಬಿದ್ದಿದ್ದರು. ಈ ವೇಳೆ ಅವರ ಬಲಗೈ ಭುಜದ ಮೂಳೆ ಕಳಚಿಕೊಂಡಿತ್ತು. ವೈದ್ಯಕೀಯ ತಂಡ ಅವರಿಗೆ ಚಿಕಿತ್ಸೆ ನೀಡಿದರೂ ಟೂರ್ನಿಯಲ್ಲಿ ಆಡಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಇಂಗ್ಲೆಂಡ್ಗೆ ವಾಪಸಾಗಿದ್ದಾರೆ. ಅವರ ಬದಲು ವೇಯ್ನ್ ಪಾರ್ನೆಲ್ ಬದಲಿ ಆಟಗಾರನಾಗಿ ಆರ್‌ಸಿಬಿ ತಂಡ ಸೇರಿದ್ದಾರೆ.
ಎಡಗೈ ವೇಗಿ ವೇಯ್ನ್ ಪಾರ್ನೆಲ್ ಈ ಹಿಂದೆಯೂ ಐಪಿಎಲ್ ಆಡಿದ್ದರು. ಆದರೆ, ಹಾಲಿ ಆವೃತ್ತಿಯ ಐಪಿಎಲ್ನ ಹರಾಜಿನಲ್ಲಿ ಅವರಿಗೆ ಅವಕಾಶ ಸಿಕ್ಕಿರಲಿಲ್ಲ. ಇದೀಗ ಟೋಪ್ಲೆ ಜಾಗವನ್ನು ಭರ್ತಿ ಮಾಡುವ ಅವಕಾಶ ದೊರಕಿದೆ. ಪುಣೆ ವಾರಿಯರ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರವಾಗಿ ಐಪಿಎಲ್ನಲ್ಲಿ ಆಡಿದ್ದ ವೇಯ್ನ್ ಪಾರ್ನೆಲ್ ಅವರು 26 ಪಂದ್ಯಗಳಲ್ಲಿ 26 ವಿಕೆಟ್ಗಳನ್ನು ಕಿತ್ತಿದ್ದಾರೆ. 27 ರನ್ಗಳ ವೆಚ್ಚದಲ್ಲಿ 3 ವಿಕೆಟ್ ಪಡೆದಿರುವುದು ಐಪಿಎಲ್ನ ಅತ್ಯುತ್ತಮ ಸಾಧನೆಯಾಗಿದೆ.
ಇದನ್ನೂ ಓದಿ: IPL 2023: ವಿರಾಟ್ ಕೊಹ್ಲಿಯ ಐಪಿಎಲ್ ದಾಖಲೆ ಮುರಿದ ಡೇವಿಡ್ ವಾರ್ನರ್
ಆರ್‌ಸಿಬಿ ತಂಡ: ಫಾಪ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ದಿನೇಶ್ ಕಾರ್ತಿಕ್, ಅನೂಜ್ ರಾವತ್, ಫಿನ್ ಅಲೆನ್, ಜೋಶ್ ಹ್ಯಾಝಲ್ವುಡ್, ಮೊಹಮ್ಮದ್ ಸಿರಾಜ್, ಕರ್ಣ್ ಶರ್ಮಾ, ಸಿದ್ಧಾರ್ಥ್ ಕೌಲ್, ಹಿಮಾಂಶು ಶರ್ಮಾ, ರಜನ್ ಕುಮಾರ್, ಅವಿನಾಶ್ ಸಿಂಗ್, ಗ್ಲೆನ್ ಮ್ಯಾಕ್ಸ್ವೆಲ್, ವನಿಂದು ಹಸರಂಗ, ಮಹಿಪಾಲ್ ಲೋಮ್ರರ್, ಶಹಬಾಜ್ ಅಹ್ಮದ್, ಹರ್ಷಲ್ ಪಟೇಲ್, ಆಕಾಶ್ ದೀಪ್, ಡೇವಿಡ್ ವಿಲ್ಲಿ, ಸುಯಶ್ ಪ್ರಭುದೇಸಾಯಿ, ಮನೋಜ್ ಭಾಂಡಗೆ, ಸೋನು ಯಾದವ್, ಮೈಕೆಲ್ ಬ್ರೇಸ್ವೆಲ್.,ವೈಶಾಖ್ ವಿಜಯಕುಮಾರ್, ವೇಯ್ನ್ ಪಾರ್ನೆಲ್.