ನವ ದೆಹಲಿ: ಜೆಇಇ ಅಡ್ವಾನ್ಸ್ಡ್ ಪರೀಕ್ಷೆ 2022ರ ಫಲಿತಾಂಶವನ್ನು ಇಂದು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಬಿಡುಗಡೆ ಮಾಡಿದೆ. ಹಾಗೇ, ಈ ಪರೀಕ್ಷೆಯ 10 ಜನ ಟಾಪರ್ಸ್ಗಳ ಪಟ್ಟಿಯನ್ನೂ ಪ್ರಕಟಿಸಿದೆ. ಕರ್ನಾಟಕ ಮೂಲದ ಆರ್. ಕೆ.ಶಿಶಿರ್ ಪ್ರಥಮ ಱಂಕ್ ಪಡೆದಿದ್ದಾರೆ. ಇವರು ಐಐಟಿ ಬಾಂಬೆ ಝೋನ್ನಿಂದ ಪರೀಕ್ಷೆ ಬರೆದವರು. ಹಾಗೇ, ಪೋಲು ಲಕ್ಷ್ಮೀ ಸಾಯಿ ಲೋಹಿತ್ ರೆಡ್ಡಿ ಎರಡನೇ ಮತ್ತು ಥಾಮಸ್ ಬಿಜು ಚೀರಂವೇಲಿಲ್ ಮೂರನೇ ಶ್ರೇಯಾಂಕ ಗಳಿಸಿದ್ದಾರೆ. ಅಂದಹಾಗೇ, ಟಾಪ್ 10 ಲಿಸ್ಟ್ನಲ್ಲಿ ಒಬ್ಬರೂ ಹುಡುಗಿಯರಿಲ್ಲ. ಐಐಟಿ ದೆಹಲಿ ಝೋನ್ನ ತನಿಷ್ಕಾ ಕಾಬ್ರಾ 16ನೇ ಱಂಕ್ ಗಳಿಸಿ, ಹುಡುಗಿಯರ ಲಿಸ್ಟ್ನಲ್ಲಿ ಮೊದಲಿಗರಾಗಿದ್ದಾರೆ.
ಇನ್ನುಳಿದಂತೆ ವಂಗಪಲ್ಲಿ ಸಾಯಿ ಸಿದ್ಧಾರ್ಥ 4ನೇ ಶ್ರೇಯಾಂಕ, ಮಯಾಂಕ್ ಮೋಟ್ವಾನಿ 5ನೇ, ಪೋಲಿಸೆಟ್ಟಿ ಕಾರ್ತಿಕೇಯ 6, ಪ್ರತೀಕ್ ಸಾಹೂ ಏಳನೇ, ಧೀರಜ್ ಕುರುಕುಂದಾ ಎಂಟನೇ, ಮಹಿತ್ ಗಂಧಿವಾಲಾ 9 ಮತ್ತು ವೆಚ್ಚ ಜ್ಞಾನ ಮಹೇಶ್ 10ನೇ ಶ್ರೇಯಾಂಕ ಪಡೆದು ಟಾಪರ್ಸ್ ಎನ್ನಿಸಿಕೊಂಡಿದ್ದಾರೆ. ಐಐಟಿ ಜೆಇಇ ಅಡ್ವಾನ್ಸ್ಡ್ ಪರೀಕ್ಷೆ ಫಲಿತಾಂಶವನ್ನು jeeadv.ac.inನಲ್ಲಿ ಬಿಡುಗಡೆ ಮಾಡಲಾಗಿದ್ದು, ಅಂತಿಕ ಕೀ ಉತ್ತರಗಳನ್ನೂ ಪ್ರಕಟಿಸಲಾಗಿದೆ.
ಫಲಿತಾಂಶ ವೀಕ್ಷಣೆ ಹೇಗೆ?
1. ಮೊದಲಿಗೆ jeeadv.ac.in ವೆಬ್ಸೈಟ್ಗೆ ಭೇಟಿ ಕೊಡಿ
2. ಹೋಂ ಪೇಜ್ನಲ್ಲಿ ಕಾಣಿಸುವ JEE Advanced Result ಲಿಂಕ್ ಮೇಲೆ ಕ್ಲಿಕ್ ಮಾಡಿ
3. ನಿಮ್ಮ ಅಪ್ಲಿಕೇಶನ್ ನಂಬರ್, ಹುಟ್ಟಿದ ದಿನಾಂಕ ಸೇರಿ, ಅಲ್ಲಿ ಕೇಳಲಾಗಿರುವ ಎಲ್ಲ ಕ್ರೆಡೆನ್ಷಿಯಲ್ಗಳನ್ನೂ ನಮೂದಿಸಿ.
4. ಅಷ್ಟಾದ ಬಳಿಕ ನಿಮ್ಮ ಫಲಿತಾಂಶವನ್ನು ನೋಡಬಹುದು. ಆ ಅಂಕಪಟ್ಟಿಯನ್ನು ಡೌನ್ಲೋಡ್ ಮಾಡಿಕೊಂಡು, ಪ್ರಿಂಟ್ ತೆಗೆದಿಟ್ಟುಕೊಳ್ಳಿ.
ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯನ್ನು ಆಗಸ್ಟ್ 28ರಂದು ನಡೆಸಲಾಗಿತ್ತು. ನೋಂದಾಯಿಸಿಕೊಂಡಿದ್ದ 160038 ಅಭ್ಯರ್ಥಿಗಳಲ್ಲಿ 155538 ಜನರು ಪರೀಕ್ಷೆಯ ಎರಡೂ ಪೇಪರ್ಗಳನ್ನೂ ಬರೆದಿದ್ದರು. ಇಷ್ಟು ಜನರಲ್ಲಿ ಈಗ 40712 ಮಾತ್ರ ಉತ್ತೀರ್ಣರಾಗಿ, ಮುಂದಿನ ಹಂತ ಕೌನ್ಸಿಲಿಂಗ್ಗೆ ಅರ್ಹತೆ ಪಡೆದಿದ್ದಾರೆ. ಅಂದಹಾಗೇ, ಜೆಇಇ ಅಡ್ವಾನ್ಸ್ಡ್ ಕೌನ್ಸಿಲಿಂಗ್ ನೋಂದಣಿ ಪ್ರಕ್ರಿಯೆಗೆ ಸೆಪ್ಟೆಂಬರ್ 12ರಿಂದ 21ರವರೆಗೆ josaa.nic.in ನಲ್ಲಿ ಅವಕಾಶವಿದೆ.
ಇದನ್ನೂ ಓದಿ: JEE NEET | ಜೆಇಇ, ನೀಟ್ ವಿಲೀನ ಮಾಡಲಾಗುತ್ತದೆಯೇ? ಈ ಕುರಿತು ಕೇಂದ್ರ ಶಿಕ್ಷಣ ಸಚಿವ ಹೇಳಿದ್ದೇನು?