ಬೆಂಗಳೂರು: ನಗರದ ಪ್ರತಿಷ್ಠಿತ ವಿಭಾಗಕ್ಕೆ ಡಿಸಿಪಿ ನೇಮಕವಾಗಿಲ್ಲ. ಸೂಕ್ತ ಐಪಿಎಸ್ ಅಧಿಕಾರಿಗಳು ಇದ್ದರೂ ಕೇಂದ್ರ ವಿಭಾಗದ ಡಿಸಿಪಿ ಸ್ಥಾನವನ್ನು ಕಳೆದ 13 ದಿನಗಳಿಂದ ರಾಜ್ಯ ಸರ್ಕಾರ ಖಾಲಿ ಇಟ್ಟಿದೆ. ಈ ವಿಳಂಬ ಧೋರಣೆಯು ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆಯಾ ಎಂಬ ಅನುಮಾನ ಮೂಡಿಸಿದೆ.
ಮೇ 17ರಂದು ಕೇಂದ್ರ ವಿಭಾಗದ ಡಿಸಿಪಿಯಾಗಿದ್ದ ಎಂ ಎನ್ ಅನುಚೇತ್ ಅವರನ್ನು ವರ್ಗಾವಣೆ ಮಾಡಿ, ಸಿಸಿಬಿ ಡಿಸಿಪಿ ಶರಣಪ್ಪಗೆ ಈ ವಿಭಾಗದ ಉಸ್ತುವಾರಿ ನೀಡಲಾಗಿತ್ತು. ಕಬ್ಬನ್ ಪಾರ್ಕ್, ಅಶೋಕನಗರ, ವಿಧಾನಸೌಧ, ಸದಾಶಿವನಗರ, ಹೈಗ್ರೌಂಡ್ಸ್ ನಂತಹ ಹೆಚ್ಚು ಸೂಕ್ಷ್ಮ ಹಾಗೂ ವಿವಿಐಪಿಗಳಿರುವ ಪ್ರದೇಶವನ್ನು ಕೇಂದ್ರ ವಿಭಾಗ ಹೊಂದಿದೆ. ಆದರೆ ಇಲ್ಲಿಯವರೆಗೂ ಯಾವುದೇ ಡಿಸಿಪಿ ನೇಮಕ ಮಾಡಿಲ್ಲ. ಇಂತಹ ಪ್ರತಿಷ್ಠಿತ ವಿಭಾಗವನ್ನ ಖಾಲಿ ಬಿಟ್ಟಿರುವುದು ಯಾಕೆ? ಇಲ್ಲೂ ವರ್ಗಾವಣೆ ದಂಧೆ ನಡೆಯುತ್ತಿದೆಯಾ ಎನ್ನುವ ಅನುಮಾನ ಸಾರ್ವಜನಿಕ ವಲಯದಲ್ಲಿ ಮೂಡಿದೆ.
ಹಿಜಾಬ್ ತೀರ್ಪು ನ್ಯಾಯಾಧೀಶರಿಗೆ ಬೆದರಿಕೆ ಪ್ರಕರಣ (ವಿಧಾನಸೌಧ ಪೊಲೀಸ್ ಠಾಣೆ), ರಮೇಶ್ ಜಾರಕಿಹೊಳಿ ಪ್ರಕರಣ (ಸದಾಶಿವನಗರ ಹಾಗೂ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ), ಯಡಿಯೂರಪ್ಪ ಮೊಮ್ಮಗಳ ಆತ್ಮಹತ್ಯೆ ಪ್ರಕರಣ (ಹೈಗ್ರೌಂಡ್ಸ್ ಪೊಲೀಸ್ ಠಾಣೆ), ಪಿಎಸ್ಐ ನೇಮಕಾತಿ ಅಕ್ರಮ (ಹೈಗ್ರೌಂಡ್ಸ್ ಪೊಲೀಸ್ ಠಾಣೆ), ಸಿಟಿ ಸಿವಿಲ್ ಕೋರ್ಟ್ ನ್ಯಾಯಾಧೀಶರಿಗೆ ಬೆದರಿಕೆ ಪತ್ರ (ಹಲಸೂರು ಗೇಟ್ ಠಾಣೆ), ಉದ್ಯಮಿ ಕಾರಿಗೆ ಬೆಂಕಿ ಹಚ್ಚಿದ ಪ್ರಕರಣ (ಸದಾಶಿವನಗರ ಠಾಣೆ), ಬ್ರಿಗೇಡ್ ರಸ್ತೆಯಲ್ಲಿ ಯುವಕ ಯುವತಿ ಕಟ್ಟಡದಿಂದ ಹಾರಿದ ಪ್ರಕರಣಗಳಂಥ (ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ) ಸೆನ್ಸೆಷನಲ್ ಪ್ರಕರಣಗಳಿಗೆ ಕೇಂದ್ರ ವಿಭಾಗ ಸಾಕ್ಷಿಯಾಗಿದೆ. ಅಪರಾಧ ಪ್ರಕರಣಗಳ ತಡೆ ಹಾಗೂ ಬಾಕಿ ಉಳಿದ ವಿವಿಧ ಪ್ರಕರಣಗಳ ತನಿಖೆ ವೇಗವಾಗಿ ನಡೆಯಲು ಕೇಂದ್ರ ವಿಭಾಗಕ್ಕೆ ಕಾಯಂ ಡಿಸಿಪಿ ನೇಮಕ ಮಾಡಬೇಕಾಗಿದೆ.
ಇದನ್ನೂ ಓದಿ | ವಂದಿತಾ ಶರ್ಮಾ ರಾಜ್ಯ ಸರಕಾರದ ನೂತನ ಮುಖ್ಯ ಕಾರ್ಯದರ್ಶಿ