ಚಿಕ್ಕಬಳ್ಳಾಪುರ: ನಗರದ ಸಮೀಪದ ಅವಲಗುರ್ಕಿ ಬಳಿ ನಿರ್ಮಾಣವಾಗಿರುವ 112 ಅಡಿ ಎತ್ತರದ ಆದಿಯೋಗಿ ಪ್ರತಿಮೆ (Isha Foundation) ಸ್ಥಳದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ವಿಧಿಸಿದ್ದ ತಡೆಯಾಜ್ಞೆಯನ್ನು ಹೈಕೋರ್ಟ್ ಮುಂದುವರಿಸಿದೆ. ಯತಾಸ್ಥಿತಿ ಕಾಯ್ದುಕೊಳ್ಳುವಂತೆ ಈಶ ಫೌಂಡೇಷನ್‌ಗೆ ಸೂಚಿಸಲಾಗಿದೆ.
ಜಮೀನು ತಗಾದೆ ವಿಚಾರದಲ್ಲಿ ಈಶ ಫೌಂಡೇಶನ್ ವಿರುದ್ಧ ಕೆಲ ರೈತರು ಹೈಕೋರ್ಟ್ ಮೆಟ್ಟಿಲೇರಿದ್ದರು. ಖ್ಯಾತಪ್ಪ , ಶ್ರೀಧರ್ , ನಾರಾಯಣಸ್ವಾಮಿ, ಎನ್. ನಾರಾಯಣಸ್ವಾಮಿ ಅವರ ದೂರನ್ನು ಈ ಹಿಂದೆ ಆಲಿಸಿದ್ದ ನ್ಯಾಯಾಲಯ, ಯಾವುದೇ ಅಭಿವೃದ್ಧಿ ಕಾರ್ಯ ನಡೆಸದಂತೆ ತಡೆಯಾಜ್ಞೆ ನೀಡಿತ್ತು. ಇದೀಗ ಮತ್ತೆ ಯಥಾಸ್ಥಿತಿ ಆದೇಶವನ್ನು ಮುಂದುವರಿಸಿದೆ.
ಇದನ್ನೂ ಓದಿ | Aero India 2023: ಏರೋ ಇಂಡಿಯಾದಲ್ಲಿ ಭಾರತೀಯ ಪೆವಿಲಿಯನ್‌ನ ಪ್ರಮುಖ ಆಕರ್ಷಣೆಯಾಗಿ ತೇಜಸ್ ಯುದ್ಧ ವಿಮಾನ
ಯಥಾಸ್ಥಿತಿ ಮಧ್ಯಂತರ ಆದೇಶ ತೆರವುಗೊಳಿಸುವಂತೆ ಈಶಾ ಪ್ರತಿಷ್ಠಾನ ಪರ ವಕೀಲ ಅರ್ಜಿ ಸಲ್ಲಿಸಿದ್ದರು. ಸಿಜೆ ಪಿ.ಬಿ. ವರಾಳೆ ಮತ್ತು ನ್ಯಾ.ಆಶೋಕ್ ಎಸ್.ಕಿಣಗಿ ಅವರಿದ್ದ ಪೀಠದಲ್ಲಿ ಅರ್ಜಿ ವಿಚಾರಣೆ ನಡೆದಿದ್ದು, ಯಥಾಸ್ಥಿತಿ ಆದೇಶ ತೆರವಿಗೆ ನ್ಯಾಯಮೂರ್ತಿಗಳು ನಿರಾಕರಿಸಿದ್ದಾರೆ.
ಪ್ರತಿಮೆ ಅನಾವರಣವಾದ ಬಳಿಕ ಸ್ಥಳದಲ್ಲಿ ಬೆಂಕಿ ಹಾಕಲಾಗಿದೆ, ಪಟಾಕಿ ಸಿಡಿಸಲಾಗಿದೆ. ಇದರಿಂದ ಪರಿಸರಕ್ಕೆ ತೀವ್ರ ಹಾನಿಯಾಗಿದೆ ಎಂದು ಅರ್ಜಿದಾರರ ವಕೀಲ ವಾದಿಸಿದ್ದಾರೆ. ವಾದ- ಪ್ರತಿವಾದ ಆಲಿಸಿದ ಬಳಿಕ ಯಥಾಸ್ಥಿತಿ ಆದೇಶವನ್ನು ಹೈಕೋರ್ಟ್ ಮುಂದುವರಿಸಿದೆ.