Site icon Vistara News

IT Raid | ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮನೆಗೆ ಐಟಿ ರೈಡ್‌; ಕಾಂಗ್ರೆಸ್‌ ಪ್ರತಿಭಟನೆ, ಸಿ.ಟಿ. ರವಿ ಮೇಲೆ ಆಕ್ರೋಶ

chikkamagaluru gayatri protest ಐಟಿ ದಾಳಿ

ಚಿಕ್ಕಮಗಳೂರು: ವಿಧಾನ ಪರಿಷತ್ ಮಾಜಿ ‌ಸದಸ್ಯೆ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಗಾಯತ್ರಿ ಶಾಂತೇಗೌಡ ಅವರ ನಿವಾಸದ ಮೇಲೆ ಗುರುವಾರ (ನ. ೧೭) ಮುಂಜಾನೆಯೇ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದನ್ನು (IT Raid on Congress leader) ವಿರೋಧಿಸಿ ಅವರ ನಿವಾಸದ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ಈ ವೇಳೆ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ಶಾಸಕ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸಿ.ಟಿ. ರವಿ ಅವರನ್ನು ಲೂಟಿ ರವಿ ಎಂದು ಕೂಗಿದರು. ಅಲ್ಲದೆ, ಬಿಜೆಪಿ ಸರ್ಕಾರವು ಆದಾಯ ತೆರಿಗೆ ಇಲಾಖೆಯನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಆಕ್ರೋಶ ಹೊರಹಾಕಿದರು. ಗಾಯತ್ರಿ ಶಾಂತೇಗೌಡ ಅವರ ಮನೆ ಮುಂದೆ ಸೇರಿದ ನೂರಾರು ಮಂದಿ, ಮೊದಲು ಶಾಸಕ ಸಿ.ಟಿ.ರವಿ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ಗಂಭೀರ ಆರೋಪ ಏನು?
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತೆಯೂ ಆಗಿರುವ ಗಾಯತ್ರಿ ಅವರು ಕಳೆದ ವಿಧಾನಪರಿಷತ್ ಚುನಾವಣೆಯಲ್ಲಿ 6 ಮತಗಳಿಂದ ಸೋತಿದ್ದರು. ಈ ಬಾರಿ ಚಿಕ್ಕಮಗಳೂರು ಕ್ಷೇತ್ರದಿಂದ ಕಾಂಗ್ರೆಸ್‌ನ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರು. ಬಿಜೆಪಿ ಶಾಸಕ ಸಿ.ಟಿ.ರವಿಗೆ ಭಾರಿ ಪೈಪೋಟಿ ನೀಡುತ್ತಾರೆಂದೇ ವಿಶ್ಲೇಷಣೆ ಮಾಡಲಾಗುತ್ತಿತ್ತು. ಈಗ ಚುನಾವಣೆಗೆ ಕೆಲವೇ ತಿಂಗಳು ಇರುವ ಹೊತ್ತಿನಲ್ಲಿ ಈ ದಾಳಿಯನ್ನು ಮಾಡಿಸಿದ್ದಾರೆ ಎಂದು ಆರೋಪಿಸಿರುವ ಕಾಂಗ್ರೆಸ್ ಕಾರ್ಯಕರ್ತರು, ತೀವ್ರ ಆಕ್ರೋಶವನ್ನು ಹೊರಹಾಕಿದ್ದಾರೆ. ಅಲ್ಲದೆ, ಸಿ.ಟಿ.ರವಿ ಭಾವಚಿತ್ರಕ್ಕೆ ಬೆಂಕಿ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ | Brahmin community | ಸಿದ್ದರಾಮಯ್ಯ ಬ್ರಾಹ್ಮಣರ ಕ್ಷಮೆ ಕೇಳಲಿ, ಲೇಖಕನ ಬಂಧನವಾಗಲಿ; ಬಳ್ಳಾರಿಯಲ್ಲಿ ಪ್ರತಿಭಟನೆ

ಆಜಾದ್ ಪಾರ್ಕ್‌ ಬಳಿಯೂ ಪ್ರತಿಭಟನೆ
ಇದೇ ವೇಳೆ ಚಿಕ್ಕಮಗಳೂರು ನಗರದ ಆಜಾದ್ ಪಾರ್ಕ್ ಬಳಿಯೂ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಶಾಸಕ ಸಿ.ಟಿ ರವಿ ವಿರುದ್ಧ ಅಸಮಾಧಾನವನ್ನು ಪ್ರದರ್ಶಿಸಿದ್ದಾರೆ. ಸಿ.ಟಿ. ರವಿ ಪೋಸ್ಟರ್‌ಗೆ ಬೆಂಕಿ ಹಚ್ಚಿದ್ದಲ್ಲದೆ, ಅವರ ಫೋಟೊಗೆ ಕಾಲಿನಿಂದ ಒದ್ದಿದ್ದಾರೆ. ಹೀಗಾಗಿ ಸಿ.ಟಿ. ರವಿ, ಗುತ್ತಿಗೆದಾರ ಸುದರ್ಶನ್ ಮನೆ ಮೇಲೆಯೂ ದಾಳಿ ನಡೆಸುವಂತೆ ಆಗ್ರಹಿಸಿದ್ದಾರೆ.

ಮುಂಜಾನೆಯೇ ನಡೆದ ದಾಳಿ
ಚಿಕ್ಕಮಗಳೂರು ನಗರದ ಹೂವಿನ ಮಾರ್ಕೆಟ್ ರಸ್ತೆಯಲ್ಲಿರುವ ಗಾಯತ್ರಿ ಅವರ ನಿವಾಸಕ್ಕೆ ಐಟಿ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, ಹತ್ತಕ್ಕೂ ಹೆಚ್ಚು ವಾಹನಗಳಲ್ಲಿ ಬಂದಿದ್ದರು. ಜತೆಗೆ ಬೇಲೂರಿನಲ್ಲಿರುವ ಅವರ ಅಳಿಯನ ನಿವಾಸದ ಮೇಲೂ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಹಲವು ದಾಖಲೆಗಳನ್ನು ಇದೇ ವೇಳೆ ಪರಿಶೀಲನೆ ನಡೆಸಲಾಗಿದೆ.

ದಾಳಿ ನಡೆದಿರುವ ಸ್ಥಳ
ಚಿಕ್ಕಮಗಳೂರಿನ ಗಾಯತ್ರಿ ಶಾಂತೇಗೌಡ ನಿವಾಸ, ಕಚೇರಿ, ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮೂವರ ಮನೆ‌, ನಗರದ ಹೊರವಲಯದ ಉಂಡೆ ದಾಸರಹಳ್ಳಿಯಲ್ಲಿರುವ ಗಾಯತ್ರಿ ಅಣ್ಣನ ಮಗನ ನಿವಾಸ, ತಾಲೂಕಿನ ಮರ್ಲೆ ಕಲ್ಲಿನ ಕ್ರಷರ್, ಹಾಸನ ಜಿಲ್ಲೆಯ ಬೇಲೂರಿನಲ್ಲಿರುವ ಅಳಿಯನ ಮನೆ, ಬೆಂಗಳೂರಿನ ನಾಗರಬಾವಿಯಲ್ಲಿ ಇರುವ ಗಾಯತ್ರಿ ಅವರ ನಿವಾಸಗಳ ಮೇಲೆ ದಾಳಿ ನಡೆದಿದೆ.

ಇದನ್ನೂ ಓದಿ | Negligence at Hospital | ಮಧ್ಯಾಹ್ನವಾದರೂ ಆಸ್ಪತ್ರೆಗೆ ಬಾರದ ವೈದ್ಯ, ಸಿಬ್ಬಂದಿ: ಗರ್ಭಿಣಿ ಪರದಾಟ

ತಿರುಪತಿ ಯಾತ್ರೆಯಲ್ಲಿರುವ ಗಾಯತ್ರಿ ದಂಪತಿ
ಐಟಿ ದಾಳಿ ವೇಳೆ ಗಾಯತ್ರಿ ಶಾಂತಗೌಡ ದಂಪತಿ ಮನೆಯಲ್ಲಿ ಇಲ್ಲ ಎನ್ನಲಾಗಿದ್ದು, ತಿರುಪತಿಗೆ ತೆರಳಿದ್ದಾರೆ. ಮೂರು ದಿನಗಳ ಹಿಂದೆ ದೇವರ ದರ್ಶನಕ್ಕೆಂದು ಅವರು ಹೋಗಿದ್ದಾರೆ. ಚಿಕ್ಕಮಗಳೂರಿನ ಮನೆ ಮೇಲೆ ದಾಳಿ ನಡೆಸಿದಾಗ ಪುತ್ರಿ ಕಾವ್ಯಾ ಇದ್ದರು ಎನ್ನಲಾಗಿದೆ.

ಮದುವೆ ದಿಬ್ಬಣದಂತೆ ಬಂದರು!
ಮುಂಜಾನೆ ಮನೆ ಮುಂದೆ ಹತ್ತಾರು ವಾಹನಗಳನ್ನು ಏಕೆ ನಿಲ್ಲಿಸಲಾಗಿದೆ ಎಂಬ ಬಗ್ಗೆ ಸಂಶಯ ಬಾರದಿರಲಿ ಎಂದು ಅಧಿಕಾರಿಗಳು ಕಾರಿನ ಮುಂಭಾಗಕ್ಕೆ ಮದುವೆ ಬೋರ್ಡ್‌ ಹಾಕಿಕೊಂಡು ಬಂದಿದ್ದರು. ಅಭಿನವ್ ವೆಡ್ಸ್ ದೀಪಿಕಾ ಎಂದು ಬೋರ್ಡ್‌ನಲ್ಲಿ ಬರೆಯಲಾಗಿತ್ತು.

ಇದನ್ನೂ ಓದಿ | IT Raid on Congress leader | ಕಾಂಗ್ರೆಸ್‌ ನಾಯಕಿ ಗಾಯತ್ರಿ ಶಾಂತೇಗೌಡ ನಿವಾಸಕ್ಕೆ ಐಟಿ ದಾಳಿ, ಮದುವೆ ದಿಬ್ಬಣದಂತೆ ಬಂದರು!

Exit mobile version