ಬೆಳಗಾವಿ: ಜಿಲ್ಲೆಯ ಕಾಂಗ್ರೆಸ್ ಮುಖಂಡ ವಿ.ಎಸ್. ಸಾಧುನವರ ಒಡೆತನದ ಬ್ಯಾಂಕ್ ಮೇಲೆ ಐಟಿ ದಾಳಿ ನಡೆದಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಮೇಲೆ ದಾಳಿ ನಡೆದಿದೆ. ಚುನಾವಣೆಯ ಹೊತ್ತಿನಲ್ಲಿಯೇ ಐಟಿ ದಾಳಿ ನಡೆದಿರುವುದು ಹಲವು ಚರ್ಚೆಗೆ ಕಾರಣವಾಗಿದೆ.
ಸ್ಥಳೀಯ ಪೊಲೀಸರ ನೆರವು ಪಡೆದು ಗೋವಾ ವಲಯದ ಐಟಿ ಅಧಿಕಾರಿಗಳು ಬ್ಯಾಂಕ್‌ನಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಸುಮಾರು 15 ಅಧಿಕಾರಿಗಳಿಂದ ರಾತ್ರಿಯಾದರೂ ಶೋಧ ಕಾರ್ಯ ಮುಂದುವರಿದಿದೆ. ಅಧಿಕಾರಿಗಳು ಬ್ಯಾಂಕ್ ವ್ಯವಸ್ಥಾಪಕ ಈರಣ್ಣ ನಾನಣ್ಣವರ ಅವರಿಂದ ಮಾಹಿತಿ ಕಲೆಹಾಕುತ್ತಿದ್ದಾರೆ.
ಬ್ಯಾಂಕಿನಲ್ಲಿದ್ದ ಅಂದಾಜು 262 ಲಾಕರ್‌ಗಳನ್ನು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಲಾಕರ್ ಹೊಂದಿರುವ ಗ್ರಾಹಕರ ವಿಚಾರಣೆ ನಡೆಸಿದ್ದಾರೆ. ಐಟಿ ಅಧಿಕಾರಿಗಳ ದಾಳಿಯಿಂದ ಬ್ಯಾಂಕ್ ಎದುರು ಗ್ರಾಹಕರು ಜಮಾಯಿಸಿದ್ದಾರೆ. ಹಾಗೆಯೇ, ಜನ ಐಟಿ ದಾಳಿ ಕುರಿತು ಹಲವು ರೀತಿಯಲ್ಲಿ ಮಾತನಾಡುತ್ತಿದ್ದಾರೆ. ದಾಳಿ ವೇಳೆ ಸಿಕ್ಕಿರುವ ದಾಖಲೆಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಆದಾಯ ತೆರಿಗೆ ವಂಚನೆ (Income tax evasion) ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಇತ್ತೀಚೆಗೆ ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಕಂಪನಿಯಾದ ಶೋಭಾ ಡೆವಲಪರ್ಸ್ ಕಂಪನಿ ಮೇಲೆ ಐಟಿ ದಾಳಿ ನಡೆದಿತ್ತು. ಬೆಂಗಳೂರು ಹಾಗೂ ಚೆನ್ನೈನ ಐಟಿ ಅಧಿಕಾರಿಗಳು ಏಕಕಾಲಕ್ಕೆ ಈ ದಾಳಿ ನಡೆಸಿದ್ದರು. ಕರ್ನಾಟಕ, ಕೇರಳ ಹಾಗೂ ತಮಿಳುನಾಡಿನಲ್ಲಿ ಏಕಕಾಲಕ್ಕೆ ದಾಳಿ ನಡೆಸಲಾಗಿತ್ತು.
ಇದನ್ನೂ ಓದಿ: IT Raid: ಸಿಎಂ ಆದವರು ಮಾಜಿ ಆಗಲೇಬೇಕಲ್ಲವೇ; ಟಿಕೆಟ್ ಸಿಗದಿದ್ದರೆ ಪಕ್ಷೇತರ ಸ್ಪರ್ಧೆ: ಐಟಿ ದಾಳಿಗೆ ಶಂಕರ್ ಕಿಡಿ
ಹತ್ತಕ್ಕೂ ಹೆಚ್ಚು ಕಾರುಗಳಲ್ಲಿ ಬಂದಿದ್ದ ಐವತ್ತಕ್ಕೂ ಹೆಚ್ಚು ಐಟಿ ಅಧಿಕಾರಿಗಳಿಂದ ಕಡತಗಳ ಪರಿಶೀಲನೆ ನಡೆಸಲಾಯಿತು. ಶೋಭಾ ಡೆವಲಪರ್ಸ್ ಮುಖ್ಯ ಕಚೇರಿಯಲ್ಲಿ ಕೆಲಸ ಸಂಪೂರ್ಣ ಸ್ಥಗಿತಗೊಂಡಿತ್ತು. ಮಾರ್ಚ್ 20ರ ಬೆಳಗ್ಗೆ ಎಂಟು ಗಂಟೆ ಸುಮಾರಿಗೆ ಬೆಂಗಳೂರಿನ ದೊಮ್ಮಲೂರು, ಹೂಡಿ, ಬಾಣಸವಾಡಿಯಲ್ಲಿರುವ ಕಚೇರಿಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಕಚೇರಿಯಲ್ಲಿದ್ದ ಸಿಬ್ಬಂದಿಯನ್ನು ಹೊರಗೆ ಬಿಡದೆ ಕಾರ್ಯಾಚರಣೆ ನಡೆಸಿದರು.