ಬೆಂಗಳೂರು: ಸರ್ಕಾರಿ ಅಧಿಕಾರಿಗಳ ನಿವಾಸಗಳ ಮೇಲೆ ಲೋಕಾಯುಕ್ತ ದಾಳಿ ಬೆನ್ನಲ್ಲೇ ರಾಜ್ಯದ ಪ್ರತಿಷ್ಠಿತ ಚಿನ್ನಾಭರಣಗಳ ಸಂಸ್ಥೆ ʼಆಭರಣ್ʼ ಜ್ಯುವೆಲ್ಲರ್ಸ್‌ಗೆ ಆದಾಯ ತೆರಿಗೆ ಇಲಾಖೆ ಶಾಕ್ ನೀಡಿದೆ. ಬೆಂಗಳೂರು, ಮಂಗಳೂರು, ಉಡುಪಿ, ಕಾರವಾರದ ಸೇರಿ ವಿವಿಧೆಡೆ ಆಭರಣ್ ಮಳಿಗೆಗಳ ಮೇಲೆ ಐಟಿ ಅಧಿಕಾರಿಗಳು ಏಕಕಾಲದಲ್ಲಿ ದಾಳಿ (IT Raid) ಮಾಡಿದ್ದು, ಬಿಲ್ಲಿಂಗ್ ವಿವರ, ಚಿನ್ನ ಖರೀದಿ, ಆದಾಯ ತೆರಿಗೆ ಪಾವತಿ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ.
ಸುಭಾಷ್ ಕಾಮತ್ ಹಾಗೂ ಮಹೇಶ್ ಕಾಮತ್ ಮಾಲೀಕತ್ವದ ಆಭರಣ್ ಜ್ಯುವೆಲ್ಲರಿ ಸಂಸ್ಥೆಗೆ ರಾಜ್ಯದಲ್ಲಿ 14 ಹಾಗೂ ಗೋವಾದಲ್ಲಿ ಒಂದು ಮಳಿಗೆಯಿದೆ. ಬೆಂಗಳೂರಿನಲ್ಲಿನ ಎಂ.ಜಿ. ರಸ್ತೆ, ಮಹಾಲಕ್ಷ್ಮಿ ಲೇಔಟ್, ಗಿರಿನಗರ, ಬನಶಂಕರಿಯ ಆಭರಣ್ ಜ್ಯುವೆಲ್ಲರ್ಸ್ ಮಳಿಗೆಗಳ ಮೇಲೆ ಒಟ್ಟು 30 ಕಾರುಗಳಲ್ಲಿ ಅಧಿಕಾರಿಗಳ ತಂಡಗಳು ತೆರಳಿ ಪರಿಶೀಲನೆ ನಡೆಸಿದವು.
ಉಡುಪಿ, ಕಾರ್ಕಳ, ಕುಂದಾಪುರ, ಪುತ್ತೂರು, ಪಡುಬಿದ್ರಿ, ಬ್ರಹ್ಮಾವರದಲ್ಲಿ ದಾಳಿ ನಡೆಸಿ ದಾಖಲೆ ಪರಿಶೀಲಿಸಲಾಗಿದೆ. ಅದೇ ರೀತಿ ಮಂಗಳೂರಿನ ಕದ್ರಿಯ ಆಭರಣ್ ಮಳಿಗೆ ಮೇಲೆ ಐಟಿ ದಾಳಿ ನಡೆದಿದೆ. ಐದಾರು ಐಟಿ ಅಧಿಕಾರಿಗಳ ತಂಡ ಜ್ಯುವೆಲ್ಲರಿಯಲ್ಲಿ ಬಿಲ್ಲಿಂಗ್ ವಿವರ, ಚಿನ್ನದ ದಾಖಲೆ ವಶಕ್ಕೆ ಪಡೆದು ಪರಿಶೀಲನೆ ನಡೆಸಿತು. ಇನ್ನು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಮಂಗಳೂರಿನ ಶಿವಭಾಗ್ ಹಾಗೂ ಕೊಟ್ಟಾರದಲ್ಲಿ ತನಿಖೆ ನಡೆಸಲಾಗಿದೆ.
ಇದನ್ನೂ ಓದಿ | Lokayukta Raid: ರಾಜ್ಯದಲ್ಲಿ ಒಂದೇ ದಿನ 17 ಭ್ರಷ್ಟ ಅಧಿಕಾರಿಗಳ ಬೇಟೆ; ಕಂತೆ ಕಂತೆ ಹಣ, ಚಿನ್ನಾಭರಣ ಪತ್ತೆ!
ಉಡುಪಿ ನಗರದ ಆಭರಣ್ ಮಳಿಗೆಯಲ್ಲಿ ಸುಮಾರು 15 ಅಧಿಕಾರಿಗಳು ತಪಾಸಣೆ ನಡೆಸಿದರು. ಹಾಗೆಯೇ ಜಿಲ್ಲೆಯ ಕುಂದಾಪುರ, ಹೆಬ್ರಿ, ಪಡುಬಿದ್ರೆ ಭಾಗದಲ್ಲೂ ಪರಿಶೀಲನೆ ಮಾಡಲಾಗಿದೆ. ಅದೇ ರೀತಿ ಉತ್ತರ ಕನ್ನಡದ ಕುಮಟಾದ ಹೊಸ ಬಸ್ ನಿಲ್ದಾಣದ ಬಳಿ ಇರುವ ಆಭರಣ್ ಮಳಿಗೆಯಲ್ಲೂ 12 ಅಧಿಕಾರಿಗಳ ತಂಡ ದಾಖಲೆ ಪರಿಶೀಲನೆ ಮಾಡಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ