ಶಿವಮೊಗ್ಗ: ಶಿವಮೊಗ್ಗ ನಗರದಲ್ಲಿ (Shivamogga City) ಇನ್ನು ಟ್ರಾಫಿಕ್ ರೂಲ್ಸ್ (Traffic Rules) ಮುರಿದು, ಯಾರೂ ನೋಡಿಲ್ಲವಲ್ಲ ಬಚಾವ್ ಎಂದು ಭಾವಿಸುವಂತಿಲ್ಲ. ಸಂಚಾರಿ ನಿಯಮ (Shivamogga Traffic) ಉಲ್ಲಂಘನೆ ಮಾಡುವ ವಾಹನ ಸವಾರರ ಮೇಲೆ ತಂತ್ರಾಂಶ ಕಣ್ಣು ಇಟ್ಟು ದಂಡ ವಿಧಿಸುವ ವ್ಯವಸ್ಥೆ ಬರಲಿದೆ!
ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‍ಕುಮಾರ್ (SP Mithun Kumar) ಅವರು ಮಂಗಳವಾರ ತಮ್ಮ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ವಿವರಣೆ ನೀಡಿದರು.
ಶಿವಮೊಗ್ಗ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ (Shivamogga smart city project) ನಗರದಲ್ಲಿ ಸುಗಮ ಸಂಚಾರಕ್ಕಾಗಿ ಸುಧಾರಿತ ಐಟಿಎಂಎಸ್ ತಂತ್ರಾಂಶದ (ITMS Software) ಮೂಲಕ ಕ್ಯಾಮೆರಾ ಅಳವಡಿಸಲಾಗಿದೆ. ನಗರದಲ್ಲಿರುವ ಎಲ್ಲಾ ಕ್ಯಾಮೆರಾಗಳ ಮೂಲಕ ಕೇಂದ್ರೀಕೃತವಾಗಿ ಕಂಬೈಂಡ್ ಅಂಡ್ ಕಂಟ್ರೋಲ್ ಸೆಂಟರ್‌ಗೆ ಅಳವಡಿಸಲಾಗಿದ್ದು, ಈ ತಂತ್ರಾಂಶದ ಮೂಲಕ ಯಾರೇ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದರೂ ಕೂಡ ತಕ್ಷಣ ತಿಳಿಯುವುದಲ್ಲದೆ ಅದು ರೆಕಾರ್ಡ್ ಆಗುತ್ತದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ರಕ್ಷಣಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ, ಡಿಎಸ್ಪಿ ಸುರೇಶ್, ಟ್ರಾಫಿಕ್ ಪಿಐ ಸಂತೋಷ್ ಕುಮಾರ್, ಸ್ಮಾರ್ಟ್ ಸಿಟಿ ಅಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ: Traffic Fines: 40 ಬಾರಿ ರೂಲ್ಸ್ ಬ್ರೇಕ್ ಮಾಡಿದ ಬೈಕ್ ಸವಾರನಿಗೆ ಬಿತ್ತು 12 ಸಾವಿರ ರೂ. ದಂಡ!
ಐಟಿಎಂಎಸ್ ತಂತ್ರಾಂಶದಲ್ಲಿ ಏನೇನಾಗುತ್ತದೆ?
- ವಾಹನ ಚಾಲಕರು ಸಿಗ್ನಲ್ ಜಂಪ್ ಮಾಡಿದಾಗ ವಾಹನದ ಫೋಟೊ ಮತ್ತು ವಿಡಿಯೊ ತುಣುಕನ್ನು ಎಸ್‍ವಿಡಿ ಕ್ಯಾಮೆರಾಗಳು ಸೆರೆಹಿಡಿಯುತ್ತವೆ.
- ಇದಲ್ಲದೆ ಹೆಲ್ಮೆಟ್ ಧರಿಸದೆ ಇದ್ದರೆ, ಮೂವರು ಕುಳಿತು ದ್ವಿಚಕ್ರ ವಾಹನದಲ್ಲಿ ಚಲಿಸುತ್ತಿದ್ದರೆ, ಮೊಬೈಲ್‍ನಲ್ಲಿ ಮಾತನಾಡುತ್ತಾ ವಾಹನ ಚಲಾಯಿಸುತ್ತಿದ್ದರೆ, ಒನ್‍ವೇ, ನೋ ಎಂಟ್ರಿ, ನೋ ಪಾರ್ಕಿಂಗ್, ಕಾರಿನ ಚಾಲಕರು ಸೀಟ್ ಬೆಲ್ಟ್ ಹಾಕಿಕೊಳ್ಳುವುದು, ಹೀಗೆ ಯಾವುದೇ ರೀತಿಯ ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡಿದರೆ ನೋಟ್ ಆಗುತ್ತದೆ.
- ತಕ್ಷಣವೇ ವಾಹನ ಮಾಲೀಕರ ಮೊಬೈಲ್ ಸಂಖ್ಯೆಗೆ ಎಸ್‍ಎಂಎಸ್ ಮೂಲಕ ಮತ್ತು ಮಾಲೀಕರ ವಿಳಾಸಕ್ಕೆ ಅಂಚೆ ಮೂಲಕ ನೋಟೀಸ್ ಕಳಿಸಲಾಗುತ್ತದೆ.