ಬೆಂಗಳೂರು: ಮೋಚಾ ಚಂಡಮಾರುತದ ಪರಿಣಾಮವು ಹೆಚ್ಚಾಗಿದ್ದು, ರಾಜ್ಯದಲ್ಲಿ ಹಲವು ಕಡೆ ಮಳೆ (Karnataka Rain) ಅಬ್ಬರಿಸಲಿದೆ. ಮುಂದಿನ 24 ಗಂಟೆಯಲ್ಲಿ ಬಿರುಗಾಳಿ ಸಹಿತ ಮಳೆಯಾಗಲಿದೆ (Rain alert) ಎಂದು ಹವಾಮಾನ ಇಲಾಖೆ (Weather Report) ಮುನ್ಸೂಚನೆಯನ್ನು ನೀಡಿದೆ. ಇದೇ ವೇಳೆ ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದೂ ಹೇಳಲಾಗಿದೆ. ಅಲ್ಲದೆ, ರಾಜಧಾನಿ ಬೆಂಗಳೂರಿನಲ್ಲಿ ಸಂಜೆಗೆ ಮಳೆಯಾಗುವ ಮುನ್ಸೂಚನೆ ಇದ್ದು, ಮತ ಹಾಕುವವರು ಬೇಗ ಬೇಗ ಹಾಕುವುದು ಒಳಿತು ಎಂದು ಹೇಳಲಾಗುತ್ತಿದೆ.
ಇಂದು ಬೆಳಗ್ಗೆಯಿಂದ ಬಹುತೇಕ ಬಿಸಿಲಿನ ವಾತಾವರಣ ಇದೆ. ಹಾಗಂತ ಸಂಜೆ ವೇಳೆಗೆ ಹವಾಮಾನ ಬದಲಾವಣೆಯಾಗಲಿದ್ದು, ಯಾವುದೇ ಸಮಯದಲ್ಲಿಯೂ ಮಳೆ ಬರಬಹುದು ಎಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ. ಹೀಗಾಗಿ ಈಗ ಮತಗಟ್ಟೆಗೆ ಹೋದರೆ ಬಹಳ ಜನರು ಇರುತ್ತಾರೆ. ಸಂಜೆ 4 ಗಂಟೆ ವೇಳೆಗೆ ಹೋಗುತ್ತೇವೆ ಎಂದು ಲೆಕ್ಕ ಹಾಕಿ ಕುಳಿತಿದ್ದರೆ, ಶೀಘ್ರದಲ್ಲಿಯೇ ಹೋಗಿ ಮತ ಚಲಾವಣೆ ಮಾಡಿ ಬರುವುದು ಉಳಿತು.
ರಾಜ್ಯದ ಎಲ್ಲೆಲ್ಲಿ ಮಳೆ?
ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಚಿಕ್ಕಮಗಳೂರು, ಕೊಡಗು, ಹಾಸನ ಹಾಗೂ ಶಿವಮೊಗ್ಗ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಬಿರುಗಾಳಿ ಸಹಿತ ಗುಡುಗು, ಮಿಂಚಿನ ಭಾರಿ (Weather Report) ಮಳೆಯಾಗುವ ಸಾಧ್ಯತೆ ಇದ್ದು, ಗಾಳಿ ವೇಗವು ಗಂಟೆಗೆ 30-40 ಕಿ.ಮೀ ಇರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರಲಿದೆ. ಸಂಜೆ ವೇಳೆಗೆ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 31 ಮತ್ತು ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕರಾವಳಿಯಲ್ಲೂ ಮಳೆ ಮುಂದುವರಿಯಲಿದೆ.
ಹವಾಮಾನ ತಜ್ಞರು ಹೇಳೋದೇನು?
ರಾಜ್ಯಾದ್ಯಂತ ಇನ್ನೂ ಎರಡು ದಿನಗಳು ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗಕ್ಕೆ ಈಗಾಗಲೇ ಸೂಚನೆ ನೀಡಿದ್ದೇವೆ. ಬುಧವಾರ ಮಧ್ಯಾಹ್ನದ ಮೇಲೆ ಮಳೆಯಾಗುವ ಸಾಧ್ಯತೆ ಇದೆ. ಬೆಳಗ್ಗೆ ಸಮಯ ಮೋಡ ಕವಿದ ವಾತಾವರಣ ಇರಲಿದೆ. ಸಂಜೆ ಹೊತ್ತಿಗೆ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಜ್ಞ ಎ. ಪ್ರಸಾದ್ ತಿಳಿಸಿದ್ದಾರೆ.
ಕರ್ನಾಟಕ ಚುನಾವಣೆಯ ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ