Site icon Vistara News

Uttara Kannada News: ಜಗನ್ನಾಥ ರಾವ್‌ ಜೋಷಿ ಎಲ್ಲರಿಗೂ ಆದರ್ಶ: ರೋಹಿತ್ ಚಕ್ರತೀರ್ಥ

Educationist and thinker Rohit Chakratheertha spoke in Yallapur

ಯಲ್ಲಾಪುರ: ಅಟಲ್‌ ಬಿಹಾರಿ ವಾಜಪೇಯಿ ಅವರಿಗೆ ಸಮಾನರಾಗಿ ನಿಲ್ಲಬಲ್ಲ ವ್ಯಕ್ತಿತ್ವ ಇದ್ದವರು ಎಂತಾದರೆ ಅವರು ಜಗನ್ನಾಥ ರಾವ್‌ ಜೋಷಿಯವರು. ಅಂತಹ ಮಹಾನ್‌ ವ್ಯಕ್ತಿಯ ಕುರಿತು ಇಂದಿನ ಬಹುಪಾಲು ಜನ ತಿಳಿಯದೇ ಇರುವುದು ವಿಪರ್ಯಾಸ. ಈ ಪುಸ್ತಕದ ಮುಖೇನ ಅವರ ಜೀವನದ ಕುರಿತು ತಿಳಿದು, ಆದರ್ಶಗಳನ್ನು ಪಾಲಿಸುವಂತಾಗಬೇಕು ಎಂದು ಶಿಕ್ಷಣ ತಜ್ಞ ಹಾಗೂ ಚಿಂತಕ ರೋಹಿತ್ ಚಕ್ರತೀರ್ಥ ಹೇಳಿದರು.

ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಶ್ರೀ ಗಂಗಾಧರೇಂದ್ರ ಸರಸ್ವತಿ ಸಭಾಭವನದಲ್ಲಿ ವಿಶ್ವದರ್ಶನ ಶಿಕ್ಷಣ ಸಂಸ್ಥೆ ಹಾಗೂ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಸಂಯುಕ್ತಾಶ್ರಯದಲ್ಲಿ ಶನಿವಾರ ನಡೆದ ರಾಷ್ಟ್ರ ನಮನ ಕಾರ್ಯಕ್ರಮದಲ್ಲಿ ತಿಮ್ಮಣ್ಣ ಭಟ್ ವಿರಚಿತ “ಕರ್ನಾಟಕ ಕೇಸರಿ ಶ್ರೀ ಜಗನ್ನಾಥ ರಾವ್ ಜೋಷಿ” ಪುಸ್ತಕ ಬಿಡುಗಡೆಗೊಳಿಸಿ, ಪುಸ್ತಕ ಪರಿಚಯಿಸಿ ಅವರು ಮಾತನಾಡಿದರು.

ಜೋಷಿ ಅವರಂತಹ ಸರಳ ವ್ಯಕ್ತಿತ್ವದ, ದೇಶ ಪ್ರೇಮಿ ನಾಯಕನ ಕುರಿತು ನಮಗೆ ಹೆಮ್ಮೆಯಿರಬೇಕು. ಅವರು ನಮ್ಮ ನಾಡಿನವರು ಎಂಬುದಕ್ಕೆ ಹೆಚ್ಚಿನ ಅಭಿಮಾನ ನಮ್ಮಲ್ಲಿ ಮೂಡಬೇಕು ಎಂದರು.

ಯಲ್ಲಾಪುರ ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಶ್ರೀ ಗಂಗಾಧರೇಂದ್ರ ಸರಸ್ವತಿ ಸಭಾಭವನದಲ್ಲಿ ಶನಿವಾರ ನಡೆದ ರಾಷ್ಟ್ರ ನಮನ ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಲಾಯಿತು.

ಇದನ್ನೂ ಓದಿ: Team India : ಬಿಸಿಸಿಐ ಹೊಸ ನಿಯಮದ ಉರುಳು; ವಿದೇಶಿ ಲೀಗ್​ನಿಂದ ಅಂಬಾಟಿ ಎಸ್ಕೇಪ್​!

ಬಹು ಭಾಷಾ ಚತುರರಾಗಿದ್ದ ಜಗನ್ನಾಥ ರಾವ್‌ ಜೋಷಿ ಅವರನ್ನು, ವಿದೇಶಕ್ಕೆ ಸಮಿತಿ ಕಳಿಸುವಂತಹ ಸಂದರ್ಭದಲ್ಲಿ ಆಯ್ಕೆ ಮಾಡಿಕೊಳ್ಳುತ್ತಿದ್ದರು. ಅತ್ಯಂತ ಸರಳ ಜೀವನವನ್ನು ನಡೆಸಿದ ಅವರು ಎಲ್ಲರಿಗೂ ಆದರ್ಶಪ್ರಾಯರು. ಅನೇಕ ಅವಕಾಶಗಳು ದೊರೆತ ಹೊರತಾಗಿಯೂ ಅಧಿಕಾರದ ಹಂಗನ್ನು ತೊರೆದು, ಸಾಮಾನ್ಯ ಕಾರ್ಯಕರ್ತನಂತೆ ಪಕ್ಷಕ್ಕಾಗಿ ಶ್ರಮಿಸಿದರು

ಅವರ ಬದುಕಿನ ಅನೇಕ ವಿಚಾರಗಳನ್ನು ಸಾರುವ ಈ ಪುಸ್ತಕ ಮೇಲ್ನೋಟಕ್ಕೆ ಒಂದು ಕಥೆಯಾಗಿದೆ, ಆದರೆ ಅದರ ಹಿಂದೆ ಇರುವ ಆಶಯ, ಭಾವನೆ ಹಾಗೂ ಸದ್ವಿಚಾರ ಕಣ್ಣು ತೆರೆಸುವಂತಹದ್ದು. ಅಂತಹ ಚಿಂತನೆ ಆರಂಭವಾದಾಗ ಮಾತ್ರ ಈ ಪುಸ್ತಕದ ನಿಜವಾದ ಓದು ಸಾರ್ಥಕವಾಗಲಿದೆ. ಈ ಪುಸ್ತಕ ಕೇವಲ ಓದುವುದಲ್ಲದೆ, ಧ್ಯಾನಿಸಿ, ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಯಲ್ಲಾಪುರ ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಶ್ರೀ ಗಂಗಾಧರೇಂದ್ರ ಸರಸ್ವತಿ ಸಭಾಭವನದಲ್ಲಿ ಶನಿವಾರ ನಡೆದ ರಾಷ್ಟ್ರ ನಮನ ಕಾರ್ಯಕ್ರಮದಲ್ಲಿ ತಿಮ್ಮಣ್ಣ ಭಟ್ ವಿರಚಿತ “ಕರ್ನಾಟಕ ಕೇಸರಿ ಶ್ರೀ ಜಗನ್ನಾಥ ರಾವ್ ಜೋಷಿ” ಪುಸ್ತಕ ಬಿಡುಗಡೆಗೊಳಿಸಲಾಯಿತು.

ಪುಸ್ತಕದ ಲೇಖಕ ಹಾಗೂ ಉಪನ್ಯಾಸಕ ತಿಮ್ಮಣ್ಣ ಭಟ್‌ ಮಾತನಾಡಿ, ನಾನು ಧಾರವಾಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ, ಅಲ್ಲಿನ ಕೆಲ ಪ್ರಮುಖರು ತಮ್ಮ ಮಾತುಗಳಲ್ಲಿ ಪದೇ ಪದೇ ಜಗನ್ನಾಥ ರಾವ್‌ ಅವರ ಬಗ್ಗೆ ಉಲ್ಲೇಖಿಸುತ್ತಿದ್ದಾಗ ಅವರ ಕುರಿತು ತಿಳಿದುಕೊಳ್ಳುವ ಆಸಕ್ತಿ ಮೂಡಿತು. ನಂತರ ಧಾರವಾಡ, ಬೆಳಗಾವಿ, ನವಲಗುಂದ, ನರಗುಂದದ ಪ್ರದೇಶಗಳಲ್ಲಿ ಸುತ್ತಾಡಿ, ಕಾರ್ಯಕರ್ತರೊಂದಿಗೆ ಅವರಿಗಿದ್ದ ಬಾಂಧವ್ಯದ ಕುರಿತು ಅರಿತು ಆಶ್ಚರ್ಯವಾಯಿತು. ಇಂತಹ ಸರಳ ವ್ಯಕ್ತಿಯು ಒಂದು ಧ್ಯೇಯಕ್ಕಾಗಿ ಜೀವನವನ್ನು ಮುಡಿಪಾಗಿಟ್ಟಿದ್ದು, ನನಗೆ ಈ ಪುಸ್ತಕ ರಚಿಸಲು ಪ್ರೇರಣೆಯಾಯಿತು ಎಂದರು.

ಇದನ್ನೂ ಓದಿ: Evm Machine : ಡೆಮಾಲಿಷನ್‌ ವೇಳೆ ಎಂಜಿನಿಯರ್ ಮನೆಯಲ್ಲಿ ಇವಿಎಂ ಯೂನಿಟ್‌ಗಳು ಪತ್ತೆ!

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ಕವಿ ವನರಾಗ ಶರ್ಮ, ಜಗನ್ನಾಥ ರಾವ್ ಜೋಷಿ ಅವರ ಭಾಷಣವನ್ನು ಕಣ್ಣಾರೆ ಕಾಣುವಂತಹ ಭಾಗ್ಯ ನನಗೆ ಸಿಕ್ಕಿದ್ದು ನನ್ನ ಪುಣ್ಯ. ಅಂತಹ ಮಹಾನ್ ಸಾಧಕರ ಚಿಂತನಗಳನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ಕಾರ್ಯ ಈ ಪುಸ್ತಕ ಮಾಡಲಿದೆ. ಮಣಿಪುರದಲ್ಲಿ ಉಂಟಾಗಿರುವ ಆಂತರಿಕ ಕಲಹ ಇಡೀ ದೇಶದೆಲ್ಲೆಡೆ ಹರಡುವ ಮುನ್ನ ಎಚ್ಚೆತ್ತುಕೊಳ್ಳುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಇಂದಿನ ಈ ರಾಷ್ಟ್ರ ನಮನ ಕಾರ್ಯಕ್ರಮ ಬಹು ಅರ್ಥಪೂರ್ಣವಾಗಿದೆ ಎಂದರು.

ಸಂಸ್ಥೆಯ ವ್ಯವಸ್ಥಾಪಕ ಅಜಯ ಭಾರತೀಯ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಸಂಸ್ಥೆಯ ಕಾರ್ಯದರ್ಶಿ ನರಸಿಂಹ ಕೋಣೆಮನೆ ಇದ್ದರು. ಶಿಕ್ಷಣ ಸಂಸ್ಥೆಯ ವಿವಿಧ ಅಂಗ ಸಂಸ್ಥೆಯ ವಿದ್ಯಾರ್ಥಿಗಳಿಂದ ಕವಿಗೋಷ್ಠಿ ನಡೆಯಿತು.

ಇದನ್ನೂ ಓದಿ: MS Dhoni : ಶ್ವಾನಗಳೊಂದಿಗೆ ವಿಭಿನ್ನ ರೀತಿಯಲ್ಲಿ ಬರ್ತ್​ಡೇ ಆಚರಿಸಿದ ಧೋನಿ! ಇಲ್ಲಿದೆ ಕ್ಯೂಟ್​ ವಿಡಿಯೊ

ಸಿಂಚನ ಭಟ್ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಇಡಗುಂದಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಪ್ರಸನ್ನ ಹೆಗಡೆ ಸ್ವಾಗತಿಸಿದರು. ವಿದ್ಯಾರ್ಥಿ ಶ್ರೀವತ್ಸ ಭಟ್ ಕವಿಗೋಷ್ಠಿ ನಡೆಸಿಕೊಟ್ಟನು. ಶಿಕ್ಷಕಿ ವಿದ್ಯಾ ಭಟ್ ನಿರೂಪಿಸಿದರು. ಗಣಪತಿ ಕಂಚಿಪಾಲ್ ವಂದಿಸಿದರು.

Exit mobile version