ಬೆಳಗಾವಿ: ಪರ್ಷಿಯನ್ ಭಾಷೆಯಲ್ಲಿ ಹಿಂದು ಪದಕ್ಕಿರುವ ಅರ್ಥ ಹೇಳಲು ಹೋಗಿ ಹಿಂದು ಕಾರ್ಯಕರ್ತರ ಆಕ್ರೋಶಕ್ಕೆ ಗುರಿಯಾಗಿರುವ ಯಮಕನಮರಡಿ ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ (Satish jarakiholi) ಅವರ ವಿರುದ್ಧ ಮತ್ತೊಂದು ಸುತ್ತಿನ ಹಿಂದು ಅಸ್ತ್ರ ಪ್ರಯೋಗಕ್ಕೆ ವೇದಿಕೆ ಸಿದ್ಧವಾಗಿದೆ.
ಅಂದು ಹಿಂದು ಪದವನ್ನು ಕೀಳು ಎಂಬರ್ಥದಲ್ಲಿ ಬಿಂಬಿಸಿದ್ದ ಸತೀಶ್ ಜಾರಕಿಹೊಳಿ ಅವರ ವ್ಯಾಖ್ಯಾನವನ್ನು ಕಾಂಗ್ರೆಸಿಗರೂ ತಿರಸ್ಕರಿಸಿದ್ದರು. ಹೀಗಾಗಿ ಜಾರಕಿಹೊಳಿ ಅವರು ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ರೂ ಪೂರ್ಣ ಮನಸಿನಿಂದ ಕ್ಷಮೆ ಕೇಳಿರಲಿಲ್ಲ. ಅವರ ವಿರುದ್ಧ ಯಮಕನಮರಡಿಯಲ್ಲಿ ಚಿಂತಕ ಚಕ್ರವರ್ತಿ ಸೂಲಿಬೆಲೆ ನೇತೃತ್ವದಲ್ಲಿ ʻನಾನು ಹಿಂದುʼ ಸಮಾವೇಶ ನಡೆದಿತ್ತು. ಈಗ ಜಾಗೋ ಹಿಂದು ಸಮಾವೇಶಕ್ಕೆ ಅಣಿಯಾಗಿದೆ.
ಶನಿವಾರ ಸಂಜೆ ೭ ಗಂಟೆಗೆ ಡೋಲಿಯಲ್ಲಿ ‘ಜಾಗೋ ಹಿಂದೂ’ ಬೃಹತ್ ಸಮಾವೇಶ ನಡೆಯಲಿದೆ. ಕಡೋಲಿಯ ಶಿವಾಜಿ ಹೈಸ್ಕೂಲ್ ಎದುರು ನಡೆಯಲಿರುವ ಸಮಾವೇಶದಲ್ಲಿ ಹಿಂದೂ ರಾಷ್ಟ್ರ ಸೇನಾ ಅಧ್ಯಕ್ಷ, ಮಹಾರಾಷ್ಟ್ರದ ವಾಗ್ಮಿ ಧನಂಜಯ ಭಾಯಿ ದೇಸಾಯಿ ಭಾಗವಹಿಸಲಿದ್ದಾರೆ.
ಯಮಕನಮರಡಿ ಕ್ಷೇತ್ರ ವ್ಯಾಪ್ತಿಯ ಕಡೋಲಿ, ಕಾಕತಿ ಜಿ.ಪಂ. ಕ್ಷೇತ್ರದಲ್ಲಿ ಮರಾಠಿ ಭಾಷಿಕರ ಪ್ರಭಾವ ಜಾಸ್ತಿಯಾಗಿದ್ದು, ಮರಾಠಿ ಭಾಷಿಕರ ಗಮನದಲ್ಲಿಟ್ಟುಕೊಂಡು ‘ಜಾಗೋ ಹಿಂದೂ’ ಬೃಹತ್ ಸಮಾವೇಶ ನಡೆಸಲಾಗುತ್ತಿದೆ. ಮತ್ತು ಮರಾಠಿ ಭಾಷಣಕಾರರನ್ನೇ ಕರೆಸಲಾಗುತ್ತಿದೆ. ಕಾರ್ಯಕ್ರಮದಲ್ಲಿ ಸ್ಥಳೀಯ ಬಿಜೆಪಿ ನಾಯಕರು ಭಾಗಿಯಾಗಲಿದ್ದಾರೆ.
ಬಿಜೆಪಿ ಶಾಸಕ ಅಭಯ್ ಪಾಟೀಲ್ ಸೇರಿ ಹಲವರು ಭಾಗವಹಿಸುವ ಸಾಧ್ಯತೆ ಇದೆ. ಸ್ಥಳೀಯ ಬಿಜೆಪಿ ನಾಯಕರು ಸಮಾವೇಶ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಶತಾಯ ಗತಾಯ ಸತೀಶ್ ಜಾರಕಿಹೊಳಿ ಸೋಲಿಸಲು ಬಿಜೆಪಿ ಪ್ಲ್ಯಾನ್ ಮಾಡಿದ್ದು, ಅದಕ್ಕಾಗಿ ಹಿಂದು ಅಸ್ತ್ರವನ್ನು ಬಳಸುತ್ತಿದೆ.
ಇದನ್ನೂ ಓದಿ | Satish Jarakiholi | ಸತೀಶ್ ಜಾರಕಿಹೊಳಿ ಪರ ಬೃಹತ್ ಮೆರವಣಿಗೆ, ಪ್ರತಿಭಟನೆ; ಬಿಜೆಪಿ ವಿರುದ್ಧ ಆಕ್ರೋಶ