ಬೆಂಗಳೂರು: ಇಲ್ಲಿನ ವಿದ್ಯಾರಣ್ಯಪುರದ ಚಿಕ್ಕ ಬೆಟ್ಟಳ್ಳಿ ಮಸೀದಿ ಬಳಿ ಬುಧವಾರ ಜೈ ಶ್ರೀರಾಮ್ ಎಂದು ಕೂಗಿದ್ದಕ್ಕೆ (Jai Shree Ram slogan) ಕಾರಿನಲ್ಲಿ ಹೋಗುತ್ತಿದ್ದ ಹಿಂದು ಯುವಕರ ಮೇಲೆ ಮುಸ್ಲಿಂ ಯುವಕರು ನಡೆಸಿರುವ ಹಲ್ಲೆ ಪ್ರಕರಣಕ್ಕೆ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ. ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ (R Ashok) ಪ್ರತಿಕ್ರಿಯೆ ನೀಡಿ, ಈ ಘಟನೆಗೆ ಸರ್ಕಾರವೇ ಕಾರಣ. ಸಿಎಂ ಸಿದ್ದರಾಮಯ್ಯ (CM Siddaramaiah), ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಅವರ ಓಲೈಕೆ ರಾಜಕಾರಣವೇ ಕಾರಣ ಎಂದು ಕಿಡಿಕಾರಿದ್ದಾರೆ.
ಬುಧವಾರ ಶ್ರೀರಾಮನವಮಿ (Ram Navami) ಇದ್ದಿದ್ದರಿಂದ ಜೈ ಶ್ರೀರಾಮ್ ಎಂದು ಕೂಗುತ್ತಾ ಹಿಂದು ಯುವಕರು ಕಾರಿನಲ್ಲಿ ಹೋಗುತ್ತಿದ್ದಾಗ, ಅವರನ್ನು ಅಡ್ಡಗಟ್ಟಿದ ಮುಸ್ಲಿಂ ಯುವಕರ ತಂಡ ಅವಾಚ್ಯ ಶಬ್ದಗಳಿಂದ ಬೈದಿದ್ದಲ್ಲದೆ, ಹಲ್ಲೆಯನ್ನೂ ನಡೆಸಿತ್ತು. ಇದಕ್ಕೀಗ ರಾಜಕೀಯ ತಿರುವು ಸಿಕ್ಕಿದ್ದು, ಇಂತಹ ಘಟನೆಗೆ ಕಾಂಗ್ರೆಸ್ ಸರ್ಕಾರದ ಓಲೈಕೆ ರಾಜಕಾರಣವೇ ಕಾರಣ ಎಂದು ಅಶೋಕ್ ಗುಡುಗಿದ್ದಾರೆ.
ವಿಸ್ತಾರ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿರುವ ಆರ್. ಅಶೋಕ್, ರಾತ್ರಿ ಘಟನೆಗೆ ಸರ್ಕಾರವೇ ಕಾರಣ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಓಲೈಕೆ ರಾಜಕಾರಣವನ್ನು ಮಾಡುತ್ತಿದ್ದಾರೆ. ವಿಧಾನಸೌಧಕ್ಕೆ ಬಂದು ಪಾಕಿಸ್ತಾನ ಜಿಂದಾಬಾದ್ ಅಂತ ಕೂಗುತ್ತಾರೆ. ಈಗ ರಾಮ ಜಪ ಮಾಡುವವರನ್ನು ತಡೆದು, ಹಲ್ಲೆ ನಡೆಸಿ, ಅಲ್ಲಾಹು ಅಕ್ಬರ್ ಅಂತ ಕೂಗುವಂತೆ ಒತ್ತಾಯ ಮಾಡುತ್ತಾರೆ. ಸಿಎಂ ಸಿದ್ದರಾಮಯ್ಯ. ಡಿ.ಕೆ. ಶಿವಕುಮಾರ್ ಅವರು ಬೆಂಗಳೂರಿನಲ್ಲಿ ಭಯೋತ್ಪಾದಕರನ್ನು ಬೆಳೆಸುತ್ತಿದ್ದಾರೆ. ಇಂಥವರನ್ನು ಡಿಕೆಶಿ “ದೆ ಆರ್ ಮೈ ಬ್ರದರ್ಸ್” ಎಂದು ಹೇಳಿಕೊಳ್ಳುತ್ತಾರೆ ಎಂದು ಕಿಡಿಕಾರಿದರು.
ಕುಕ್ಕರ್‌ನಲ್ಲಿ ಬಾಂಬ್ ಇಟ್ಟವರು ಇವರಿಗೆ ಬ್ರದರ್ಸ್ ಆಗುತ್ತಾರೆ. ಈಗ ಯಾಕೆ ಮೌನವಾಗಿದ್ದೀರಿ? ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಏನೋ ಹೇಳಿಕೆ ಕೊಟ್ಟರು ಎಂದು ಅವರ ಮೇಲೆ ಬಿದ್ದಿರಿ. ರಾತ್ರಿಯಿಂದ ಯಾಕೆ ಮೌನವಾಗಿದ್ದೀರಿ? ಮಾತನಾಡಿ ಡಿಕೆಶಿಯವರೇ? ಪೊಲೀಸರಿಗೆ ಧಮ್ಕಿ ಹಾಕ್ತೀರಾ? ಇಂಥ ಘಟನೆ ನಡೆದರೂ ಕ್ರಮ ಕೈಗೊಳ್ಳಬೇಡಿ ಅಂತ ಹೇಳುತ್ತೀರಾ? ಇದೇ ಕಾರಣಕ್ಕಾಗಿಯೇ ಆ ಸಮುದಾಯದವರು ದಿನ ಬೆಳಗಾದರೆ ಇಂಥದ್ದೊಂದು ಕೃತ್ಯಗಳನ್ನು ಮಾಡುತ್ತಲೇ ಬರುತ್ತಿದ್ದಾರೆ. ಅಲ್ಪಸಂಖ್ಯಾತರನ್ನು ಓಲೈಕೆ ಮಾಡಿ ಬಹುಸಂಖ್ಯಾತರನ್ನು ಕಡೆಗಣಿಸುತ್ತಿದ್ದೀರಿ. ಬಹುಸಂಖ್ಯಾತರು ನಿಮಗೆ ಬುದ್ಧಿ ಕಲಿಸುತ್ತಾರೆ. ಈ ಚುನಾವಣೆಯಲ್ಲಿ 28 ಕ್ಷೇತ್ರಗಳಲ್ಲೂ ಸೋಲಿಸಿ, ನಿಮಗೆ ಪಾಠ ಕಲಿಸುತ್ತಾರೆ ಎಂದು ಆರ್. ಅಶೋಕ್ ಹೇಳಿದರು.
ಪೊಲೀಸರಿಗೆ ರಾಜ್ಯದಲ್ಲಿ ಸ್ವತಂತ್ರವಾಗಿ ನಿರ್ವಹಣೆ ಮಾಡಲು ಬಿಡುತ್ತಿಲ್ಲ. ಡಿ.ಕೆ. ಶಿವಕುಮಾರ್ ಅವರು ತಮ್ಮ ಬ್ರದರ್ಸ್ ರಕ್ಷಣೆಗಾಗಿ ನಿಂತಿದ್ದಾರೆ ಎಂದು ಅಶೋಕ್ ಕಿಡಿಕಾರಿದರು.
ಕಾರು ಅಡ್ಡಗಟ್ಟಿ ಮುಸ್ಲಿಂ ಯುವಕರ ಪುಂಡಾಟ!
ಶ್ರೀ ರಾಮನವಮಿ ಕಾರ್ಯಕ್ರಮ ಮುಗಿಸಿ ಕಾರಿನಲ್ಲಿ ಹಿಂದು ಯುವಕರು ತೆರಳುತ್ತಿದ್ದಾಗ, ಜೈ ಶ್ರೀರಾಮ್ ಎಂದು ಕೂಗಿದ್ದಾರೆ. ಈ ವೇಳೆ ಎರಡು ಬೈಕ್‌ಗಳಲ್ಲಿ ಬಂದ ಮುಸ್ಲಿಂ ಯುವಕರು, “ಜೈ ಶ್ರೀರಾಮ್ ಹೇಳಬಾರದು, ಅಲ್ಲಾಹ್ ಅಂತ ಹೇಳಬೇಕು” ಎಂದು ಹಿಂದು ಯುವಕರ ಮೇಲೆ ಹಲ್ಲೆ ನಡೆಸಿದ್ದರು. ಈ ಬಗ್ಗೆ ಬುಧವಾರವೇ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಬೈಕ್‌ನಲ್ಲಿ ಬಂದ ಯುವಕರು, ಜೈ ಶ್ರೀ ರಾಮ್ ಇಲ್ಲಾ… ಓನ್ಲೀ ಅಲ್ಲಾ ಹು ಅಕ್ಬರ್ ಎಂದು ಹೇಳಿದ್ದಾರೆ. ಇದಲ್ಲದೆ ಕಾರಿನಲ್ಲಿ ಇದ್ದವರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ. ಇದೇ ವೇಳೆ ನಾವು ನಿಮ್ಮ ಹಬ್ಬದಲ್ಲಿ ಹೀಗೆ ಮಾಡುತ್ತೇವಾ ಎಂದು ಹಿಂದು ಯುವಕರು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಗಲಾಟೆ ನಡೆದಿದೆ.
ವಿದ್ಯಾರಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲು
ಹಿಂದು ಯುವಕರ ಮೇಲೆ ಹಲ್ಲೆ ಪ್ರಕರಣ ಸಂಬಂಧ ಡಿ. ಪವನ್ ಕುಮಾರ್ ನೀಡಿದ ದೂರಿನ ಮೇರೆಗೆ ವಿದ್ಯಾರಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸ್ನೇಹಿತರಾದ ವಿನಾಯಕ ಮತ್ತು ರಾಹುಲ್ ಜತೆ ಚಿಕ್ಕಬೆಟ್ಟಹಳ್ಳಿ ರಸ್ತೆಯಲ್ಲಿ ಮಧ್ಯಾಹ್ನ ಕಾರಿನಲ್ಲಿ ಹೋಗುತ್ತಿದ್ದೆ. ಕಾರಿನ ಮುಂದೆ ಶ್ರೀರಾಮನ ಧ್ವಜ ಕಟ್ಟಿದ್ದನ್ನು ನೋಡಿದ ಇಬ್ಬರು ಮುಸ್ಲಿಂ ಯುವಕರು, ನಮ್ಮ ಬಳಿ ಬಂದು, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ, ಅಲ್ಲಾ ಹು ಅಕ್ಬರ್” ಎಂದು ಕೂಗಬೇಕು ಎಂದು ಒತ್ತಾಯಿಸಿದರು. ನಾವು ಹಾಗೆ ಕೂಗುವುದಿಲ್ಲವೆಂದು ಹೇಳಿದಾಗ, ನಮ್ಮ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡಿದ್ದು, ರಾಹುಲ್ ತಲೆಗೆ ಪೆಟ್ಟು ಬಿದ್ದು ಮೂಗಿನಿಂದ ರಕ್ತಸ್ರಾವವಾಗಿದೆ. ಹೇಗೋ ನಾವು ಅಲ್ಲಿಂದ ತಪ್ಪಿಸಿಕೊಂಡು ಬಂದಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
ನಾಲ್ವರ ಬಂಧನ
ಹಲ್ಲೆ ಪ್ರಕರಣಕ್ಕೆ (Assault Case) ಸಂಬಂಧಿಸಿ ನಾಲ್ಕು ಮಂದಿ ಆರೋಪಿಗಳನ್ನು (Culprits) ಪೊಲೀಸರು ಬಂಧಿಸಿದ್ದಾರೆ. ಜೈ ಶ್ರೀರಾಮ್ ಘೋಷಣೆ ಕೂಗಿದ್ದಕ್ಕೆ ಹಿಂದು ಯುವಕರ (Hindu youth) ಮೇಲೆ ಬುಧವಾರ ಸಂಜೆ ಹಲ್ಲೆ ಮಾಡಿದ್ದವರ ಪೈಕಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಎ1 ಫರ್ಮಾನ್, ಎ2 ಸಮೀರ್ ಹಾಗೂ ಮತ್ತಿಬ್ಬರನ್ನು ಬಂಧಿಸಲಾಗಿದೆ. ಒಟ್ಟು ನಾಲ್ವರು ಆರೋಪಿಗಳ ಪೈಕಿ ಇಬ್ಬರು ಅಪ್ರಾಪ್ತರಾಗಿದ್ದಾರೆ. ಸದ್ಯ ಆರೋಪಿಗಳನ್ನು ವಿಚಾರಣೆ ನಡೆಸಲಾಗುತ್ತಿದೆ.
“ಜೈ ಶ್ರೀರಾಮ್ ಘೋಷಣೆ ಕೂಗಿದ್ದಕ್ಕೆ ಹಲ್ಲೆ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಸಿಸಿಟಿವಿ ದೃಶ್ಯಗಳ ಪರಿಶೀಲನೆ ಕೂಡ ಮಾಡಲಾಗಿದೆ. ಘಟನೆಯಲ್ಲಿ ನಾಲ್ವರು ಭಾಗಿಯಾಗಿರೋದು ಗೊತ್ತಾಗಿದೆ. ನಾಲ್ವರಲ್ಲಿ ಇಬ್ಬರು ಅಪ್ರಾಪ್ತರಿದ್ದಾರೆ. ಪ್ರಮುಖ ಆರೋಪಿ ಫರ್ಮಾನ್. ತನಿಖೆ ಮುಂದುವರೆದಿದೆ. ಮತ್ತೆ ಯಾರಾದರೂ ಭಾಗಿಯಾಗಿದ್ದಾರಾ ಎಂದು ಪರಿಶೀಲಿಸಲಾಗುತ್ತಿದೆ” ಎಂದು ಈಶಾನ್ಯ ವಿಭಾಗ ಡಿಸಿಪಿ ಲಕ್ಷ್ಮಿಪ್ರಸಾದ್ ಹೇಳಿಕೆ ನೀಡಿದ್ದಾರೆ.
“ಆರೋಪಿಗಳು ಬೈಕ್‌ನಲ್ಲಿ ಹೋಗುತ್ತಿರಬೇಕಾದರೆ ಕಾರನ್ನ ಗಮನಿಸಿದ್ದಾರೆ. ಕಾರಲ್ಲಿ ಬಾವುಟ ಹಿಡಿದು ಹೋಗ್ತಿರೋದು ನೋಡಿ ವಾಪಸ್ಸು ಬಂದಿದ್ದಾರೆ. ಕಾರನ್ನು ಅಡ್ಡ ಹಾಕಿ ಗಲಾಟೆ ಮಾಡಿದ್ದಾರೆ” ಎಂದು ಅವರು ಹೇಳಿದ್ದಾರೆ.
ಗಾಂಜಾ ನಶೆಯಲ್ಲಿ ಹಲ್ಲೆ ಮಾಡಿದ್ರಾ ಯುವಕರು?
ಗಾಂಜಾ ನಶೆಯಲ್ಲಿ ಕಾರು ಅಡ್ಡ ಹಾಕಿ ಯುವಕರು ಗಲಾಟೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಯುವಕರು ಗಾಂಜಾ ಸೇವನೆ ಮಾಡಿದ್ದರೇ ಎಂಬ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಇದಕ್ಕಾಗಿ ಆರೋಪಿಗಳಿಗೆ ಮೆಡಿಕಲ್ ಟೆಸ್ಟ್ ಮಾಡಿಸಲು ಪೊಲೀಸರು ಮುಂದಾಗಿದ್ದಾರೆ.