Site icon Vistara News

Jain College: ಅಂಬೇಡ್ಕರ್‌ಗೆ ಅಪಮಾನ ಪ್ರಕರಣ; ಆರು ಮಂದಿ ವಿರುದ್ಧ FIR- ಕಾಲೇಜು ಬೋರ್ಡ್‌ಗೆ ಕಪ್ಪು ಮಸಿ ಬಳಿದ ಸಂಘಟನೆಗಳು

#image_title

ಬೆಂಗಳೂರು: ಇಲ್ಲಿನ ಲಾಲ್‌ಬಾಗ್‌ನಲ್ಲಿರುವ ಜೈನ್‌ ಕಾಲೇಜು (Jain College) ವಿದ್ಯಾರ್ಥಿಗಳು ಕಾರ್ಯಕ್ರಮವೊಂದರಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್‌. ಅಂಬೇಡ್ಕರ್‌ ಅವರಿಗೆ ಅವಮಾನ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ದಕ್ಷಿಣ ವಿಭಾಗ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಯಿಂದ ಆರು ಜನರ ಮೇಲೆ ಎಫ್ಐಆರ್ ದಾಖಲಾಗಿದೆ. ಕಾಲೇಜಿನ ಪ್ರಾಂಶುಪಾಲರು, ಡೀನ್, ಕಾರ್ಯಕ್ರಮ ಆಯೋಜಕರು, ವಿದ್ಯಾರ್ಥಿಗಳು ಹಾಗೂ ಸ್ಕಿಟ್ ಬರಹಗಾರರ ಮೇಲೆ ಕೇಸ್ ದಾಖಲಾಗಿದೆ. ಜಯನಗರ ಎಸಿಪಿ ಶ್ರೀನಿವಾಸ್ ನೇತೃತ್ವದಲ್ಲಿ ತನಿಖೆ ಆರಂಭವಾಗಿದ್ದು, ಎಸ್‌ಸಿ, ಎಸ್‌ಟಿ ಆ್ಯಕ್ಟ್ ಹಾಗೂ ಐಪಿಸಿ 153a, 295a, 149 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಅಂಬೇಡ್ಕರ್ ಹಾಗೂ ಮೀಸಲಾತಿ ಬಗ್ಗೆ ಅವಹೇಳನ ಸಂಬಂಧ ಈಗಾಗಲೇ ನೋಟಿಸ್ ನೀಡಲಾಗಿದ್ದು, ಎಸಿಪಿ ಶ್ರೀನಿವಾಸ್‌ ಶನಿವಾರ ಕಾಲೇಜು ಆಡಳಿತ ಮಂಡಳಿಯವರಿಂದ ವಿವರಣೆ ಪಡೆದಿದ್ದಾರೆ. ಭಾನುವಾರವೂ ವಿಚಾರಣೆಯನ್ನು ಮುಂದುವರಿಸಿರುವ ಅವರು, ಪ್ರಾಂಶುಪಾಲರು ಸೇರಿ ವಿದ್ಯಾರ್ಥಿಗಳ ವಿಚಾರಣೆಯನ್ನು ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

jain college

ಯೂನಿವರ್ಸಿಟಿ ಬೋರ್ಡ್‌ಗೆ ಕಪ್ಪು ಮಸಿ ಬಳಿದು ಆಕ್ರೋಶ

ಅಪಮಾನದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ದಲಿತ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿ, ಕಾಲೇಜು ಬೋರ್ಡ್‌ಗೆ ಕಪ್ಪು ಮಸಿ ಬಳಿದು ಕಿಡಿಕಾರಿದ್ದಾರೆ. ಕಾಲೇಜು ಗೇಟ್‌ ಮುಂದೆ ನಿಂತು ದಿಕ್ಕಾರ ಕೂಗಿದ ಕಾರ್ಯಕರ್ತರು, ಕಾಲೇಜು ಗೇಟ್ ಹಾರಲು ಯತ್ನಿಸಿದ್ದಾರೆ. ಈ ವೇಳೆ ಎಲ್ಲರನ್ನೂ ಪೊಲೀಸರು ವಶಕ್ಕೆ ಪಡೆದುಕೊಂಡರು.

ಆರು ವಿದ್ಯಾರ್ಥಿಗಳು ಸಸ್ಪೆಂಡ್‌

ವಿದ್ಯಾರ್ಥಿಗಳ ಸ್ಕಿಟ್ ಪ್ರದರ್ಶನದಿಂದಾಗಿ ಮುಜುಗರಕ್ಕೀಡಾಗಿರುವ ಜೈನ್‌ ಕಾಲೇಜು ಆಡಳಿತ ಮಂಡಳಿಯೂ ಅಸಮಾಧಾನ ಹೊರಹಾಕಿದೆ. ಬೇಷರತ್ ಕ್ಷಮೆಯಾಚಿಸಿದ್ದು, ಆರು ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಏನಿದು ಪ್ರಕರಣ?

ಲಾಲ್ ಬಾಗ್ ರಸ್ತೆಯಲ್ಲಿರುವ ಜೈನ್ ಕಾಲೇಜಿನಲ್ಲಿ ಕಳೆದ ಫೆ.5ರಂದು ಕಾಲೇಜು ಯೂತ್‌ ಫೆಸ್ಟ್ ನಡೆಸಲಾಗಿತ್ತು. ನಗರದ ನಿಮಾನ್ಸ್ ಕನ್ವೆನ್ಷನ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಾತಿ ವ್ಯವಸ್ಥೆಯನ್ನು ಖಂಡಿಸುವ ಸಂದೇಶವನ್ನು ಕೊಡುವ ಭರದಲ್ಲಿ ವಿದ್ಯಾರ್ಥಿಗಳು ಯಡವಟ್ಟು ಮಾಡಿಕೊಂಡಿದ್ದರು. ಕಾಲೇಜು ಫೆಸ್ಟ್‌ನಲ್ಲಿ ಹಾಸ್ಯ ಜತೆಗೆ ದಲಿತರನ್ನು ಗೇಲಿ ಮಾಡಿದ್ದಾರೆಂದು ದಲಿತಪರ ಸಂಘಟನೆಗಳು ಆರೋಪಿಸಿವೆ.

ಸಿಎಂಎಸ್‌ ಥಿಯೇಟರ್ ಗ್ರೂಪ್ ದಿ ಡೆಲ್ರಾಯ್ಸ್ ಬಾಯ್ಸ್ ಈ ಸ್ಕಿಟ್ ಅನ್ನು ಪ್ರದರ್ಶಿಸಿದರು. ಡಾ. ಬಿ.ಆರ್. ಅಂಬೇಡ್ಕರ್ ಅಲ್ಲ. ಅವರು ʻಬಿಯರ್ ಅಂಬೇಡ್ಕರ್ʼ ಎಂದು ಅವಹೇಳನ ಮಾಡಿದ್ದರು. ಸ್ಕಿಟ್‌ನಲ್ಲಿ ದಲಿತ ಯುವತಿ ಬಗ್ಗೆಯೂ ಅವಮಾನ ಮಾಡಿದ್ದು, ‘ಡೋಂಟ್ ಟಚ್ ಮಿ, ಟಚ್ ಮಿ’ ಎಂಬ ಹಾಡನ್ನು ಹಾಕಿ ಗೇಲಿ ಮಾಡಿದ್ದರು. ‘ನೀವು ಡಿ-ಲಿಟ್ ಆಗಿರುವಾಗ ದಲಿತರಾಗಿರಲು ಕಾರಣವೇನು’ ಎಂದು ‍ವಿವಾದಾತ್ಮಕವಾಗಿ ನುಡಿದಿದ್ದರು.

ಇದನ್ನೂ ಓದಿ: Hernia: ಹರ್ನಿಯಾ ಇದೆಯೇ? ಹಾಗಿದ್ದರೆ ಎಚ್ಚರಿಕೆ ವಹಿಸಲು ಏನೇನು ಮಾಡಬೇಕು?

ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ದಲಿತ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಘಟನೆಯ ಬಗ್ಗೆ ಮಹಾರಾಷ್ಟ್ರದಲ್ಲಿ ದಲಿತ ಸಂಘಟನೆಯ ಮುಖಂಡ ಅಕ್ಷಯ್ ಬನ್ಸೋಡೆ ಎಂಬುವವರು ನಾಂದೇಡ್ (ಮಹಾರಾಷ್ಟ್ರ) ಜಿಲ್ಲಾ ಪೊಲೀಸ್ ವರಿಷ್ಠಾಕಾರಿಗಳಿಗೆ ದೂರು ನೀಡಿದ್ದರು. ಘಟನೆ ಬಗ್ಗೆ ಎಲ್ಲೆಡೆ ಸುದ್ದಿ ಹರಿದಾಡುತ್ತಿದ್ದಂತೆ ಜೈನ್‌ ಕಾಲೇಜು ಆಡಳಿತ ಮಂಡಳಿ ಕ್ಷಮೆಯಾಚಿಸಿತ್ತು.

Exit mobile version