ಬೆಂಗಳೂರು: ಇಲ್ಲಿನ ಜಯನಗರದಲ್ಲಿರುವ ಜೈನ್ ಕಾಲೇಜಿನಲ್ಲಿ (Jain College) ನಡೆದ ಯೂತ್ ಫೆಸ್ಟ್‌ನಲ್ಲಿ ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ಅವರಿಗೆ ಅವಹೇಳನ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಅವಹೇಳನ ಮಾಡಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ಆದ ವಿಡಿಯೊ ಗಮನಿಸಿ ಮಹಾರಾಷ್ಟ್ರದಲ್ಲಿ ದಲಿತ ಸಂಘಟನೆಯ ದೂರು ದಾಖಲಿಸಿದ್ದಾರೆ.
ಲಾಲ್ ಬಾಗ್ ರಸ್ತೆಯಲ್ಲಿರುವ ಜೈನ್ ಕಾಲೇಜಿನಲ್ಲಿ ಫೆ.6ರಂದು ಕಾಲೇಜು ಫೆಸ್ಟ್ ನಡೆಸಲಾಗಿತ್ತು. ನಗರದ ನಿಮಾನ್ಸ್ ಕನ್ವೆನ್ಷನ್ ಹಾಲ್‌ನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಜಾತಿ ವ್ಯವಸ್ಥೆಯನ್ನು ಖಂಡಿಸುವ ಸಂದೇಶವನ್ನು ಕೊಡುವ ಭರದಲ್ಲಿ ವಿದ್ಯಾರ್ಥಿಗಳು ಯಡವಟ್ಟು ಮಾಡಿಕೊಂಡಿದ್ದಾರೆ. ಕಾಲೇಜು ಫೆಸ್ಟ್‌ನಲ್ಲಿ ಹಾಸ್ಯ ಜತೆಗೆ ದಲಿತರನ್ನು ಗೇಲಿ ಮಾಡಿದ್ದಾರೆಂದು ದಲಿತಪರ ಸಂಘಟನೆಗಳು ಆರೋಪಿಸಿವೆ.
ಡಾ. ಬಿ.ಆರ್. ಅಂಬೇಡ್ಕರ್ ಅಲ್ಲ. ಅವರು ʻಬಿಯರ್ ಅಂಬೇಡ್ಕರ್ʼ ಎಂದು ಅವಹೇಳನ ಮಾಡಿದ್ದಾರೆ. ಸ್ಕಿಟ್‌ನಲ್ಲಿ ದಲಿತ ಯುವತಿ ಬಗ್ಗೆಯೂ ಅವಮಾನ ಮಾಡಿದ್ದು, ‘ಡೋಂಟ್ ಟಚ್ ಮಿ, ಟಚ್ ಮಿ’ ಎಂಬ ಹಾಡನ್ನು ಹಾಕಿ ಗೇಲಿ ಮಾಡಿದ್ದಾರೆ. ‘ನೀವು ಡಿ-ಲಿಟ್ ಆಗಿರುವಾಗ ದಲಿತರಾಗಿರಲು ಕಾರಣವೇನು’ ಎಂದು ವಿವಾದಾತ್ಮಕವಾಗಿ ನುಡಿದಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ವೈರಲ್ ಆಗುತ್ತಿದ್ದಂತೆ ದಲಿತ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದು, ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ. ಘಟನೆಯ ಬಗ್ಗೆ ಈಗಾಗಲೇ ಮಹಾರಾಷ್ಟ್ರದಲ್ಲಿ ದಲಿತ ಸಂಘಟನೆಯ ಮುಖಂಡ ಅಕ್ಷಯ್ ಬನ್ಸೋಡೆ ಎಂಬುವವರು ನಾಂದೇಡ್ (ಮಹಾರಾಷ್ಟ್ರ) ಜಿಲ್ಲಾ ಪೊಲೀಸ್ ವರಿಷ್ಠಾಕಾರಿಗಳಿಗೆ ದೂರು ನೀಡಿದ್ದಾರೆ.
ಕಾಲೇಜು ಆಡಳಿತ ಮಂಡಳಿಯಿಂದ ತಪ್ಪೊಪ್ಪಿಗೆ
ಘಟನೆ ಬಗ್ಗೆ ಎಲ್ಲೆಡೆ ಸುದ್ದಿ ಹರಿದಾಡುತ್ತಿದ್ದಂತೆ ಜೈನ್ ಕಾಲೇಜು ಆಡಳಿತ ಮಂಡಳಿ ಕ್ಷಮೆಯಾಚಿಸಿದೆ. ಈಗಾಗಲೇ ವಿದ್ಯಾರ್ಥಿಗಳನ್ನು ಈ ಬಗ್ಗೆ ನಾವು ಪ್ರಶ್ನಿಸಿದ್ದು, ಶಿಸ್ತು ಕ್ರಮ ಕೈಗೊಳ್ಳುತ್ತೇವೆ. ಕಾಲೇಜಿನ ಶಿಸ್ತುಪಾಲನಾ ಕಮಿಟಿಯಿಂದ ವಿದ್ಯಾರ್ಥಿಗಳನ್ನು ವಿಚಾರಣೆ ಮಾಡಲಾಗುತ್ತದೆ. ಜಾತಿ ವ್ಯವಸ್ಥೆಯನ್ನು ಖಂಡಿಸುವ ವಿಚಾರದಲ್ಲಿ, ಮ್ಯಾಡ್ ಆ್ಯಡ್ (ಇವೆಂಟ್) ಮೂಲಕ ಸಂದೇಶ ರವಾನಿಸಿದ್ದಾರೆ ಎಂದು ತಪ್ಪೊಪ್ಪಿಕೊಂಡಿದೆ.
ಇದನ್ನೂ ಓದಿ: Road Accident: ಅತಿ ವೇಗ ಚಾಲನೆ ತಂದ ಆಪತ್ತು; ಹಾರಿ ಹೋಯ್ತು ಬೈಕ್ ಸವಾರನ ಪ್ರಾಣಪಕ್ಷಿ