ಶಿರಸಿ: ಜಿಲ್ಲೆಯ ಅನೇಕ ಕೆರೆಗಳನ್ನು ಅಭಿವೃದ್ಧಿಗೊಳಿಸಿ ಆಧುನಿಕ ಭಗೀರಥ ಎನಿಸಿಕೊಂಡ ಶಿರಸಿಯ ಜೀವ ಜಲ ಕಾರ್ಯಪಡೆ (Jeevajala Taskforce) ಈ ವರ್ಷದ ಪುನರುಜ್ಜೀವನ ಕಾರ್ಯಾಚರಣೆಗೆ ಈಗಾಗಲೇ ಚಾಲನೆ ನೀಡಿದೆ. ಜೈನ ಮಠದ ಕೆರೆ ಮತ್ತು ಯಚಡಿಯ ಪುಷ್ಕರಣಿಯ ಅಭಿವೃದ್ಧಿಯಲ್ಲೂ ಬಹುಪಾಲಿನ ಕೊಡುಗೆ ನೀಡಿದೆ. ತಾಲೂಕಿನ ಯಚಡಿಯ ಪುರಾತನ ಗ್ರಾಮ ದೇವರಾದ ಶ್ರೀರಾಮಲಿಂಗೇಶ್ವರ ದೇವಸ್ಥಾನದ ಎದುರಿಗೆ ಇರುವ ಪುಷ್ಕರಣಿಯ ಅಭಿವೃದ್ಧಿಗೆ ಕಂಕಣ ತೊಟ್ಟು ತನ್ನ ಪಾಲಿನ ಕೆಲಸ ಪೂರ್ಣಗೊಳಿಸಿದೆ.
ಯಚಡಿಯ ಗ್ರಾಮ ದೇವಸ್ಥಾನ ಅಭಿವೃದ್ಧಿ ಟ್ರಸ್ಟ್ ಹಾಗೂ ಆಡಳಿತ ಮಂಡಳಿಯು ಕೆರೆಯ ಅಭಿವೃದ್ಧಿಗೆ ಚಿಂತನೆ ನಡೆಸಿತ್ತು. ಒಂದು ಪಾರ್ಶ್ವದಲ್ಲಿ ಮಣ್ಣು ಜರಿದು ಅರ್ಧ ಕೆರೆ ನಾಶವಾಗಿತ್ತು. ಇದರ ಹೂಳೆತ್ತಿದರೆ ಜೀವ ಜಲ ಬಳಸಬಹುದು ಎಂಬುದು ಅವರ ಕನಸಾಗಿತ್ತು. ಅವರು ಜೀವ ಜಲ ಕಾರ್ಯಪಡೆ ಅಧ್ಯಕ್ಷ, ಜಲ ಯೋಗಿ ಶ್ರೀನಿವಾಸ ಹೆಬ್ಬಾರ್ ಅವರಲ್ಲಿ ತಮ್ಮ ಕನಸಿನ ಬಗ್ಗೆ ಮಾತನಾಡಿದರು. ಇದಕ್ಕೆ ತಕ್ಷಣ ಸ್ಪಂದಿಸಿದ ಹೆಬ್ಬಾರ್ ಅವರು ಜೀವಜಲ ಕಾರ್ಯಪಡೆ ಮೂಲಕ ‘ದೇವರ ಕೆರೆ’ಯ ಕಾಯಕಲ್ಪಕ್ಕೆ ಕೈಜೋಡಿಸಿದರು.
ಇದನ್ನೂ ಓದಿ: Bengaluru-Mysuru Expressway: ಕಾಂಗ್ರೆಸ್ ನಿಯೋಗ ಹೆದ್ದಾರಿ ವೀಕ್ಷಿಸುತ್ತಿದ್ದಾಗ ಮೋದಿಗೆ ಜೈಕಾರ ಹಾಕಿದ ಬೈಕ್ ಸವಾರ!
ಹುಣಸೆಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಚಡಿ ಕೆರೆ ಅಭಿವೃದ್ಧಿಗೆ ರಾಷ್ಟ್ರೀಯ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಯೋಜಿಸಿ ಹೆಜ್ಜೆ ಇಟ್ಟರೂ ಮುಂದಿನ ಮಳೆಗಾಲದ ಒಳಗೆ ಸುತ್ತಲೂ ಪಿಚ್ಚಿಂಗ್ ಕಟ್ಟಬೇಕಿತ್ತು. ಹೂಳೆತ್ತುವ ಕೆಲಸ ವಿಳಂಬವಾದರೆ ಮುಂದೆ ಪಿಚ್ಚಿಂಗ್ ಕಟ್ಟಲು ಸಮಸ್ಯೆ ಆದೀತೆಂದು ಕಾರ್ಯಪಡೆಯ ನೆರವನ್ನು ಗ್ರಾಮಸ್ಥರು ಕೇಳಿದರು. ಕಳೆದ 8 ದಿನಗಳಿಂದ ಕಾರ್ಯಪಡೆಯು ಹದಿನೈದಕ್ಕೂ ಅಧಿಕ ಗ್ರಾಮಸ್ಥರ ಸಹಭಾಗಿತ್ವದಿಂದ ನಿರಂತರವಾಗಿ ಕೆಲಸ ಮಾಡಿ ಒಂದು ಹಂತದ ಕೆರೆ ಅಭಿವೃದ್ಧಿ ಪೂರ್ಣಗೊಳಿಸಲಾಗಿದೆ.
ಇದನ್ನೂ ಓದಿ: Savarkar: ವೀರ ಸಾವರ್ಕರ್ ಪಾತ್ರದಲ್ಲಿ ನಟ ಸುನೀಲ್ ರಾವ್: ಫಸ್ಟ್ ಲುಕ್ ಔಟ್
“ನಾಲ್ಕು ಗುಂಟೆ 12 ಅಣೆ ಕೆರೆ ಇದಾಗಿದ್ದು, ಕೆರೆಯೊಳಗಿನ ಐನೂರಕ್ಕೂ ಅಧಿಕ ಟ್ರ್ಯಾಕ್ಟರ್ ಮಣ್ಣು ಹೊರ ಹಾಕಲಾಗಿದೆ. ಬೆಳಗ್ಗೆ 8 ರಿಂದ ಸಂಜೆ 6-7 ಗಂಟೆ ತನಕ ಕೆಲಸ ಮಾಡಿ ಇದನ್ನು ಪೂರ್ಣಗೊಳಿಸಲಾಗಿದೆ” ಎನ್ನುತ್ತಾರೆ ಕಾರ್ಯಪಡೆಯ ಶ್ರೀಧರ ಭಟ್ಟ ಕೊಳಗಿಬೀಸ್.
“ಕೆರೆಯಿಂದ ಈಗಲೂ ಮೂರಿಂಚು ನೀರು ಹರಿಯುತ್ತಿದೆ. ಹೆಬ್ಬಾರರ ನೆರವಿನಿಂದ ಈಗ ಕೆರೆ ಒಂದು ಆಕಾರಕ್ಕೆ ಬಂದಿದೆ. ಉದ್ಯೋಗ ಖಾತ್ರಿಯಲ್ಲಿ ಪಿಚ್ಚಿಂಗ್ ಕೂಡ ಮಾಡಬೇಕಾಗಿದೆ” ಎನ್ನುತ್ತಾರೆ ಟ್ರಸ್ಟ್ ಅಧ್ಯಕ್ಷ ರತ್ನಾಕರ ನಾಯ್ಕ ಹಾಗೂ ದೇವಸ್ಥಾನ ಆಡಳಿತ ಮಂಡಳಿಯ ಕಾರ್ಯದರ್ಶಿ ಗಣೇಶ ಹೆಗಡೆ ಕಲ್ಮನೆ.
ಇದನ್ನೂ ಓದಿ: Bengaluru Metro work: ಚಲ್ಲಘಟ್ಟ ಟು ವೈಟ್‌ಫೀಲ್ಡ್; ಅತಿ ಉದ್ದದ ಮೆಟ್ರೋ ಮಾರ್ಗ ಲೋಕಾರ್ಪಣೆಗೆ ಶೀಘ್ರ ರೆಡಿ
“ಉದ್ಯೋಗ ಖಾತ್ರಿ ಯೋಜನೆಯ ಜೊತೆ ಜೀವ ಜಲ ಕಾರ್ಯಪಡೆ ಸಹಕಾರ ಮರೆಯಲು ಸಾಧ್ಯವಿಲ್ಲ. ಹೆಬ್ಬಾರರ ಕೊಡುಗೆ ಇಲ್ಲವಾದರೆ ಕೆರೆಯ ಅಭಿವೃದ್ಧಿ ಕನಸಾಗೇ ಇರುತ್ತಿತ್ತು. ಇನ್ನು ನರೇಗಾದಲ್ಲಿ ಪಿಚ್ಚಿಂಗ್ ಮಾಡಿಸಬೇಕಿದೆ” ಎಂದು ಆಡಳಿತ ಮಂಡಳಿಯ ಕಾರ್ಯದರ್ಶಿ ಗಣೇಶ ಹೆಗಡೆ ಕಲ್ಮನೆ ಹೇಳಿದರು.
ಇದನ್ನೂ ಓದಿ: ಹಾವೇರಿ ಜಿಲ್ಲೆಯ 1.65 ಲಕ್ಷ ರೈತರಿಗೆ 438 ಕೋಟಿ ರೂ.ಗಳ ಬೆಳೆ ವಿಮೆ- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
“ಮನೆಗೆ ಬಂದವರಿಗೆ ಊಟ ಹಾಕಲು ಯೋಚಿಸುವ ಜನರ ನಡುವೆ ಶ್ರೀನಿವಾಸ್ ಹೆಬ್ಬಾರ್ ಅವರಂಥವರನ್ನು ಆ ಭಗವಂತನೇ ಸೃಷ್ಟಿಸುತ್ತಾನೆ. ಉಳ್ಳವರು ನೆಲ ಜಲಕ್ಕೆ ನೆರವಾಗುವುದು ಅಚ್ಚರಿ” ಎನ್ನುತ್ತಾರೆ ಮಹಾಬಲೇಶ್ವರ ನಾಯ್ಕ, ಯಚಡಿ.
“ಜೀವ ಜಲಕ್ಕೆ ಆಶ್ರಯ ತಾಣವೇ ಕೆರೆಗಳು. ಅವುಗಳ ಉಳಿವಿಗೆ ನಮ್ಮದು ಒಂದು ಸೇವೆ. ಜಲ ರಕ್ಷಣೆಯಲ್ಲಿ ಜೊತೆಯಾದರೆ ನೆಮ್ಮದಿ ಸಿಗುತ್ತದೆ” ಎನ್ನುವುದು ಜೀವ ಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಸ್ಪಷ್ಟ ಅಭಿಪ್ರಾಯ.
ಇದನ್ನೂ ಓದಿ: INDvsAUS : ಮಾಜಿ ಸ್ಪಿನ್ ಬೌಲರ್ ಅನಿಲ್ ಕುಂಬ್ಳೆ ದಾಖಲೆ ಮುರಿದ ಆರ್ ಅಶ್ವಿನ್