Site icon Vistara News

ಕೊಡಗಿನ ಬಳಿಕ ಚಾಮರಾಜನಗರದ ಬೆಟ್ಟಗಳಲ್ಲೂ ಜಲಸ್ಫೋಟ: ರಾತ್ರಿಯ ಭಯಾನಕ ಸದ್ದಿಗೆ ಬೆಚ್ಚಿಬಿದ್ದ ಜನ

Chamaraj nagar

ಚಾಮರಾಜ ನಗರ: ಚಾಮರಾಜ ನಗರ ತಾಲೂಕಿನ ಬಸಪ್ಪನ ಪಾಳ್ಯದ ಜನ ಮಂಗಳವಾರ ರಾತ್ರಿ ಕೇಳಿಬಂದ ಭಯಾನಕ ಸದ್ದಿಗೆ ಬೆಚ್ಚಿ ಬಿದ್ದು ಮನೆಯಿಂದ ಹೊರಗೋಡಿ ಬಂದಿದ್ದರು. ದೊಡ್ಡ ಸದ್ದು, ಕ್ಷಣಕಾಲ ಭೂಮಿಯೇ ಅದುರಿದ ಅನುಭವದಿಂದ ಅವರೆಲ್ಲ ಭಯಗೊಂಡಿದ್ದರು.

ರಾತ್ರಿ ಸುಮಾರು ೮.೩೦ರ ಹೊತ್ತಿಗೆ ಈ ಘಟನೆ ನಡೆದಿದೆ. ಮನೆಯಲ್ಲಿದ್ದ ಪಾತ್ರೆಗಳೆಲ್ಲ ಒಮ್ಮೆಗೇ ಅಲುಗಾಡಿದ್ದವು. ಕೆಲವರ ಮನೆ ಪಾತ್ರೆಗಳು ಉರುಳಿದ್ದವು. ಅದಕ್ಕಿಂತಲೂ ದೊಡ್ಡದಾಗಿ ಸದ್ದು ಕೇಳಿದ್ದು, ಇದುವರೆಗೂ ಕಂಡರಿಯದ ಘಟನೆಯಿಂದ ರಾತ್ರಿಯೇ ಮನೆ ಬಿಟ್ಟು ಹೊರಗೆ ಬಂದಿದ್ದರು. ರಾತ್ರಿ ತುಂಬಾ ಹೊತ್ತು ಅವರು ಮನೆಯಲ್ಲಿ, ರಸ್ತೆಯಲ್ಲೇ ಸಮಯ ಕಳೆದಿದ್ದರು.

ಈ ನಡುವೆ, ಈ ಸದ್ದಿನ ಮೂಲ ಯಾವುದು ಎನ್ನುವ ಬಗ್ಗೆ ದೊಡ್ಡ ಚರ್ಚೆ ನಡೆದಿದೆ. ಕೊಡಗು ಭಾಗದಲ್ಲಿ ಕಳೆದ ವರ್ಷದ ಮತ್ತು ಈ ಬಾರಿ ಸಂಭವಿಸಿದ ಜಲ ಸ್ಫೋಟವೇ ಇಲ್ಲೂ ಸಂಭವಿಸಿದೆ ಎಂಬ ಬಗ್ಗೆ ಮಾತುಗಳು ಕೇಳಿಬಂದವು. ಅದೀಗ ನಿಜವಾಗಿದೆ.

ಚಾಮರಾಜ ನಗರದ ಬಸಪ್ಪನ ಪಾಳ್ಯದಲ್ಲಿ ದೊಡ್ಡ ಸದ್ದು ಕೇಳಿಬಂದಾಗ ಜನ ಭಯಗೊಂಡು ಮನೆಯಿಂದ ಹೊರಬಂದಿರುವುದು.

ಇದು ಭೂಕಂಪವಲ್ಲ, ಭೂಮಿಯ ಒಳಗೆ ಸಂಭವಿಸಿರುವ ಜಲಸ್ಪೋಟ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕ ನಂಜುಂಡಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. ಭೂಮಿಯ ಒಳಗಿನ ಜಲ ವಿದ್ಯಮಾನಗಳಿಂದ
(hydrological phenomena) ಘಟಿಸಿರುವ ಶಬ್ದ ಎಂದು ಅವರು ಹೇಳಿದ್ದಾರೆ.

ಇತ್ತೀಚೆಗೆ ಈ ಭಾಗದಲ್ಲಿ ಬಿದ್ದ ಭಾರಿ ಮಳೆಯಿಂದಾಗಿ ನೀರು ಭೂಮಿಯ ಒಳಪದರದಲ್ಲಿ ಖಾಲಿ ಇರುವ ಜಾಗಕ್ಕೆ ಕಂದಕಗಳ ಮೂಲಕ ನೀರು ನುಗ್ಗಿದೆ. ಇದು ಒತ್ತಡಕ್ಕೆ ಒಳಗಾಗಿ ಸ್ಫೋಟಗೊಂಡ ಸದ್ದು ಬರುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಸದ್ದಿನೊಂದಿಗೆ ಜಲಸ್ಪೋಟ
ಪುಷ್ಪಗಿರಿ ಅರಣ್ಯ ಭಾಗದಲ್ಲಿ ಬರುವ ಕೊಡಗಿನ ಸಂಪಾಜೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ಭಾಗದಲ್ಲಿ ಗುಡ್ಡ ಭಾಗದಲ್ಲಿ ಜಲಸ್ಫೋಟ ಸಂಭವಿಸಿತ್ತು. ಮೇಲ್ಮೈಯ ಬಿರುಕುಗಳ ಮೂಲಕ ಒಳಸೇರುವ ನೀರು ಒತ್ತಡದಿಂದ ಸ್ಪೋಟಗೊಂಡ ಸದ್ದಿನೊಂದಿಗೆ ನೀರು ಹೊರಬರುತ್ತದೆ. ಇದು ಈ ಭಾಗದಲ್ಲಿ ದೊಡ್ಡ ಪ್ರಮಾಣದ ಮಣ್ಣಿನ ಪ್ರವಾಹವನ್ನೇ ಸೃಷ್ಟಿ ಮಾಡುತ್ತದೆ. ಒಳಗಿನ ನೀರಿನ ಸಂಗ್ರಹವೇ ಹೊಳೆಯಾಗಿ ಹರಿಯುವುದರಿಂದ ಭಾರಿ ಪ್ರಮಾಣದಲ್ಲಿ ಪ್ರವಾಹಗಳೇ ಸೃಷ್ಟಿಯಾಗುತ್ತವೆ.

ಇದನ್ನೂ ಓದಿ | Rain news | ಕೊಡಗಿನಲ್ಲಿ ಜಲಸ್ಫೋಟ : ರಬ್ಬರ್ ತೋಟ ಕುಸಿದು ಅಪಾರ ಹಾನಿ

Exit mobile version