ಕೊಪ್ಪಳ/ ಬಳ್ಳಾರಿ: ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಮೂಲಕ ರಾಜಕೀಯ ಜೀವನದ ಎರಡನೇ ಇನಿಂಗ್ಸ್ ಆರಂಭಿಸಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು, ಗಂಗಾವತಿ ಹಾಗೂ ಬಳ್ಳಾರಿಯಲ್ಲಿ ಬುಧವಾರ ಶಕ್ತಿ ಪ್ರದರ್ಶನ ಮಾಡಿದ್ದಾರೆ. ರೆಡ್ಡಿ 56ನೇ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ಬಳ್ಳಾರಿಯಲ್ಲಿ ಕುಟುಂಬಸ್ಥರು ಬೈಕ್ ರ‍್ಯಾಲಿ ಜತೆಗೆ ಬೃಹತ್ ಕಾರ್ಯಕ್ರಮ ನಡೆಸಿದ್ದರೆ, ಮತ್ತೊಂದೆಡೆ ಗಂಗಾವತಿಯಲ್ಲಿ ಜನಾರ್ದನ ರೆಡ್ಡಿ (Janardhana Reddy) ಬೈಕ್ ರ‍್ಯಾಲಿ ಹಾಗೂ ರೋಡ್ ಶೋ ನಡೆಸಿ ಶಕ್ತಿ ಪ್ರದರ್ಶನ ಮಾಡಿದರು.
ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ಗಂಗಾವತಿಯ ಹಿರೇಜಂತಕಲ್‌ನಲ್ಲಿರುವ ಶ್ರೀ ಪ್ರಸನ್ನ ಪಂಪಾ ವಿರುಪಾಕ್ಷ ದೇವಸ್ಥಾನಕ್ಕೆ ಜನಾರ್ಧನ ರೆಡ್ಡಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ದೇವಸ್ಥಾನದ ಬಳಿಯಿಂದ ಬೈಕ್ ರ‍್ಯಾಲಿಗೆ ಚಾಲನೆ ನೀಡಿ, ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿದರು. ಕೃಷ್ಣ ದೇವರಾಯ ಸರ್ಕಲ್ ಬಳಿ ಅಭಿಮಾನಿಗಳು ಜೆಸಿಬಿಯಲ್ಲಿ ನಿಂತು ರೆಡ್ಡಿಗೆ ಪುಷ್ಪವೃಷ್ಟಿ ನಡೆಸುವ ಮೂಲಕ ಅಭಿಮಾನ ವ್ಯಕ್ತಪಡಿಸಿದರು. ನೂರಾರು ಯುವಕರು ಪಾಲ್ಗೊಂಡಿದ್ದ ಬೈಕ್ ರ‍್ಯಾಲಿಯಲ್ಲಿ ಜಾಂಜ್ ಮೇಳ ಗಮನ ಸೆಳೆಯಿತು. ಇನ್ನು ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅನೇಕರು ಜನಾರ್ದನರೆಡ್ಡಿಯನ್ನು ಹಾಡಿಹೊಗಳಿದರು. ಈ ಬಾರಿಯ ಚುನಾವಣೆಯಲ್ಲಿ ಗಂಗಾವತಿ ಕ್ಷೇತ್ರದಿಂದ ಆಯ್ಕೆ ಮಾಡಬೇಕು ಎಂದು ಕೋರಿದರು.
ಇದನ್ನೂ ಓದಿ | Textile Park | 25 ತಾಲೂಕುಗಳಲ್ಲಿ ಮಿನಿ ಟೆಕ್ಸ್‌ಟೈಲ್ ಪಾರ್ಕ್ ಸ್ಥಾಪಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ
2023ರಲ್ಲಿ ಗಂಗಾವತಿ ಕ್ಷೇತ್ರ ಹೇಗಿತ್ತು, 2028ರಲ್ಲಿ ಹೇಗಿರುತ್ತೋ ನೋಡಿ
ನಿಮ್ಮ ಆಶೀರ್ವಾದವಿದ್ದರೆ ನಾನು ಎಲ್ಲಿಗೆ ಬೇಕಾದರೂ ಹೋಗುತ್ತೇನೆ. ನಾನು ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆ. ಕೆಲಸ ಮಾಡಿ ತೋರಿಸಬೇಕು ಎಂದು ನಾನು ಇಲ್ಲಿಗೆ ಬಂದಿದ್ದೇನೆ. 2023ರಲ್ಲಿ ಗಂಗಾವತಿ ಕ್ಷೇತ್ರ ಹೇಗಿತ್ತು, 2028ರಲ್ಲಿ ಹೇಗಿರುತ್ತೆ ಎಂಬುದನ್ನು ನೋಡಿ. ಮುಂದೆ ನನಗೆ ವೋಟ್ ಹಾಕಿದರೆ, ನಾನು ಅಂಜನಾದ್ರಿಯನ್ನು ತಿರುಪತಿ, ಅಯೋಧ್ಯೆ ಮಾದರಿಯಲ್ಲಿ ಅಭಿವೃದ್ಧಿಪಡಿಸಿ ತೋರಿಸುವೆ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಹೇಳಿದರು.
ʻʻನಾನು ಕಣ್ಣೀರು ಹಾಕುವುದೆಲ್ಲ 12 ವರ್ಷದ ಹಿಂದೆ ಮುಗಿದು ಹೋಯ್ತು. ಬೆಂಗಳೂರಿನಲ್ಲಿ ಇದ್ದು ಇದ್ದು ಬೇಜಾರಾಗಿತ್ತು. ಗಂಗಾವತಿಗೆ ಬಂದ ಮೇಲೆ ಹೆಚ್ಚು ಶಕ್ತಿ ಬಂದಿದೆ. ಬಳ್ಳಾರಿಯಲ್ಲಿ ನನ್ನ ಪತ್ನಿ ಹಾಗೂ ಮಗಳು ಇಂದಿನ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ್ದಾರೆ. ಗಂಗಾವತಿಯಲ್ಲಿ ಅನೇಕರು ಈಗಾಗಲೇ ಪಕ್ಷ ಸೇರುತ್ತಿದ್ದಾರೆ. ಶಾಸಕ, ಸಚಿವನಾಗಿದ್ದಾಗ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ನಾನು ಯಾವುದಕ್ಕೂ ಎದೆಗುಂದಿಲ್ಲ. ಬಸವಣ್ಣನವರಂತಹವರಿಗೆ ಅನೇಕ ಕಷ್ಟ ಕೊಟ್ಟರು. ಇನ್ನು ನಾನು ಸಾಮಾನ್ಯ ಮನುಷ್ಯ. ನನ್ನ ಕನಸುಗಳನ್ನು ನಿಲ್ಲಿಸುವ ಯೋಚನೆ ಮಾಡಿದರು. ಜಯಲಲಿತಾ ಅವರು ಜೈಲಿಗೆ ಹೋಗಿ ನಂತರ ಮುಖ್ಯಮಂತ್ರಿಯಾದರು. ಅವರ ಮೇಲೆ ಜನರ ಪ್ರೀತಿ ಹಾಗಿತ್ತು. ಹೀಗಾಗಿ ಜನರ ಪ್ರೀತಿ ಗಳಿಸುವುದು ನನ್ನ ಉದ್ದೇಶವೂ ಆಗಿದೆʼʼ ಎಂದರು.
ʻʻಆಸ್ತಿಗಳನ್ನೇ ಜಪ್ತಿ ಮಾಡುವ ಪ್ರಯತ್ನ ಮಾಡುತ್ತಿರುವಾಗ ಫೇಸ್ ಬುಕ್ ಜಪ್ತಿ ಮಾಡುವುದರಲ್ಲಿ ಆಶ್ಚರ್ಯವೇನಿಲ್ಲ.
ಆಸ್ತಿಗಳನ್ನು ಜಪ್ತಿ ಮಾಡಿದರೆ ಜನಾರ್ದನ ರೆಡ್ಡಿ ಏನು ಮಾಡುತ್ತಾರೆ ಎಂದು ಯಾರೂ ಚಿಂತೆ ಮಾಡಬೇಡಿ. ಅಂದು ೧೨೦೦ ಕೋಟಿ ರೂಪಾಯಿ ಜಪ್ತಿ ಮಾಡಿದ್ದರು. ಈಗ ನಾಲ್ಕು ಪಟ್ಟು ಆಗಿದೆ. ಕೆಳಗಿನ ಕೋರ್ಟ್‌ನಲ್ಲೂ ನಾನು ಗೆದ್ದಿರುವೆ. ಈಗ ಅವರು ಮೇಲಿನ ಕೋರ್ಟ್‌ಗೆ ಹೋಗಿದ್ದಾರೆ. ನಾನು ಯಾರ ಜೇಬಿಗೂ ಕೈಹಾಕದೆ, ಲಂಚ ತೆಗೆದುಕೊಳ್ಳದೆ ಸ್ವಂತ ವ್ಯಾಪಾರದಿಂದ ಸಂಪಾದನೆ ಮಾಡಿದ್ದೇನೆ. ನಾನು ಸತ್ಯದ ಹಾದಿಯಲ್ಲಿಯೇ ಜೀವನ ಮಾಡುತ್ತಿರುವೆ. ಇಂದಲ್ಲ ನಾಳೆ ಸತ್ಯ ಏನು ಎಂಬುದು ಜಗತ್ತಿಗೆ ಗೊತ್ತಾಗುತ್ತದೆ. ಆ ಸತ್ಯ ಗೊತ್ತುಪಡಿಸಿಯೇ ಉಸಿರು ಬಿಡುವೆʼʼ ಎಂದರು.
ಬಳ್ಳಾರಿಯಲ್ಲಿ ರೆಡ್ಡಿ ಕುಟುಂಬಸ್ಥರಿಂದ ಬೃಹತ್ ಕಾರ್ಯಕ್ರಮ, ಬೈಕ್ ರ‍್ಯಾಲಿ
ಅಕ್ರಮ ಗಣಿಗಾರಿಕೆ ಪ್ರಕರಣ ಸಂಬಂಧ ಗಣಿನಾಡಿಗೆ, ಜನಾರ್ದನ ರೆಡ್ಡಿ ಪ್ರವೇಶಕ್ಕೆ ನಿರ್ಬಂಧ ಇರುವ ಹಿನ್ನೆಲೆಯಲ್ಲಿ ಬಳ್ಳಾರಿಯಲ್ಲಿ ರೆಡ್ಡಿ ಕುಟುಂಬಸ್ಥರು ಹಾಗೂ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ(ಕೆಆರ್‌ಪಿಪಿ) ವತಿಯಿಂದ ಜನಾರ್ದನ ರೆಡ್ಡಿ ಅವರ ಬೃಹತ್ ಜನ್ಮದಿನ ಕಾರ್ಯಕ್ರಮ ಹಾಗೂ ಬೈಕ್ ರ‍್ಯಾಲಿ ಆಯೋಜಿಸಲಾಗಿತ್ತು. ಬಳ್ಳಾರಿಯ ಅಹಂಭಾವಿಯ ಜನಾರ್ದನ ರೆಡ್ಡಿ ನಿವಾಸದಿಂದ ಬೈಕ್ ರ‍್ಯಾಲಿಗೆ ರೆಡ್ಡಿ ಪತ್ನಿ ಅರುಣಾ ಲಕ್ಷ್ಮೀ ಅವರು ಚಾಲನೆ ನೀಡಿದರು. ರ‍್ಯಾಲಿಯಲ್ಲಿ ಸುಮಾರು 2 ಸಾವಿರಕ್ಕೂ ಹೆಚ್ಚು ಬೈಕ್‌ಗಳು ಭಾಗವಹಿಸಿದ್ದರು.
ರೆಡ್ಡಿ ಪುತ್ರಿ ಬ್ರಹ್ಮಣಿ ರೆಡ್ಡಿ ಮಾತನಾಡಿ, ಒಂದು ಕಡೆ ಸಂತೋಷ, ಇನ್ನೊಂದು ಕಡೆ ದುಃಖ, ಮಗದೊಂದು ಕಡೆ ದೊಡ್ಡ ಜವಾಬ್ದಾರಿ ಇದೆ. ನನ್ನ ತಂದೆಗೆ ಸಿಗುತ್ತಿರುವ ಜನ ಬೆಂಬಲ ನೋಡಿ ಸಂತಸವಾಗಿದೆ. ಅವರೇ ಕಟ್ಟಿರುವ ಸಾಮ್ರಾಜ್ಯದಿಂದ ಅವರೇ ದೂರವಾಗುವ ದುಸ್ಥಿತಿ ನಮ್ಮ ತಂದೆಗೆ ಬಂದಿದೆ. ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುವ ಬಳ್ಳಾರಿಯಿಂದ ದೂರ ಇರಬೇಕಾದ ವಿಧಿಯಾಟ ಇದೆ ಬೇಸರ ಹೊರಹಾಕಿದರು.
ಜಿಲ್ಲೆಯ ಸಾಧಕರು, ಹೋರಾಟಗಾರರ ಹೆಸರು ಮೆಲುಕು ಹಾಕಿದ ಬ್ರಹ್ಮಣಿ, ಚುನಾವಣೆಯನ್ನು ಒಗ್ಗಟ್ಟಾಗಿ ಎದುರಿಸೋಣ. ಇರುವ ನಿಜವನ್ನು ಇದ್ದ ಹಾಗೇ ಹೇಳೋಣ. ಅರ್ಧಕ್ಕೆ ನಿಂತಿರುವ ಅಭಿವೃದ್ಧಿ ಕೆಲಸಗಳು ರೆಡ್ಡಿ ಬೇಗನೆ ಬಾರಯ್ಯ ಎಂದು ಕೈಬೀಸಿ ಕರೆಯುತ್ತಿವೆ, ನಮ್ಮ ತಂದೆ ಒಂಟಿ ಇಲ್ಲ, ನೀವೆಲ್ಲರು ನಮ್ಮ ತಂದೆಯೊಂದಿಗೆ ಇದ್ದೀರಿ, ಕೆಲವೇ ದಿನಗಳಲ್ಲಿ ನಮ್ಮ ತಂದೆ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡುತ್ತಾರೆ ಎಂದು ಹೇಳಿದರು. ಇದೇ ವೇಳೆ ಜನಾರ್ದನ ರೆಡ್ಡಿ ಅವರ ಪತ್ನಿ ಅರುಣಾ ಲಕ್ಷ್ಮೀ ಮತ್ತಿರರು ಮಾತನಾಡಿದರು.
ನಾವಿಲ್ಲದೇ ಯಾವುದೇ ಸರ್ಕಾರ ಅಧಿಕಾರಕ್ಕೆ ಬರಲಾಗದ ಸ್ಥಿತಿ
ವಿಡಿಯೊ ಕಾನ್ಪರೆನ್ಸ್ ಮೂಲಕ ಬಳ್ಳಾರಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಜನಾರ್ದನ ರೆಡ್ಡಿ, ಬಳ್ಳಾರಿ ಜನರು ನನ್ನ ಜತೆಗೆ ಇದ್ದಾರೆ ಎನ್ನುವ ನಂಬಿಕೆ ಒದೆ. ಪಕ್ಷ ಕಟ್ಟಲು ರಾಜ್ಯ ಸುತ್ತುತ್ತಿದ್ದೇನೆ. ಪಕ್ಷ ಕಟ್ಟಿದ ಹದಿನೈದು ದಿನದಲ್ಲಿ ಬಹುತೇಕ ಜಿಲ್ಲೆಯ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಜನರು ಬದಲಾವಣೆ ಬಯಸುತ್ತಿದ್ದಾರೆ. ಬಳ್ಳಾರಿಯಿಂದಲೇ ಜನಾರ್ದನ ರೆಡ್ಡಿ ಎಂಬ ಹೆಸರು ಬಂದಿದೆ. ಹನ್ನೆರಡು ವರ್ಷದಿಂದ ಮನೆಯಿಂದ ಹೊರಗೆ ಬರಲಾಗದೇ ಇದ್ದೆ. ಗಂಗಾವತಿ ವಿಧಾನಸಭೆ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುತ್ತೇನೆ. ನೂರಕ್ಕೆ ನೂರರಷ್ಟು ನಾವಿಲ್ಲದೇ ಯಾವುದೇ ಸರ್ಕಾರ ಅಧಿಕಾರಕ್ಕೆ ಬರಲಾಗದ ಸ್ಥಿತಿ ಬರಬಹುದು. ಇದಕ್ಕಾಗಿ ಪಕ್ಷದ ಕಾರ್ಯಕರ್ತರು ಸಹಕರಿಸಬೇಕು ಎಂದು ಮನವಿ ಮಾಡಿದರು.
ನನ್ನ ಕುಟುಂಬದ ಜತೆಗೆ ನಾವಿದ್ದೇವೆ ಎಂದು ಹೇಳಿದ ಜನರಿಗೆ ಧನ್ಯವಾದ. ಇದೇ ಮೊದಲ ಬಾರಿಗೆ ನನ್ನ ಮಗಳು ಪಕ್ಷದ ವಿಚಾರ ಮಾತನಾಡಿದ್ದಾಳೆ. ಒಂದು ಕಡೆ ಸಂತೋಷ, ಮತ್ತೊಂದು ಕಡೆ ದುಖಃ ಇದೆ. ನಾನಿಲ್ಲದೇ ನನ್ನ ಹೆಂಡತಿ, ಮಗಳು ನನ್ನ ಹುಟ್ಟು ಹಬ್ಬ ಅಚರಣೆ ಮಾಡಿದ್ದಾರೆ ಎಂದ ಅವರು, ನನಗೆ ಇರುವ ಸೌಕರ್ಯಕ್ಕೆ ಲಂಡನ್‌ನಲ್ಲಿ ಇರಬಹುದಾಗಿತ್ತು. ಆದರೆ ನನಗೆ ಬಳ್ಳಾರಿಯಲ್ಲಿ ಇದ್ದರೆ ಮಾತ್ರ ನೆಮ್ಮದಿ ಸಿಗುತ್ತದೆ. ಇವತ್ತಲ್ಲ ನಾಳೆ ನಮ್ಮ ಕನಸು ಈಡೇರುತ್ತದೆ. ಬೆಂಗಳೂರು ನಂತರ ಬಳ್ಳಾರಿ ಎನ್ನುವ ರೀತಿಯಲ್ಲಿ ಅಭಿವೃದ್ಧಿ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಬೈಕ್‌ಗಳಿಗೆ ಉಚಿತ ಪೆಟ್ರೋಲ್; ಮುಗಿಬಿದ್ದ ಜನ
ಜನಾರ್ದನ ರೆಡ್ಡಿ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಬಳ್ಳಾರಿಯಲ್ಲಿ ಬೈಕ್ ರ‍್ಯಾಲಿ ಆಯೋಜಿಸಲಾಗಿತ್ತು. ರ‍್ಯಾಲಿಗೆ ಅಗಮಿಸಿದ ಜನರಿಗೆ ರೆಡ್ಡಿ ಕಡೆಯಿಂದ ಉಚಿತವಾಗಿ ತಲಾ 200 ರೂ. ಪೆಟ್ರೋಲ್ ವ್ಯವಸ್ಥೆ ಮಾಡಲಾಯಿತು. ಇದರಿಂದ ಬಳ್ಳಾರಿ ದುರ್ಗಮ್ಮ ಗುಡಿ ಸಮೀಪದ ಪೆಟ್ರೋಲ್ ಬಂಕ್‌ನಲ್ಲಿ ಬೈಕ್‌ಗಳು ಸಾಲುಗಟ್ಟಿ ನಿಂತಿದ್ದವು. ಬಳ್ಳಾರಿಯ ಮೂರು ಪೆಟ್ರೋಲ್ ಬಂಕ್‍ಗಳಲ್ಲಿ ಒಟ್ಟು 1000ಕ್ಕೂ ಹೆಚ್ಚು ಬೈಕ್‌ಗಳಿಗೆ ಉಚಿತ ಪೆಟ್ರೋಲ್ ವ್ಯವಸ್ಥೆ ಮಾಡಲಾಗಿದೆ.
56 ಕೆ.ಜಿ. ಕೇಕ್ ಕತ್ತರಿಸಿ ಸಂಭ್ರಮಾಚರಣೆ
ಜನಾರ್ದನ ರೆಡ್ಡಿ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಬಳ್ಳಾರಿ ಕಾರ್ಯಕ್ರಮದಲ್ಲಿ 56 ಕೆ.ಜಿ. ಕೇಕ್ ಅನ್ನು ಕತ್ತರಿಸಿ ಸಂಭ್ರಮಾಚರಣೆ ನಡೆಸಲಾಯಿತು. ರೆಡ್ಡಿ ಪತ್ನಿ ಅರುಣಾ ಲಕ್ಷ್ಮೀ, ಪುತ್ರಿ ಬ್ರಹ್ಮಣಿ ರೆಡ್ಡಿ, ಮಾವ ಪರಮೇಶ್ವರ ರೆಡ್ಡಿ ಮತ್ತಿತರರು ಇದ್ದರು.
ಇದನ್ನೂ ಓದಿ | Prajadhwani Yatre | ರೈತರಿಗೆ, ಯುವಕರಿಗೆ ಟೋಪಿ ಹಾಕಿದೆ ಬಿಜೆಪಿ: ಸಿದ್ದರಾಮಯ್ಯ ವಾಗ್ದಾಳಿ