ಬಳ್ಳಾರಿ: ಮಾಜಿ ಸಚಿವ, ಗಣಿ ಧಣಿ ಜನಾರ್ದನ ರೆಡ್ಡಿ ರಾಜಕೀಯದಲ್ಲಿ ಎರಡನೇ ಇನಿಂಗ್ಸ್‌ಗೆ ರೆಡಿಯಾಗಿದ್ದಾರೆ. ಅವರ ಎರಡನೇ ಇನಿಂಗ್ಸ್ ವಿಚಾರದಲ್ಲಿ ದಿನಕ್ಕೊಂದು ಸುದ್ದಿಗಳು ಹೊರಬರುತ್ತಿದೆ. ಬಿಜೆಪಿಗೆ ರೆಡ್ಡಿ ಗಡುವು ಕೊಟ್ಟಿದ್ದಾರೆ, ರೆಡ್ಡಿ ಹೊಸ ಪಕ್ಷ ಕಟ್ಟುತ್ತಾರೆ, ವೈಎಸ್ಆರ್‌ಪಿಯಿಂದ ಸ್ಪರ್ಧಿಸುತ್ತಾರೆ, ಸ್ವತಂತ್ರವಾಗಿ ಸ್ಪರ್ಧಿಸುತ್ತಾರೆ ಎಂಬೆಲ್ಲ ಮಾತುಗಳಿವೆ. ಈ ಎಲ್ಲ ಕುತೂಹಲಗಳಿಗೆ ಡಿಸೆಂಬರ್ ೨೫ರಂದು ತೆರೆ ಬೀಳುವ ನಿರೀಕ್ಷೆ ಇದೆ.
ಜನಾರ್ದನ ರೆಡ್ಡಿ ಅವರನ್ನು ಬಿಜೆಪಿ ತನ್ನ ಸಕ್ರಿಯ ಚಟುವಟಿಕೆಗಳಲ್ಲಿ ತೊಡಗಿಸಿ ಕೊಳ್ಳ ದಿದ್ದರೆ ಜನಾರ್ದನ ರೆಡ್ಡಿ ಹೊಸ ಪಕ್ಷ ಕಟ್ಟುತ್ತಾರಾ ಎಂಬ ಸುದ್ದಿಯು ದೊಡ್ಡದಾಗಿ ಹರಡಿದೆ. ಹೊಸ ಪಕ್ಷ ಕಟ್ಟುವ ನಿರ್ಧಾರ ಅಷ್ಟು ಸುಲಭವಲ್ಲ, ಪಕ್ಷ ಕಟ್ಟುವಿಕೆಯ ಹಿಂದೆ ತಮ್ಮ ಸಹೋದರರ ಮತ್ತು ಆಪ್ತ ಗೆಳೆಯನ ರಾಜಕೀಯ ಭವಿಷ್ಯ ಅಡಗಿರುವುದರಿಂದ ಪಕ್ಷ ಕಟ್ಟುವುದು ಅಷ್ಟು ಸುಲಭವಲ್ಲ. ಬಿಎಸ್ಆರ್ ಪಕ್ಷ ಕಟ್ಟಿ ಕೈ ಸುಟ್ಟುಕೊಂಡಿರುವ ಅನುಭವವನ್ನು ತಮ್ಮ ಗೆಳೆಯನೊಂದಿಗೆ ಅವರೂ ಅನುಭವಿಸಿದ್ದಾರೆ. ಹೊಸ ಪಕ್ಷ ಕಟ್ಟಿದರೆ ನಾನು ಹೋಗುವುದಿಲ್ಲ ಎಂದು ಸೋಮಶೇಖರ ರೆಡ್ಡಿ ಬಹಿರಂಗವಾಗಿ ಹೇಳಿದ್ದಾರೆ. ಹೀಗಾಗಿ ಹೊಸ ಪಕ್ಷ ಉದ್ದೇಶ ಈಡೇರುವುದು ತೀರಾ ಕಷ್ಟ ಎಂದು ಹೇಳಲಾಗುತ್ತಿದೆ.
ಈಗಾಗಲೇ ಬಿಜೆಪಿ ಮುಖಂಡರೊಂದಿಗೆ ಮಾತುಕತೆ ನಡೆಸಲಾಗಿದೆ, ಡಿಸೆಂಬರ್ ೨೫ರ ನಿರ್ಧಾರ ಬಿಜೆಪಿ ಪರವಾಗಿ ಇರಲಿದೆ ಎಂದು ಶ್ರೀರಾಮುಲು ಹೇಳಿರುವುದರಿಂದ ರೆಡ್ಡಿ ಪಕ್ಷದಲ್ಲಿ ಉಳಿಯುವ ಸಾಧ್ಯತೆ ಇದೆ. ಒಂದುವೇಳೆ ಪಕ್ಷದಲ್ಲಿ ಉಳಿದರೆ ರೆಡ್ಡಿಯ ಮೇಲೆ ಕೇಸುಗಳಿರುವುದರಿಂದ ಅವರಿಗೆ ಟಿಕೆಟ್ ಕೊಡುವುದು ಕಷ್ಟ, ಅವರ ಪತ್ನಿ ಅರುಣಾಲಕ್ಷ್ಮಿ ಟಿಕೆಟ್ ಕೊಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಒಂದುವೇಳೆ ಬಿಜೆಪಿ ರೆಡ್ಡಿಗೆ ಸಕ್ರಿಯ ರಾಜಕಾರಣಕ್ಕೆ ಗ್ರೀನ್ ಸಿಗ್ನಲ್ ನೀಡದಿದ್ದರೆ ರೆಡ್ಡಿ ಸ್ವತಂತ್ರವಾಗಿ ಸ್ಪರ್ಧಿಸುತ್ತಾರೆ ಇಲ್ಲವೇ ರೆಡ್ಡಿ ಆಪ್ತನಾಗಿರುವ ಆಂಧ್ರಪ್ರದೇಶದ ಹಾಲಿ ಮುಖ್ಯಮಂತ್ರಿ ಸಿಎಂ ಜಗನ್ಮೋಹನ ರೆಡ್ಡಿ ಅವರು ವೈಎಸ್ಆರ್ಪಿಯಿಂದ ಸ್ಪರ್ಧಿ ಸುತ್ತಾರಾ ಎಂಬು ಸುದ್ದಿಯು ಹರಿದಾಡುತ್ತಿದೆ. ಈಗಾಗಲೇ ಜನಾರ್ದನ ರೆಡ್ಡಿ ರಾಜ್ಯ ಪ್ರವಾಸ ಮಾಡಿರುವುದರಿಂದ ವಿವಿಧ ಕ್ಷೇತ್ರದ ರೇಬಲ್ ಅಭ್ಯರ್ಥಿಗಳನ್ನು ಗಾಳವಾಗಿ ಸ್ವತಂತ್ರವಾಗಿ ಸ್ಪರ್ಧಿಸಲು ಅಥವಾ ವೈಎಸ್ಆರ್ಪಿ ಸ್ವರ್ಧಿಸುವಂತೆ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ.
ಇಂತಹ ಹತ್ತು ಹಲವು ಕುತೂಹಲಕ್ಕೆ ಡಿಸೆಂಬರ್ ೨೫ರಂದು ತೆರೆ ಬೀಳುವ ಸಾಧ್ಯತೆ ಇದೆ. ಈ ನಡುವೆ ರೆಡ್ಡಿ ಗಡುವಿನ ದಿನಾಂಕ ಮತ್ತೆ ಮುಂದೂಡುತ್ತಾರಾ? ಅದನ್ನು ಕಾದು ನೋಡಬೇಕಾಗಿದೆ.
ಇದನ್ನೂ ಓದಿ | Gali Janardhana Reddy | ಗಂಗಾವತಿಯಲ್ಲಿ ರೆಡ್ಡಿ ಎರಡನೇ ಇನಿಂಗ್ಸ್; 101 ಟಗರುಗಳ ಕಾಣಿಕೆ ಘೋಷಿಸಿದ ಅಭಿಮಾನಿ