ಬೆಂಗಳೂರು/ಬೆಳಗಾವಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಬಿಜೆಪಿ ಶಾಸಕ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸೋಮವಾರ ಮಾಡಿದ ಹಲವಾರು ಗಂಭೀರ ಆರೋಪಗಳಿಗೆ (Jarakiholi Vs DK Shivakumar) ಸಂಬಂಧಿಸಿ ಕಾಂಗ್ರೆಸ್ ನಾಯಕರು ಮೌನ ವಹಿಸಿದ್ದಾರೆ.
ಇದು ರಮೇಶ್ ಜಾರಕಿಹೊಳಿ ಮತ್ತು ಡಿ.ಕೆ. ಶಿವಕುಮಾರ್ ನಡುವಿನ ವೈಯಕ್ತಿಕ ವಿಚಾರ. ನಾನು ಇದರ ಬಗ್ಗೆ ಏನೂ ಹೇಳುವುದಿಲ್ಲ. ಇದಕ್ಕೆ ಡಿ.ಕೆ ಶಿವಕುಮಾರ್ ಅವರೇ ಉತ್ತರ ಕೊಡುತ್ತಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿರುವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಅವರು ಮಾತ್ರವಲ್ಲ, ಹಿರಿಯ ನಾಯಕರಾದ ರಾಮಲಿಂಗಾ ರೆಡ್ಡಿ, ವಿ.ಎಸ್. ಉಗ್ರಪ್ಪ ಕೂಡಾ ಮಾತನಾಡಲು ಬಯಸಲಿಲ್ಲ. ಇದಕ್ಕೆಲ್ಲ ಡಿಕೆಶಿ ಅವರೇ ಉತ್ತರ ಕೊಡುತ್ತಾರೆ ಎಂದಿದ್ದಾರೆ.
ಸತೀಶ್ ಜಾರಕಿಹೊಳಿ ಹೇಳಿದ್ದೇನು?
ಯಮಕನಮರಡಿಯ ಮನಗುತ್ತಿ ಗ್ರಾಮದಲ್ಲಿ ಮಾತನಾಡಿ, ʻʻಅದು ರಮೇಶ್ ಜಾರಕಿಹೊಳಿ ಹಾಗೂ ಡಿಕೆಶಿ ಅವರ ವೈಯಕ್ತಿಕ ವಿಚಾರ. ಅದರ ಬಗ್ಗೆ ನಾವು ಹೊರಗಿನವರು, ಏನು ಹೇಳಲ್ಲʼʼ ಎಂದಿದ್ದಾರೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ.
ʻʻಇದು ರಮೇಶ್ ಮತ್ತು ಡಿಕೆ ಶಿವಕುಮಾರ್ ನಡುವಿನ ವಿಚಾರ. ರಮೇಶ್ ಜಾರಕಿಹೊಳಿ ಅವರ ಪಕ್ಷದ್ದೇ ಸರಕಾರವಿದೆ. ಅದು ಈ ಆರೋಪಗಳನ್ನು ಹೇಗೆ ತೆಗೆದುಕೊಳ್ಳುತ್ತದೆ ಎನ್ನುವುದು ಅವರಿಗೆ ಬಿಟ್ಟ ವಿಚಾರʼʼ ಎಂದರು ಸತೀಶ್.
ʻʻಒಂದು ಕಡೆ ಕಾಂಗ್ರೆಸ್ ಪಕ್ಷ, ಮತ್ತೊಂದು ಕಡೆ ಬಿಜೆಪಿಯಲ್ಲಿರುವ ನಿಮ್ಮ ಸಹೋದರ. ಇದು ನಿಮಗೆ ಒಂದು ರೀತಿಯ ಸಂದಿಗ್ಧ ಪರಿಸ್ಥಿತಿ ಅಲ್ವಾʼ ಎಂಬ ಪ್ರಶ್ನೆಗೆ ಉತ್ತರಿಸಿದ ಸತೀಶ್ ಜಾರಕಿಹೊಳಿ, ʻʻರಮೇಶ್ ಹೇಳಿದ ಸಿಡಿ ವಿಷಯ ಇರಬಹುದು ಹಾಗೂ ಸಿಬಿಐ ತನಿಖೆ ವಿಷಯ ಇರಬಹುದು. ರಮೇಶ್ ಜಾರಕಿಹೊಳಿ ಅವರು ಆಡಳಿತ ಪಕ್ಷದ ಒಂದು ಭಾಗ. ನಿರ್ಣಯ ಮಾಡೋದು ಅವರ ಪಕ್ಷಕ್ಕೆ ಬಿಟ್ಟಿದ್ದುʼʼ ಎಂದರು.
ʻʻಡಿಕೆಶಿ ಬಹಳಷ್ಟು ಜನರ ಸಿಡಿ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡ್ತಾರೆʼʼ ಎಂಬ ರಮೇಶ್ ಆರೋಪದ ಬಗ್ಗೆ ಕೇಳಿದಾಗ, ʻʻಆ ಆರೋಪವೂ ಸಹ ಅವರಿಬ್ಬರಿಗೆ ಬಿಟ್ಟಿದ್ದು. ನಾವು ಹೊರಗಿನವರು ಏನು ಹೇಳಲು ಆಗೊಲ್ಲʼʼ ಎಂದರು.
ʻಸಿಡಿ ಹಿಂದೆ ವಿಷಕನ್ಯೆ ಇದ್ದಾರೆʼ ಎಂಬ ಆರೋಪಕ್ಕೂ ಸತೀಶ್ ಸ್ಪಷ್ಟ ಉತ್ತರ ನೀಡಲಿಲ್ಲ. ʻʻರಮೇಶ್ ಜಾರಕಿಹೊಳಿಯವರ ಪಕ್ಷ ಬೇರೆ. ನಮ್ಮ ಪಕ್ಷದಲ್ಲಿದ್ದಿದ್ದರೆ ಅದರ ಬಗ್ಗೆ ಯೋಚನೆ ಮಾಡ್ತಿದ್ವಿ. ಅವರು ಹೇಳುವ ಎಲ್ಲದಕ್ಕೂ ಸಹ ನಾವು ಸ್ಪಷ್ಟನೆ ಕೊಡಲಿಕ್ಕೆ ಆಗೋದಿಲ್ಲʼʼ ಎಂದರು. ʻʻಯಾರು ಹೇಳಿದ್ದಾರೋ, ಯಾರು ಹೇಳಿಸಿಕೊಂಡಿದ್ದಾರೋ ಅವರು ಅದಕ್ಕೆ ಉತ್ತರ ಕೊಡಬೇಕಾಗುತ್ತದೆ. ಅದರಲ್ಲಿ ನಮ್ಮ ಪಾತ್ರ ಇಲ್ಲʼʼ ಎಂದರು.
ʻʻಕಾಂಗ್ರೆಸ್ ಹಾಳಾಗಲು ವಿಷಕನ್ಯೆ ಹಾಗೂ ಡಿಕೆಶಿ ಕಾರಣʼʼ ಎಂಬ ಹೇಳಿಕೆಗೆ ಏನಂತೀರಿ ಎಂದು ಕೇಳಿದಾಗ, ʻʻನಮ್ಮ ಪಕ್ಷದಲ್ಲಿ ವರಿಷ್ಠರಿದ್ದಾರೆ, ಅಧ್ಯಕ್ಷರಿದ್ದಾರೆ, ವಿರೋಧ ಪಕ್ಷದ ನಾಯಕರಿದ್ದಾರೆ ಅವರು ಅದರ ಬಗ್ಗೆ ಪ್ರತಿಕ್ರಿಯೆ ನೀಡುತ್ತಾರೆʼʼ ಎಂದು ಹೇಳಿದರು.
ಚುನಾವಣೆ ಬಂದಾಗಲೇ ರಮೇಶ್ ಜಾರಕಿಹೊಳಿಯಿಂದ ಹೊಸ ಆರೋಪಗಳನ್ನು ಮಾಡುತ್ತಾರೆ ಎಂಬ ಬಗ್ಗೆಯೂ ಅವರು ಹೆಚ್ಚೇನೂ ಹೇಳಲಿಲ್ಲ.
ಇದನ್ನೂ ಓದಿ | Ramesh Jarkiholi : ಮೂರನೆಯವರಿಗಾಗಿ ಪಕ್ಷ ಬಿಡಬೇಡಿ ಎಂದು ಡಿ.ಕೆ. ಶಿವಕುಮಾರ್ ಪತ್ನಿ ಹೇಳಿದ್ದರು: ರಮೇಶ್ ಜಾರಕಿಹೊಳಿ