ಬೆಳಗಾವಿ: ಗೋಕಾಕ್ನ ಜಾರಕಿಹೊಳಿ ಸಹೋದರರ (Jarkiholi Brothers) ಹಿರಿಯ ಸಹೋದರಿ ಲಗಮವ್ವ ನಿಂಗಪ್ಪ ಸುಲಧಾಳ (67) ಇಂದು ತೀವ್ರ ಹೃದಯಾಘಾತದಿಂದ ನಿಧನರಾದರು. ರಮೇಶ್ ಜಾರಕಿಹೊಳಿ, ಸತೀಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಮತ್ತು ಲಖನ್ ಜಾರಕಿಹೊಳಿ ಅವರ ಹಿರಿಯ ಸೋದರಿ ಲಗಮವ್ವ ಗೋಕಾಕ್ ನಗರಸಭೆಯ ಮಾಜಿ ಅಧ್ಯಕ್ಷೆಯೂ ಹೌದು. ಇವರಿಗೆ ಪತಿ, ಇಬ್ಬರು ಪುತ್ರರು, ಪುತ್ರಿ ಇದ್ದಾರೆ. ಲಗಮವ್ವನವರ ಅಂತ್ಯಕ್ರಿಯೆ ಗೋಕಾಕ್ ನಗರದ ಕುಂಬಾರ ಗಲ್ಲಿ ರುದ್ರಭೂಮಿಯಲ್ಲಿ ಇಂದು ನಡೆಯಲಿದೆ.
ಲಗಮವ್ವ ಅಂತ್ಯಕ್ರಿಯೆಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಇಂದು ಸಚಿವ ಸಂಪುಟ ಸಭೆ ಇರುವುದರಿಂದ ಸತೀಶ್ ಜಾರಕಿಹೊಳಿ ಬೆಂಗಳೂರಿನಲ್ಲಿ, ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಸಹೋದರಿ ಸಾವಿಗೆ ಸಂತಾಪ ಸೂಚಿಸಿದ ಅವರು ‘ನನ್ನ ಹಿರಿಯ ಸೋದರಿ ಲಗಮವ್ವ ಸರಳತೆ, ಸೌಜನ್ಯದ ಆಗರವಾಗಿದ್ದರು. ನಮ್ಮನ್ನು ಬಾಲ್ಯದಿಂದಲೂ ಪ್ರೋತ್ಸಾಹಿಸಿ ಮುನ್ನಡೆಸಿದ್ದಾರೆ. ನನ್ನ ರಾಜಕೀಯ ಬೆಳವಣಿಗೆಯಲ್ಲಿ ಅವರ ಮಾರ್ಗದರ್ಶನ ಪ್ರಧಾನ ಪಾತ್ರ ವಹಿಸಿದೆ. ನನ್ನ ತಾಯಿ ಸ್ವರೂಪಳಾಗಿದ್ದ ಸಹೋದರಿಯನ್ನು ಕಳೆದುಕೊಂಡು ತೀವ್ರ ಆಘಾತವಾಗಿದೆ’ ಎಂದು ಮಾಧ್ಯಮ ಪ್ರಕಟಣೆ ಮೂಲಕ ಸತೀಶ್ ಜಾರಕಿಹೊಳಿ ಸಂತಾಪ ಸೂಚಿಸಿದ್ದಾರೆ. ಇನ್ನುಳಿದಂತೆ ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಮತ್ತು ಲಖನ್ ಅವರು ತಮ್ಮ ಸಹೋದರಿ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲಿದ್ದಾರೆ.
ಇದನ್ನೂ ಓದಿ: ಈ ಸಲ ಬೆಳಗಾವಿ ಜಿಲ್ಲೆ ವಿಭಜನೆ ಮಾಡೇ ಮಾಡ್ತೇವೆ, ಸಿಎಂಗೆ ಒತ್ತಡ ಹೇರುತ್ತೇವೆ: ಸತೀಶ್ ಜಾರಕಿಹೊಳಿ
ಕಾಂಗ್ರೆಸ್ ಚುನಾವಣೆಗೂ ಪೂರ್ವ ಕೊಟ್ಟಿದ್ದ 5ಗ್ಯಾರಂಟಿಗಳ ಬಗ್ಗೆ ಇಂದಿನ ಸಂಪುಟ ಸಭೆಯಲ್ಲಿ ನಿರ್ಧಾರವಾಗಲಿದೆ. ಹೀಗಾಗಿ ಇಂದಿನ ಸಚಿವ ಸಂಪುಟ ಸಭೆ ಮುಖ್ಯವಾಗಿದ್ದು, ಸತೀಶ್ ಜಾರಕಿಹೊಳಿ ಸೇರಿ ಎಲ್ಲ ಸಚಿವರೂ ಇರಲೇಬೇಕಾಗಿದೆ. ಇದೇ ಕಾರಣಕ್ಕೆ ಅವರಿಗೆ ತಮ್ಮ ಅಕ್ಕನ ಅಂತಿಮ ಸಂಸ್ಕಾರಕ್ಕೆ ತೆರಳಲು ಸಾಧ್ಯವಾಗುತ್ತಿಲ್ಲ.