ಬೆಂಗಳೂರು: ನಗರ ಹೊರವಲಯದ ಬಿಡದಿಯ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್ ಘಟಕ ಸಮೀಪದ ಅಮೃತಾ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಮ್ಯಾನೇಜ್‌ಮೆಂಟ್ ಸೈನ್ಸಸ್ ಆವರಣದಲ್ಲಿ ಆಯೋಜಿಸಿರುವ ʼಜ್ಞಾನ ಸರಿತಾʼ ಭಾರತೀಯ ಜ್ಞಾನ ವ್ಯವಸ್ಥೆಯ ಸಮ್ಮೇಳನಕ್ಕೆ ಗಣ್ಯರು ಸೋಮವಾರ ಚಾಲನೆ ನೀಡಿದರು. ಈ ಸಮ್ಮೇಳನ ಫೆ.19ರವರೆಗೆ ನಡೆಯಲಿದ್ದು, ಪ್ರತಿನಿತ್ಯ ಸಂವಾದ, ಚಿಂತನಾಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ನಗರದ ಸಾಕ್ಷಿ ಟ್ರಸ್ಟ್ ಹಾಗೂ ಕೌಟಿಲ್ಯ ಇಂಟರ್‌ನ್ಯಾಷನಲ್ ಫೌಂಡೇಶನ್ ವತಿಯಿಂದ ಸಮ್ಮೇಳನವನ್ನು ಆಯೋಜಿಸಲಾಗಿದೆ. ಸಮಾಜದ ಅಭಿವೃದ್ಧಿ, ನಿಯಮಗಳು ಮತ್ತು ಯೋಗಕ್ಷೇಮಕ್ಕಾಗಿ ನೀತಿ ದಾಖಲೆ ಸಿದ್ಧಪಡಿಸುವುದು, ಪರಿಸರ ಕೇಂದ್ರಿತ ನಿರೂಪಣೆ ರಚಣೆ, ಭಾರತೀಯ ಜ್ಞಾನ ಪರಂಪರೆ, ಭಾರತೀಯ ಲೋಕ ಪರಂಪರೆ, ಸಂಸ್ಕೃತಿ ಮತ್ತು ಸಂಪ್ರದಾಯಗಳ ಬಗ್ಗೆ ಅರಿವು ಮೂಡಿಸುವುದು, ವೈದಿಕ ಶ್ರೀಮಂತಿಕೆಯನ್ನು ಎತ್ತಿ ಹಿಡಿಯುವುದು ಸಮ್ಮೇಳನದ ಉದ್ದೇಶವಾಗಿದೆ.
ಮೊದಲ ದಿನದ ಕಾರ್ಯಕ್ರಮದಲ್ಲಿ ಬೇಲಿ ಮಠದ ಶಿವರುದ್ರ ಮಹಾ ಸ್ವಾಮೀಜಿ, ಮುಖ್ಯ ಅತಿಥಿಗಳಾಗಿ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಜನರಲ್ ಮನೋಜ್ ಸಿನ್ಹಾ, ವಿದ್ವಾಂಸರಾದ ಕೆ.ಎನ್.ಗೋವಿಂದಾಚಾರ್ಯ, ಗೌರವ ಅತಿಥಿಗಳಾದ ಚಿಂತಕ ಪ್ರೊ. ಎಂ.ವಿ.ನಾಡಕರ್ಣಿ, ಅರಳುಮಲ್ಲಿಗೆ ಪಾರ್ಥಸಾರಥಿ, ಮಾಜಿ ಸಂಸದ ಬಸವರಾಜ ಪಾಟೀಲ್ ಸೇಡಂ, ಶಾಸಕ ವೀರಣ್ಣ ಚರಂತಿಮಠ, ಮಾಜಿ ಶಾಸಕ ಎಂ.ಜಿ.ಮುಳೆ, ವಿದ್ವಾಂಸರಾದ ಪ್ರೊ. ಸಿ.ಕೆ. ರಾಜು, ಡಾ.ಪ್ರಮೋದ್ ಕುಮಾರ್ ದುಬೆ, ಪ್ರೊ.ವೈದ್ಯನಾಥನ್ ಮತ್ತಿತರರು ಉಪಸ್ಥಿತರಿದ್ದರು.