Site icon Vistara News

JNANAAMRUTHA | ಜ್ಞಾನಾಮೃತದಲ್ಲಿ ‘ಜ್ಞಾನ ಪರ್ವ’ದ ಸಂಭ್ರಮಾಚರಣೆ; 10 ವಿದ್ಯಾರ್ಥಿಗಳಿಗೆ ಎಂಬಿಬಿಎಸ್ ಭಾಗ್ಯ

JNANAAMRUTHA

ಬಳ್ಳಾರಿ: ಗುಣಮಟ್ಟದ ಶಿಕ್ಷಣಕ್ಕೆ ಖ್ಯಾತಿಯಾಗಿರುವ ಜ್ಞಾನಾಮೃತ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನ (JNANAAMRUTHA)) ವಾರ್ಷಿಕೋತ್ಸವ ʼಜ್ಞಾನಪರ್ವʼ ಕಾರ್ಯಕ್ರಮ, ನಗರದ ಹೊಸಪೇಟೆ-ಬೆಂಗಳೂರು ಬೈಪಾಸ್ ರಸ್ತೆಯ ಜ್ಞಾನಸಾಗರ ಬಡಾವಣೆಯಲ್ಲಿ ಅದ್ಧೂರಿಯಾಗಿ ನೆರವೇರಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾರ್ಕಳದ ಜ್ಞಾನಸುಧಾ ಕಾಲೇಜಿನ ಪ್ರಾಂಶುಪಾಲ ದಿನೇಶ್ ಎಂ. ಕೊಡವೂರು ಅವರು, ಶಿಕ್ಷಣದಲ್ಲಿ ಯಶಸ್ಸು ಸಾಧಿಸಲು ವಿದ್ಯಾಸಂಸ್ಥೆಗಳ, ಹೆತ್ತವರ ಮತ್ತು ವಿದ್ಯಾರ್ಥಿಗಳ ಪಾತ್ರ ಬಹಳ ಮುಖ್ಯ. ತಂದೆ-ತಾಯಿ ಮಕ್ಕಳ ಸಾಧನೆ ಬಗ್ಗೆ ಸಂತಸಪಡುವುದಕ್ಕಿಂತ ಹೆಚ್ಚು ಶಿಕ್ಷಕರು ಮಕ್ಕಳ ಏಳಿಗೆ ನೋಡಿ ಸಂತಸಪಡುತ್ತಾರೆ. ಈಗ ಕಾರ್ಕಳದ ಜ್ಞಾನಸುಧಾ ಮಾಡುತ್ತಿರುವ ಸಾಧನೆ ಕೆಲವೇ ಕೆಲವು ವರ್ಷದಲ್ಲಿ ಜ್ಞಾನಾಮೃತ ಕೂಡ ಮಾಡಲಿ ಎಂದು ಆಶಿಸಿದರು.

ಉತ್ತಮ ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಮುಖ್ಯ ಅತಿಥಿಗಳು ಬಹುಮಾನ ನೀಡಿದರು.

ಉಪನ್ಯಾಸಕರ ಮತ್ತು ಪೋಷಕರು ಸಹಕಾರವೇ ಸಾಧನೆಗೆ ಕಾರಣ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮರ್ಚಡ್ ಟ್ರಸ್ಟ್ ಅಧ್ಯಕ್ಷ ಎಂ.ಜಿ.ಗೌಡ ಅವರು ಮಾತನಾಡಿ, ಜ್ಞಾನಾಮೃತ ಸಂಸ್ಥೆ ಆರಂಭವಾಗಿ ಎರಡೇ ವರ್ಷಗಳಲ್ಲಿ ಹೆಚ್ಚಿನ ಸಂಖ್ಯೆಯ ಜ್ಞಾನಾಮೃತದ ವಿದ್ಯಾರ್ಥಿಗಳು ಬೋರ್ಡ್, ನೀಟ್, ಜೆಇಇ, ಕೆಸಿಇಟಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಿಗೆ ಗರಿಷ್ಠ ಫಲಿತಾಂಶ ದಾಖಲಿಸಿರುವುದು ಗಮನಾರ್ಹ ಸಾಧನೆಯಾಗಿದೆ. ಈ ಸಾಧನೆಗೆ ವಿದ್ಯಾರ್ಥಿಗಳು ಶಿಕ್ಷಕರ ಜತೆಗೆ ಪೋಷಕರ ಸಹಕಾರವೇ ಈ ಸಾಧನೆಯ ಮೆಟ್ಟಿಲು ಎಂದು ಅಭಿಪ್ರಾಯಪಟ್ಟರು.

೧೦ ವಿದ್ಯಾರ್ಥಿಗಳಿಗೆ ಎಂಬಿಬಿಎಸ್ ಸೀಟ್
ಪಿಯುಸಿಯಲ್ಲಿ ಶೇ.೧೦೦ರಷ್ಟು ಫಲಿತಾಂಶ ಪಡೆದಿದೆ. ಫಲಿತಾಂಶದಲ್ಲಿ ಕಾಲೇಜು ಜಿಲ್ಲೆಗೆ ಟಾಪರ್ ಆಗಿದೆ. ನೀಟ್‌ನಲ್ಲಿ ರಾಜ್ಯಕ್ಕೆ ಕಾಲೇಜಿನ ವಿದ್ಯಾರ್ಥಿ ೭ನೇ ರ‍್ಯಾಂಕ್ ಪಡೆದಿದ್ದಾರೆ. ನೀಟ್‌ನಲ್ಲಿ ಉತ್ತಮ ಅಂಕ ಪಡೆದು ೧೦ ವಿದ್ಯಾರ್ಥಿಗಳು ಎಂಬಿಬಿಎಸ್‌ಗೆ ಪ್ರವೇಶ ಪಡೆದಿದ್ದಾರೆ. ೪೮ ವಿದ್ಯಾರ್ಥಿಗಳು ಪ್ರತಿಷ್ಠಿತ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರವೇಶ ಪಡೆದಿದ್ದಾರೆ ಎಂದರು.

ಒಂದು ಲಕ್ಷ ಪ್ರೋತ್ಸಾಹ ಧನ
ಕಳೆದ ಶೈಕ್ಷಣಿಕ ವರ್ಷದಲ್ಲಿ ಬೋರ್ಡ್ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಒಂದು ಲಕ್ಷಕ್ಕೂ ಅಧಿಕ ಪ್ರೋತ್ಸಾಹಧನ ನೀಡಲಾಯಿತು.

ಬಳ್ಳಾರಿಯ ವಿ.ಎಸ್.ಕೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಿದ್ದು ಪಿ. ಅಲಗೂರು, ಎಂಜಿನಿಯರ್ ಮಂಜುನಾಥ ಬೊಮ್ಮಗಟ್ಟ, ಸಾಹಿತಿ ಡಾ.ಕುಂ. ವೀರಭದ್ರಪ್ಪ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಆಡಳಿತ ಮಂಡಳಿಯ ಸದಸ್ಯರು, ವಿವಿಧ ಪ್ರೌಢಶಾಲೆಯ ಮುಖ್ಯ ಶಿಕ್ಷಕರು ಸೇರಿ ಇತರರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕಾರ್ಯಕ್ರಮದ ನಂತರ ಪ್ರೌಢಶಾಲೆ ಮತ್ತು ಪದವಿಪೂರ್ವ ವಿಭಾಗದ ವಿದ್ಯಾರ್ಥಿಗಳಿಂದ ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಇದನ್ನೂ ಓದಿ | Heeraben Modi | ಪ್ರಧಾನಿ ಮೋದಿ ತಾಯಿ ಶೀಘ್ರ ಚೇತರಿಕೆಗಾಗಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ಕುಟುಂಬಸ್ಥರು

Exit mobile version