ಬೆಂಗಳೂರು: ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಇಲಾಖೆಯಲ್ಲಿನ ಆಡಳಿತಾತ್ಮಕ ಸುಧಾರಣೆಗೆ ಹಲವು ರೀತಿಯ ಕ್ರಮ ಕೈಗೊಂಡಿದ್ದು, ಖಾಲಿ ಇರುವ ಹುದ್ದೆಗಳ ಹಂತಹಂತವಾಗಿ ಭರ್ತಿಗೆ (Job News) ಮುಂದಾಗಿದ್ದಾರೆ. ಮೊದಲ ಹಂತದಲ್ಲಿ ಇಲಾಖೆಯಲ್ಲಿ ಖಾಲಿ ಇರುವ 961 ವಿವಿಧ ವೃಂದದ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ. ಇದಕ್ಕಾಗಿ ಈಗಾಗಲೇ ಆರ್ಥಿಕ ಇಲಾಖೆ ಅನುಮೋದನೆ ಪಡೆದು ಕರ್ನಾಟಕ ಲೋಕಸೇವಾ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಹುದ್ದೆಗಳ ವಿವರ
ಕಲ್ಯಾಣ ಕರ್ನಾಟಕ ಭಾಗದಲ್ಲಿ 34 ಕೃಷಿ ಅಧಿಕಾರಿ, 223 ಸಹಾಯಕ ಕೃಷಿ ಅಧಿಕಾರಿ, 17 ದ್ವಿತೀಯ ದರ್ಜೆ ಸಹಾಯಕರು, 17 ಬೆರಳಚ್ಚುಗಾರರು ಹಾಗೂ ಉಳಿಕೆ ವೃಂದದಲ್ಲಿ 84 ಕೃಷಿ ಅಧಿಕಾರಿ, 586 ಸಹಾಯಕ ಕೃಷಿ ಅಧಿಕಾರಿಗಳು ಸೇರಿದಂತೆ ಒಟ್ಟಾರೆ 961 ಹುದ್ದೆಗಳ ನೇಮಕಾತಿಗೆ ಕೃಷಿ ಇಲಾಖೆಯಿಂದ ಕರ್ನಾಟಕ ಲೋಕಾಸೇವಾ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಬೆಳೆ ವಿಮೆ ಯೋಜನೆಯನ್ನು ಮತ್ತಷ್ಟು ಪಾರದರ್ಶಕಗೊಳಿಸಿ
ರೈತರ ಹಿತಕಾಯಲು ಸರ್ಕಾರ ರೂಪಿಸಿರುವ ಬೆಳೆ ವಿಮೆ ಯೋಜನೆಯ ಸಂಪೂರ್ಣ ಫಲ ಕೃಷಿಕರಿಗೆ ಹೋಗುತ್ತಿದ್ದು, ಇದನ್ನು ಇನ್ನಷ್ಟು ಪಾರದರ್ಶಕಗೊಳಿಸಿ ಎಲ್ಲರ ಅನುಮಾನಗಳನ್ನು ಸಂಪೂರ್ಣವಾಗಿ ಬಗೆಹರಿಸಿ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ನಿರ್ದೇಶನ ನೀಡಿದ್ದಾರೆ.
ಇದನ್ನೂ ಓದಿ: MB Patil: ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಖಚಿತ; ಎಂ ಬಿ ಪಾಟೀಲ್
ವಿಕಾಸ ಸೌಧದ ತಮ್ಮ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಬೀಜ ನಿಗಮದ 313ನೇ ನಿರ್ದೇಶಕ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಲಾಖೆಯ ಯಾವುದೇ ಅಧಿಕಾರಿಗಳು ಏಜೆನ್ಸಿಗಳ ಪರ ಇಲ್ಲವೇ ಇಲ್ಲ, ನಾವೆಲ್ಲರೂ ರೈತರಿಗಾಗಿ ಕೆಲಸ ಮಾಡುತ್ತಿದ್ದೇವೆ. ಆದರೂ ಕೆಲವು ರೈತರು, ಜನ ಪ್ರತಿನಿಧಿಗಳಲ್ಲಿ ಇರುವ ಅನುಮಾನಗಳನ್ನು ವ್ಯವಸ್ಥಿತವಾಗಿ ಮನವರಿಕೆ ಮಾಡಿಕೊಟ್ಟು ಬಗೆಹರಿಸಬೇಕು ಇದಕ್ಕಾಗಿ ಒಂದು ಸಭೆ ಆಯೋಜಿಸುವಂತೆ ಸಚಿವರು ಸೂಚಿಸಿದರು.
ತಳ ಹಂತದಿಂದ ಮೇಲ್ಮಟ್ಟದವರೆಗೆ ಯಾವುದೇ ಅಧಿಕಾರಿ, ಸಿಬ್ಬಂದಿ ಬೆಳೆ ವಿಮೆ ಕಂಪನಿಗಳಿಂದ ಒಂದು ಸಣ್ಣ ಅನುಕೂಲವನ್ನೂ ಪಡೆಯುತ್ತಿಲ್ಲ. ಮುಂದೇಯೂ ಯಾವುದೇ ಸಂದರ್ಭದಲ್ಲಿಯೂ ನಡೆಯಬಾರದು ಎಂದು ಸೂಚನೆ ನೀಡಿದರು.
ಇದೇ ವೇಳೆ ಕೃಷಿ ಇಲಾಖೆ ಕಾರ್ಯದರ್ಶಿ ಅನ್ಭುಕುಮಾರ್ ಮತ್ತು ಆಯುಕ್ತ ವೈ.ಎಸ್. ಪಾಟೀಲ್ ಅವರು ಬೆಳೆ ಸಮೀಕ್ಷೆ ಕೇವಲ ಕೃಷಿ ಇಲಾಖೆಗಳಿಂದ ಆಗುತ್ತಿಲ್ಲ. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿಸಲಾಗುವ ವಿವಿಧ ಇಲಾಖೆ ಅಧಿಕಾರಿಗಳ ಸಮಿತಿಯಿಂದ ನಡೆಯುತ್ತಿದ್ದು, ಯಾವುದೇ ಲೋಪಗಳಾಗುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: Kannada New Movie: ಮೋಷನ್ ಪೋಸ್ಟರ್‌ನಲ್ಲೇ ಕುತೂಹಲ ಮೂಡಿಸಿದ ವಿಭಿನ್ನ ಕಥಾಹಂದರ ಹೊಂದಿರುವ ‘ಹಗ್ಗ’
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಬೀಜ ನಿಗಮದ ವ್ಯವಸ್ಥಾಪಕ ನಿರ್ದೇಶಕ ದೇವರಾಜ್, ತೋಟಗಾರಿಕೆ ನಿರ್ದೇಶಕ ರಮೇಶ್, ಆರ್ಥಿಕ ಇಲಾಖೆಯ ಹಿರಿಯ ಅಧಿಕಾರಿ ಹೊನ್ನಲಿಂಗಪ್ಪ ಹಾಗೂ ಇತರರು ಹಾಜರಿದ್ದರು.