Site icon Vistara News

Joida News: ಸುಪಾ ಅಣೆಕಟ್ಟೆಯಲ್ಲಿ ಹೆಜ್ಜೇನು ಗೂಡು: ವಿಷ ಸಿಂಪಡಣೆಯಿಂದ ಸತ್ತಿರುವ ಜೇನುಹುಳಗಳು

Honey bee supa dam joida

#image_title

ಜೋಯಿಡಾ: ತಾಲೂಕಿನ ಕಾಳಿ ನದಿಯ (Kali River) ಹುಲಿ ಸಂರಕ್ಷಿತ ಪ್ರದೇಶ ಮತ್ತು ಹಾರ್ನ್‌ ಬಿಲ್ ಸಂರಕ್ಷಿತ ಪರಿಸರ ಸೂಕ್ಷ್ಮ ಪ್ರದೇಶದ ಪಕ್ಕದಲ್ಲಿಯೇ ಜೇನು ಗೂಡಿಗೆ ರಾಸಾಯನಿಕ ವಿಷ ಸಿಂಪಡಿಸಿ ಜೇನು ಕುಟುಂಬವನ್ನೇ ನಾಶ ಮಾಡುವ ಕಾರ್ಯವು ಕರ್ನಾಟಕ ವಿದ್ಯುತ್ ನಿಗಮದಿಂದ ನಡೆಯುತ್ತಿದೆ. ಇದನ್ನು ಗಮನಿಸಬೇಕಾದ ಅರಣ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿ ಮಾತ್ರ ಈ ಬಗ್ಗೆ ಯಾವುದೇ ಗಮನ ನೀಡದೆ ನಿರ್ಲಕ್ಷ್ಯ ಮಾಡಿದ್ದು ಮಾತ್ರ ಅಕ್ಷಮ್ಯ ಅಪರಾಧ ಎನ್ನುವುದು ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಈ ಒಂದೊಂದು ಕಟ್ಟಡದ ಮೇಲೆ 50ರಿಂದ 200ರಷ್ಟು ಸಂಖ್ಯೆಯಲ್ಲಿ ವರ್ಷಕ್ಕೆ ಎರಡು ಬಾರಿ ಹೆಜ್ಜೇನು ಬಂದು ಇಲ್ಲಿ ಜೇನುಗೂಡು ಕಟ್ಟುತ್ತವೆ. ಪ್ರತಿ ವರ್ಷ ಕರ್ನಾಟಕ ವಿದ್ಯುತ್ ನಿಗಮದಿಂದ ಕಾಳಿ ಜಲ ವಿದ್ಯುತ್ ಯೋಜನೆಯ ಸುಪಾ ಜಲಾಶಯ, ಪವರ್ ಹೌಸ್, ಬೊಮ್ಮನಳ್ಳಿ ಜಲಾಶಯ, ಅಂಬಿಕಾ ನಗರ ಪವರ್ ಹೌಸ್‌ಗಳನ್ನು ನಿರ್ವಹಣೆ ಮಾಡಲು ಟೆಂಡರ್ ನೀಡಲಾಗುತ್ತದೆ. ಟೆಂಡರ್ ಪಡೆದ ಗುತ್ತಿಗೆದಾರರು ಇಲ್ಲಿ ನಿರ್ವಹಣೆ ಮಾಡುವುದರ ಜತೆಗೆ ಕಡಿಮೆ ಖರ್ಚಿನಲ್ಲಿ ಈ ಜೇನುಗಳನ್ನು ಯಾವುದೋ ವಿಷ ಸಿಂಪಡಿಸಿ ಸಂಪೂರ್ಣವಾಗಿ ಸಾಯಿಸಿ ಇಡೀ ಜೇನು ಸಂಕುಲವನ್ನೇ ನಾಶ ಮಾಡುವ ಕಾರ್ಯ ಮಾಡುತ್ತಿದ್ದಾರೆ. ಇದು ವನ್ಯ ಜೀವಿ ಕಾನೂನು ಅಡಿ ಕೂಡ ಅಪರಾಧವಾಗಿದೆ.

ಸತ್ತು ಬಿದ್ದಿರುವ ಜೇನು ಹುಳಗಳು

ಇದನ್ನೂ ಓದಿ: KPSC Departmental Examination : ದ್ವಿತೀಯ ಅಧಿವೇಶನದ ಇಲಾಖಾ ಪರೀಕ್ಷೆ; ಪರಿಷ್ಕೃತ ವೇಳಾಪಟ್ಟಿ ಪ್ರಕಟ

ಜೇನು ನೊಣಗಳು ಕೂಡ ಪರಿಸರ ವ್ಯವಸ್ಥೆಯ ಒಂದು ಭಾಗ. ಸುಪಾ ಡ್ಯಾಂ, ಜಲ ವಿದ್ಯುತ್ ಕಟ್ಟಡ, ಬೊಮ್ಮನಳ್ಳಿ ಜಲಾಶಯ, ಅಂಬಿಕಾ ನಗರ ಪವರ್ ಹೌಸ್ ಇದೆಲ್ಲ ಈ ಕಾಳಿ ಹುಲಿ ಸಂರಕ್ಷಿತ ಪ್ರದೇಶ ಮತ್ತು ಹಾ‌ರ್ನ್‌ ಬಿಲ್‌ ಸಂರಕ್ಷಿತ ಪ್ರದೇಶ ಪರಿಸರ ವ್ಯವಸ್ಥೆಯ ಒಳಗೆ ಇದೆ. ಜೇನು ನೊಣಗಳು ಈ ಪ್ರದೇಶದ ಎಲ್ಲ ಮರಗಳ ಪರಾಗ ಸ್ಪರ್ಶ ನಡೆಸಲು ಅತಿ ಅಗತ್ಯ. ಈ ಜೇನು ಹುಳಗಳನ್ನು ಯಾವುದೇ ವಿಷ ಸಿಂಪಡಿಸಿ ಸಾಯಿಸುವ ಕಾರ್ಯ ಮಾಡಬಾರದು. ಈ ಜೇನು ತೆಗೆಯಲೇ ಬೇಕಾದ ಅನಿವಾರ್ಯತೆ ಇದ್ದಲ್ಲಿ ಸ್ಥಳಿಯ ಜನರಿಗೆ ಅಥವಾ ಗ್ರಾಮಾರಣ್ಯ ಸಮಿತಿಗೆ ಈ ಜೇನುಗಳನ್ನು ತೆಗೆಯಲು ಅವಕಾಶ ನೀಡುವ ಕಾರ್ಯ ಮಾಡಿದರೆ ಈ ಜೇನು ಸಂತತಿ ಉಳಿಯುವುದು. ಇಲ್ಲದಿದ್ದಲ್ಲಿ ಜೇನು ಸಂಕುಲ ಕೂಡ ವಿನಾಶದ ಅಂಚಿಗೆ ತಲುಪಲಿದೆ ಎಂಬ ಆತಂಕ ವ್ಯಕ್ತವಾಗಿದೆ.

“ಪ್ರತಿ ವರ್ಷ ಸುಪಾ ಡ್ಯಾಂ ಮತ್ತು ಪವರ್ ಹೌಸ್ ಕಟ್ಟಡ ನಿರ್ವಹಣೆ ಮಾಡಲು ಟೆಂಡರ್ ಕೊಡು‌ತ್ತೇವೆ. ಅವರೇ ಈ ಜೇನುಗೂಡುಗಳನ್ನು, ಜೇನು ಹುಳಗಳನ್ನು ಹೇಗೆ ತೆಗೆಯುತ್ತಾರೆ ಎಂದು ಕೇಳಿ ಹೇಳುತ್ತೇನೆ” ಎಂದು ಕೆಪಿಸಿ ಚೀಫ್‌ ಎಂಜಿನಿಯರ್ ನಿಂಗಣ್ಣ ಹೇಳಿದ್ದಾರೆ.

ಇದನ್ನೂ ಓದಿ: Amritpal Singh: ಪೊಲೀಸರಿಗೆ ನಾನು ಶರಣಾಗಲ್ಲ; ಯುಟ್ಯೂಬ್‌ ಲೈವ್‌ನಲ್ಲಿ ಅಮೃತ್ ಪಾಲ್ ಸಿಂಗ್ ಹೇಳಿಕೆ

“ಕಾಡಿನ ಹೆಜ್ಜೇನುಗಳು ಅಣೆಕಟ್ಟು ಮತ್ತು ಇತರ ಕಟ್ಟಡಗಳಿಗೆ ಬಂದಿದ್ದಾಗ ವಿಷ ಸಿಂಪಡಿಸಿ ಕೊಲ್ಲುವುದು ಅಕ್ಷಮ್ಯ ಅಪರಾಧ. ಇದು ವನ್ಯಜೀವಿ ಕಾನೂನಿನ ಪ್ರಕಾರ ತಪ್ಪು ಕ್ರಮ ಆಗುತ್ತದೆ. ಜೇನು ಈ ಭೂಮಿಯ ಮೇಲೆ ಇದ್ದರೆ, ಕಾಡಿನಲ್ಲಿ ಇದ್ದರೆ ಮಾತ್ರ ಪರಾಗಸ್ಪರ್ಶ ಕ್ರಿಯೆ ನಡೆದು ನಮ್ಮ ತೋಟದ ಬೆಳೆಗೂ ಸೇರಿದಂತೆ ಕಾಡಿನ ಬೆಳೆವಣಿಗೆಗೂ ಅನುಕೂಲ ಆಗುತ್ತದೆ. ಜೇನಿನ ಮೇಲೆ ದ್ವೇಷ ಸಾಧಿಸುವ ರೀತಿ ಸಾಯಿಸುತ್ತಿರುವುದು ಜೇನಿನ ಮೇಲೆ ಮಾಡುತ್ತಿರುವ ದ್ರೋಹ. ತಕ್ಷಣ ಇದನ್ನು ನಿಲ್ಲಿಸಬೇಕು. ಈ ರೀತಿ ತಪ್ಪು ನಡೆದರೆ ಇವರ ಮೇಲೆ ನಿರ್ದಾಕ್ಷಿಣ್ಯವಾಗಿ ಸೂಕ್ತ ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದು ನನ್ನ ನಿಲುವು” ಎಂದು ಪರಿಸರ ಬರಹಗಾರ ಶಿವಾನಂದ ಕಳವೆ ಹೇಳಿದ್ದಾರೆ.

Exit mobile version