ಬೆಂಗಳೂರು: ದೇಶದಲ್ಲಿ ಪಾಳೆಗಾರಿಕೆ ತೆಗೆದು ಪ್ರಜಾಪ್ರಭುತ್ವ ಸ್ಥಾಪನೆ ಮಾಡಲಾಗಿದೆ. ಆದರೂ ಕಳೆದ 75 ವರ್ಷದಲ್ಲಿ ರಾಜಕೀಯ ಬಗ್ಗೆ ಪ್ರಧಾನ ಚರ್ಚೆ ನಡೆದಿದೆಯೇ ಹೊರತು ಆರ್ಥಿಕ ಮತ್ತು ಸಾಮಾಜಿಕ ಸ್ವಾತಂತ್ರ್ಯದ ಬಗ್ಗೆ ಗಂಭೀರವಾಗಿ ಚರ್ಚೆ ನಡೆಯದಿರುವುದು ವಿಷಾದಕರ ಎಂದು ಹೈಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಅಭಿಪ್ರಾಯಪಟ್ಟರು.
ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನಗರದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದಿಂದ (ಕೆಯುಡಬ್ಲ್ಯೂಜೆ-KUWJ) ಶುಕ್ರವಾರ ‘ಚುನಾವಣೆ-ಪತ್ರಕರ್ತರು ಮತ್ತು ಸಾಮಾಜಿಕ ಜವಾಬ್ದಾರಿ’ ಎಂಬ ವಿಷಯದ ಬಗ್ಗೆ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೇವಲ ರಾಜಕೀಯ ಪ್ರಜಾಪ್ರಭುತ್ವದ ವಿಚಾರದ ಬಗ್ಗೆ ಮಾತ್ರ ಚರ್ಚೆ ಮಾಡುತ್ತಿರುವುದು ನಾವು ಮಾಡುತ್ತಿರುವ ದೊಡ್ಡ ತಪ್ಪು. ಆದರೆ ದೇಶದ ಸಂವಿಧಾನದಲ್ಲಿ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಪ್ರಜಾಪ್ರಭುತ್ವ ಎಂಬ ಮೂರು ಅಂಶಗಳಿವೆ. ಉಳಿದವುಗಳ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿಲ್ಲ. ಹಲವಾರು ಸಂದರ್ಭದಲ್ಲಿ ಬರೀ ರಾಜಕೀಯ ವಿಚಾರವೇ ಪ್ರಧಾನವಾಗಿದೆ. ರೈತರ ಆತ್ಮಹತ್ಯೆ, ಇಂಧನ ದರ ಏರಿಕೆ, ಮತ್ತಿತರ ದೈನಂದಿನ ವಿಚಾರಗಳು ಮುನ್ನಲೆಗೆ ಬರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ | Karnataka Election: ಮೂರೂ ಪಕ್ಷಗಳ ಸ್ಟಾರ್ ಪ್ರಚಾರಕರಲ್ಲಿದ್ದಾರೆ ಹಾಸ್ಯ ನಟರು: ಜೆಡಿಎಸ್‌ನಲ್ಲಿ ಯಾರೂ ಇಲ್ಲ!
ಪ್ರಜಾಪ್ರಭುತ್ವದಲ್ಲಿ ಚುನಾವಣೆಯಲ್ಲಿ ಅರಿತು ನಾಗರೀಕರು ಮಾಧ್ಯಮಗಳಿಂದ ಮಾಹಿತಿ ಪಡೆದು ಜಾಗೃತರಾಗಿ ಮತದಾನ ಮಾಡುತ್ತಾರೆ. ಅಷ್ಟರ ಮಟ್ಟಿಗೆ ಮಾಧ್ಯಮಗಳು ಜನರಿಗೆ ಚರ್ಚೆ ಮಾಡಲು, ಮಾಹಿತಿ ನೀಡಲು ಅನುಕೂಲ ಕಲ್ಪಿಸಿವೆ. ಚುನಾವಣೆ ಸಂದರ್ಭದಲ್ಲಿ ನಿರುದ್ಯೋಗ, ಬೆಲೆ ಏರಿಕೆ, ಕೃಷಿ ಬಿಕ್ಕಟ್ಟಯ, ರೈತರು, ಕಾರ್ಮಿಕರು, ಆರ್ಥಿಕತೆ, ಜನರ ಸಮಸ್ಯೆಗಳ ಬಗ್ಗೆ ಚರ್ಚೆಯಾಗಬೇಕು. ಈ ನಿಟ್ಟಿನಲ್ಲಿ ಮಾಧ್ಯಮಗಳು ಜನರು ಮತ್ತು ಸರ್ಕಾರದ ಮಧ್ಯೆ ಸೇತುವೆಯಂತೆ ಕೆಲಸ ಮಾಡಬೇಕಿದೆ ಎಂದು ಅಭಿಪ್ರಾಯಪಟ್ಟರು.
ರಾಜ್ಯದಲ್ಲಿ ಪ್ರತಿಯೊಬ್ಬರು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಒಂದು ಲಕ್ಷ ರೂ. ನಂತೆ ವರ್ಷಕ್ಕೆ ಒಟ್ಟಾರೆ ರಾಜ್ಯದ ಜನರು ಏಳೂವರೆ ಲಕ್ಷ ಕೋಟಿ ರೂ. ನಂತೆ ತೆರಿಗೆ ಕಟ್ಟುತ್ತಾರೆ. ಆದರೆ ದುರ್ದೈವದ ಸಂಗತಿ ಎಂದರೆ ರಾಜ್ಯದ ಬಜೆಟ್ ಗಾತ್ರ ಎರಡೂವರೆ ಲಕ್ಷ ರೂ. ದಾಟಿಲ್ಲ. ಯಾವ ಪಕ್ಷವೂ ತನ್ನ ಪ್ರಣಾಳಿಕೆಯಲ್ಲಿ ಸಾಲ, ತೆರಿಗೆ ಮತ್ತು ಆರ್ಥಿಕತೆ ಬಗ್ಗೆ ವಾಸ್ತವ ತಿಳಿಸಿಲ್ಲ. ಜನರ ಅಭಿಪ್ರಾಯವನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳ ಮೇಲೆ ಒತ್ತಡ ಹಾಕುವ ಕೆಲಸ ಮಾಧ್ಯಮಗಳು ಮಾಡಬೇಕಿದೆ ಎಂದು ನ್ಯಾ. ಎಚ್.ಎನ್. ನಾಗಮೋಹನದಾಸ್ ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೊಪ್ಪಳ ವಿಶ್ವವಿದ್ಯಾಲಯ ಕುಲಪತಿ ಡಾ.ಬಿ.ಕೆ.ರವಿ ಅವರು, ಪತ್ರಕರ್ತರಾದವರು ತಮ್ಮ ಸ್ವಂತ ಜ್ಞಾನದ ಮೇಲೆ ಅವಲಂಬಿತರಾಗಿರಬೇಕೇ ವಿನಃ ತಂತ್ರಜ್ಞಾನದ ಮೇಲೆ ಅವಲಂಬಿತರಾಗಿರಬಾರದು. ಪರಿಶ್ರಮ, ಬದ್ಧತೆ ವೃತ್ತಿಗೆ ಮುಖ್ಯ. ಯಾವ ಮಾಧ್ಯಮ ಜನರ ನಂಬಿಕೆ ಉಳಸಿಕೊಳ್ಳುವುದೋ ಅಲ್ಲಿಯವರೆಗೆ ಆ ಮಾಧ್ಯಮ ಉಳಿದುಕೊಳ್ಳುತ್ತದೆ. ಈ ನಿಟ್ಟಿನಲ್ಲಿ ಪತ್ರಕರ್ತರು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದು ಎಂದು ಕಿವಿಮಾತು ಹೇಳಿದರು.
ಪ್ರಜಾಪ್ರಭುತ್ವದ ಹಬ್ಬವಾದ ಈ ವಿಧಾನಸಭಾ ಚುನಾವಣೆಯಲ್ಲಿ ಜನರು ಹೆಚ್ಚು ಮತದಾನ ಮಾಡುವ ಮೂಲಕ ತಮ್ಮ ಹಕ್ಕು ಚಲಾಯಿಸಬೇಕು. ಆರೋಗ್ಯಕಾರಿ ಮಾಧ್ಯಮದಿಂದ ಆರೋಗ್ಯಕಾರಿ ಸಮಾಜ ನಿರ್ಮಾಣ ಸಾಧ್ಯ ಎಂದು ಅವರು ತಿಳಿಸಿದರು.
ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪತ್ರಕರ್ತರಿಗೆ ವಿಶ್ವಾಸಾರ್ಹತೆಯೇ ಮುಖ್ಯ. ಕೆಯುಡಬ್ಲ್ಯೂಜೆ ಸಂವಾದ ಸರಣಿ ರೂಪದಲ್ಲಿ ಮುಂದುವರಿಯಲಿದೆ ಎಂದು ಹೇಳಿದರು.
ಮೈಸೂರಿನಲ್ಲಿ ಕೆಯುಡಬ್ಲ್ಯುಜೆ ದತ್ತಿ ಪ್ರಶಸ್ತಿಯನ್ನು ಪಡೆಯಲು ಸಾಧ್ಯವಾಗದ ಕಾರಣ ಹಿರಿಯ ಪತ್ರಕರ್ತರಾದ ಮುಂಜಾನೆ ಸತ್ಯ ಅವರಿಗೆ ಪಿ.ಆರ್. ರಾಮಯ್ಯ ಹೆಸರಿನ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು.
ಇದನ್ನೂ ಓದಿ | BJP Karnataka: ಕಾಂಗ್ರೆಸ್ ಮಾಜಿ ಶಾಸಕ ಎಸ್. ಬಾಲರಾಜು ಬಿಜೆಪಿ ಸೇರ್ಪಡೆ: 140 ಸ್ಥಾನ ನಿಶ್ಚಿತ ಎಂದ ಬಿ.ಎಸ್. ಯಡಿಯೂರಪ್ಪ
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ವಾರ್ತಾ ಇಲಾಖೆ ನಿರ್ದೇಶಕರಾದ ಡಿ.ಪಿ.ಮುರಳೀಧರ್, ಉಪ ನಿರ್ದೇಶಕರಾದ ಕೆ.ಪಿ.ಪುಟ್ಟಸ್ವಾಮಯ್ಯ ಅವರ ಸುಧೀರ್ಘ ಸೇವೆಯನ್ನು ಸ್ಮರಿಸಿ ಕೆಯುಡಬ್ಲ್ಯುಜೆ ಇದೇ ಸಂದರ್ಭದಲ್ಲಿ ಸನ್ಮಾನಿಸಿತು.