Site icon Vistara News

KL Rahul: ಅನಾಥ ವಿದ್ಯಾರ್ಥಿಗೆ ಕೆ.ಎಲ್‌. ರಾಹುಲ್‌ ನೆರವು; ಸಿಎ ಆಗುವ ಕನಸಿಗೆ ನೀರೆರೆದ ಕ್ರಿಕೆಟಿಗ

cricketer K L Rahul

#image_title

ಬಾಗಲಕೋಟೆ: ಇತ್ತೀಚೆಗೆ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ ಬಾಲಕನ ಚಿಕಿತ್ಸೆಗೆ 31 ಲಕ್ಷ ರೂಪಾಯಿ ನೀಡಿ ಮಾನವೀಯತೆ ಮೆರೆದಿದ್ದ ಖ್ಯಾತ ಕ್ರಿಕೆಟಿಗ ಕೆ.ಎಲ್‌.ರಾಹುಲ್‌ ಅವರು (KL Rahul), ಇದೀಗ ರಾಜ್ಯದ ಪ್ರತಿಭಾವಂತ ಬಡ ವಿದ್ಯಾರ್ಥಿ ಶಿಕ್ಷಣಕ್ಕೆ ಸಹಾಯಹಸ್ತ ಚಾಚುವ ಮೂಲಕ ಹೃದಯ ವೈಶಾಲ್ಯತೆ ಮೆರೆದಿದ್ದಾರೆ. ಸಿಎ ಕೋಚಿಂಗ್ ಪಡೆಯಲು ಬಾಗಲಕೋಟೆ ಹುಡುಗನಿಗೆ 75 ಸಾವಿರ ರೂಪಾಯಿ ನೆರವು ನೀಡುವ ಮೂಲಕ ವಿದ್ಯಾರ್ಥಿಯ ಓದುವ ಕನಸಿಗೆ ನೀರೆರೆದಿದ್ದಾರೆ.

ಅಮೃತ್ ಮಾವಿನಕಟ್ಟಿ

ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಮಹಾಲಿಂಗಪುರದ ಅಮೃತ್ ಮಾವಿನಕಟ್ಟಿ ಎಂಬ ಬಾಲಕನಿಗೆ ಕೆ.ಎಲ್‌.ರಾಹುಲ್‌ ಸಹಾಯ ಮಾಡಿದ್ದಾರೆ. ವಿದ್ಯಾರ್ಥಿ ಬನಹಟ್ಟಿಯ ಎಸ್‌ಆರ್‌ಎ ಕಾಲೇಜಿನಲ್ಲಿ ದ್ವೀತಿಯ ಪಿಯು ಕಾಮರ್ಸ್ ವಿಭಾಗದಲ್ಲಿ 571 ಅಂಕ ಪಡೆದಿದ್ದಾನೆ. ಆದರೆ, ಈತನ ಮುಂದಿನ ವಿದ್ಯಾಭ್ಯಾಸಕ್ಕೆ ಹಣಕಾಸಿನ ಸಮಸ್ಯೆ ಎದುರಾಗಿತ್ತು. ಈ ಬಗ್ಗೆ ಪರಿಚಿತ ನಿತಿನ್ ಎಂಬುವವರ ಬಳಿ ಹೇಳಿಕೊಂಡಿದ್ದ, ನಿತಿನ್ ತನ್ನ ಹುಬ್ಬಳ್ಳಿಯ ಸ್ನೇಹಿತ, ಸಾಮಾಜಿಕ ಕಾರ್ಯಕರ್ತ ಮಂಜುನಾಥ್ ಹೆಬಸೂರಗೆ ತಿಳಿಸಿದ್ದರು, ಅವರು ಅಕ್ಷಯ್ ಮೂಲಕ ಆರ್ಥಿಕ ನೆರವು ನೀಡುವಂತೆ ಕೆ.ಎಲ್.ರಾಹುಲ್‌ಗೆ ಮನವಿ ಮಾಡಿದ್ದರು.

ಹುಬ್ಬಳ್ಳಿಯ ಕೆಎಲ್‌ಇ ಸಂಸ್ಥೆಯಲ್ಲಿ ಬಿ.ಕಾಂ ಜತೆ ಸಿಎ ಕೋಚಿಂಗ್ ಪಡೆಯುವ ಕೋರ್ಸ್ ಇದ್ದು, ಅದಕ್ಕೆ 85 ಸಾವಿರ ರೂಪಾಯಿ ಖರ್ಚಾಗುತ್ತದೆ. ಹೀಗಾಗಿ ಪ್ರತಿಭಾವಂತ ಅಮೃತ್ ಶುಲ್ಕದಲ್ಲಿ 10 ಸಾವಿರ ರೂಪಾಯಿ ಕಡಿಮೆ ಮಾಡಲು ಆಡಳಿತ ಮಂಡಳಿ ಒಪ್ಪಿತ್ತು. ಹೀಗಾಗಿ ಉಳಿದ 75 ಸಾವಿರ ರೂ.ಗಳನ್ನು ಅಮೃತ್ ಖಾತೆಗೆ ಕೆ.ಎಲ್‌.ರಾಹುಲ್ ಜಮೆ ಮಾಡಿದ್ದಾರೆ.

ಇದನ್ನು ಓದಿ | World Cup 2023 : ಭಾರತ, ಪಾಕ್​ ಸಮರ ಮೋದಿ ಸ್ಟೇಡಿಯಂನಲ್ಲೇ ಅ.​ 15ಕ್ಕೆ ಫಿಕ್ಸ್​, ಉಳಿದ ಪಂದ್ಯಗಳು ಎಲ್ಲಿ?

ಕೋವಿಡ್ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಮಂಜುನಾಥ್ ಹೆಬಸೂರು ಅವರು ಸ್ನೇಹಿತ ಅಕ್ಷಯ್ ಮೂಲಕ ಕ್ರಿಕೆಟಿಗರಾದ ಕೆ.ಎಲ್. ರಾಹುಲ್, ವಿರಾಟ್‌ ಕೊಹ್ಲಿ ,‌ ರವೀಂದ್ರ ಜಡೇಜಾ ಅವರಿಂದ ಧನ ಸಹಾಯ ಪಡೆದಿದ್ದರು. ಇದೀಗ ಬಡ ಹಾಗೂ ತಂದೆ ತಾಯಿ ಇಲ್ಲದ ಅಮೃತ್ ಮಾವಿನಕಟ್ಟಿ, ಬಿಕಾಂ ಹಾಗೂ ಸಿಎ ಓದಿಗೆ ಕೆ.ಎಲ್.‌ ರಾಹುಲ್‌ ಅವರಿಂದ ನೆರವು ಕೊಡಿಸಿದ್ದಾರೆ.

ಮೂರನೇ ತರಗತಿಯಲ್ಲಿದ್ದಾಗಲೇ ತಂದೆ ತಾಯಿ ಕಳೆದುಕೊಂಡಿದ್ದ ಅಮೃತ್, ದೊಡ್ಡಪ್ಪ ಶ್ರೀಶೈಲ್ ಸೊಬರದ, ದೊಡ್ಡಮ್ಮ ಶೋಭಾ ಅವರ ಬಳಿ ಬೆಳೆದಿದ್ದಾನೆ. ಈತನ ವಿದ್ಯಾಭ್ಯಾಸಕ್ಕೆ ನೆರವು ನೀಡಿ ಮಾನವೀಯತೆ ಮೆರೆದ ಕೆ.ಎಲ್‌.ರಾಹುಲ್‌ ಅವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ | Organ Donation: ಮುಸ್ಲಿಂ ಕಟ್ಟುಪಾಡು ಮೀರಿದ ಕುಟುಂಬ: 6 ಜನರಿಗೆ ಜೀವದಾನ ಮಾಡಿದ ಫಾರ್ದೀನ್‌ ಖಾನ್

ಉದಯೋನ್ಮುಖ ಕ್ರಿಕೆಟಿಗನಿಗೆ ನೆರವಾಗಿದ್ದ ರಾಹುಲ್‌

ಭಾರತ ಕ್ರಿಕೆಟ್‌ ತಂಡದ ಆಟಗಾರ ಕೆ.ಎಲ್. ರಾಹುಲ್‌ ಅವರು ಕಳೆದ ವರ್ಷ 11 ವರ್ಷದ ಉದಯೋನ್ಮುಖ ಕ್ರಿಕೆಟಿಗ ವರದ್‌ ನಲವಾಡೆ ಚಿಕಿತ್ಸೆಗಾಗಿ 31 ಲಕ್ಷ ರೂಪಾಯಿ ನೆರವು ನೀಡಿದ್ದರು. 5ನೇ ತರಗತಿಯ ಬಾಲಕ ಅಪ್ಲಾಸ್ಟಿಕ್‌ ಅನೀಮಿಯಾ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ. ಆತನಿಗೆ ಬೋನ್‌ಮ್ಯಾರೋ ಟ್ಲಾನ್ಸ್‌ಪ್ಲಾಂಟ್‌ ಚಿಕಿತ್ಸೆ ಅಗತ್ಯವಿತ್ತು.

ಚಿಕಿತ್ಸೆಗೆ ಸುಮಾರು 35 ಲಕ್ಷ ರೂಪಾಯಿ ಬೇಕಾಗಿತ್ತು. ಆದರೆ, ವಿಮಾ ಏಜೆಂಟ್‌ ಆಗಿದ್ದ ತಂದೆ ಸಚಿನ್‌ಗೆ ಅಷ್ಟೊಂದು ಭಾರಿ ಮೊತ್ತದ ಹಣವನ್ನು ಹೊಂದಿಸಲು ಸಾಧ್ಯವಿರಲಿಲ್ಲ. ನಂತರ ಈ ಬಗ್ಗೆ ಮಾಹಿತಿ ಪಡೆದಿದ್ದ ಕೆ.ಎಲ್‌.ರಾಹುಲ್‌ ಅವರು ಬಾಲಕನ ಚಿಕಿತ್ಸೆಗೆ 31 ಲಕ್ಷ ರೂಪಾಯಿ ಸಹಾಯ ಮಾಡಿದ್ದರು. ಅದಾದ ಬಳಿಕ ಮುಂಬೈ ಆಸ್ಪತ್ರೆಯಲ್ಲಿ ಬಾಲಕನಿಗೆ ಚಿಕಿತ್ಸೆ ನೀಡಲಾಗಿತ್ತು.

Exit mobile version