ತುಮಕೂರು: ಟೀಂ ಇಂಡಿಯಾದ ಕ್ರಿಕೆಟ್ ಆಟಗಾರ ಕೆ.ಎಲ್. ರಾಹುಲ್ ಅವರು ಕುಟುಂಬ ಸಮೇತ ತುಮಕೂರಿನ ಸಿದ್ದಗಂಗಾ ಮಠಕ್ಕೆ ಭಾನುವಾರ ಭೇಟಿ ನೀಡಿ ಸಿದ್ದಲಿಂಗ ಸ್ವಾಮೀಜಿಗಳ ಆಶೀರ್ವಾದ ಪಡೆದರು. ನೆಚ್ಚಿನ ಕ್ರಿಕೆಟಿಗ ನಗರಕ್ಕೆ ಆಗಮಿಸಿರುವ ಸುದ್ದಿ ತಿಳಿದು ಸಾವಿರಾರು ಮಕ್ಕಳು, ಅಭಿಮಾನಿಗಳು ಮಠದತ್ತ ಆಗಮಿಸಿ, ಕೆ.ಎಲ್. ರಾಹುಲ್ (KL Rahul) ಅವರನ್ನು ನೋಡಲು ಮುಗಿಬಿದ್ದರು.
ಕೆ.ಎಲ್.ರಾಹುಲ್ ಅವರು ಡಾ. ಶಿವಕುಮಾರ ಶ್ರೀಗಳ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸಿದ್ದಗಂಗಾ ಮಠಾಧ್ಯಕ್ಷರಾದ ಸಿದ್ದಲಿಂಗ ಸ್ವಾಮೀಜಿಗಳ ಆಶೀರ್ವಾದ ಪಡೆದರು. ತಂದೆ ಲೋಕೇಶ್, ತಾಯಿ ಲೋಕೇಶ್ವರಿ ಅವರೊಂದಿಗೆ ಅವರು ಮಠಕ್ಕೆ ಆಗಮಿಸಿದ್ದರು.
ರಾಹುಲ್ ತಂದೆ ಲೋಕೇಶ್ ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಕಣ್ಣೂರು ಮೂಲದವರು. ಅವರು ಸಿದ್ಧಗಂಗಾ ಮಠದ ಭಕ್ತರಾಗಿದ್ದಾರೆ. ಇನ್ನು ಕ್ರಿಕೆಟ್ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಸಿದ್ದಲಿಂಗ ಶ್ರೀಗಳು, ರಾಹುಲ್ ಪ್ರತಿಭೆಯನ್ನು ಪ್ರಶಂಸಿಸಿ ಇನ್ನು ಎತ್ತರಕ್ಕೆ ಬೆಳೆಯುವಂತೆ ಹಾರೈಸಿದರು.
ಇದನ್ನೂ ಓದಿ | KL Rahul: ಬ್ಯಾಟಿಂಗ್ ಅಭ್ಯಾಸ ಆರಂಭಿಸಿದ ರಾಹುಲ್; ನಿಟ್ಟುಸಿರು ಬಿಟ್ಟ ಭಾರತ ತಂಡ
ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯ ಆಡಿದ್ದ ಕೆ.ಎಲ್ ರಾಹುಲ್ ಅವರು ಸ್ನಾಯು ಸೆಳೆತದಿಂದಾಗಿ ದ್ವಿತೀಯ ಟೆಸ್ಟ್ ಪಂದ್ಯದಿಂದ ಹೊರಬಿದ್ದಿದ್ದರು. ಬಳಿಕ ಬೆಂಗಳೂರಿನ ಎನ್ಸಿಎ ಸೇರಿ, ಫಿಟ್ನೆಸ್ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಇವರ ಜತೆಗೆ ರವೀಂದ್ರ ಜಡೇಜಾ ಕೂಡ ಬಂದಿದ್ದರು. ಸದ್ಯ ರಾಹುಲ್ ಫಿಟ್ ಆಗಿರುವಂತೆ ತೋರುತ್ತಿದೆ.ರಾಹುಲ್ ಅವರು ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿರುವ ವಿಡಿಯೊವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಇತ್ತೀಚೆಗೆ ಹಂಚಿಕೊಂಡಿದ್ದರು.