ಅಫಜಲಪುರ: ವಿವಿಧ ಬೇಡಿಕೆಗಳ (Various demands) ಈಡೇರಿಕೆಗೆ ಒತ್ತಾಯಿಸಿ, ರೇವೂರ(ಬಿ) ಗ್ರಾಮಸ್ಥರು ಗ್ರಾಮ ಪಂಚಾಯತ್ ಕಚೇರಿ ಮುಂಭಾಗ ಪ್ರತಿಭಟನಾ (Protest) ಧರಣಿ ನಡೆಸಿದರು.
ಗ್ರಾಮದ ಯುವ ಮುಖಂಡ ರಾಜಶೇಖರ ಕಲಶೆಟ್ಟಿ ಮಾತನಾಡಿ, ಅಭಿವೃದ್ಧಿ ವಿಷಯದಲ್ಲಿ ಗ್ರಾಮಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕಾದ ಗ್ರಾಮ ಪಂಚಾಯತ್ ನ ಅಧ್ಯಕ್ಷರು, ಪಿಡಿಒ ಮತ್ತು ಸಿಬ್ಬಂದಿಗಳು ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿದರು.
ಇದನ್ನೂ ಓದಿ: Yoga Day 2023: ಇದು ಯೋಗಾಭ್ಯಾಸದ ಸುಯೋಗ; ಫೋಟೊ-ವಿಡಿಯೊ ಮಾಡಿ ವಿಸ್ತಾರ ನ್ಯೂಸ್‌ಗೆ ಕಳುಹಿಸಿ
ಗ್ರಾಮದಲ್ಲಿ ಬೀದಿ ದೀಪ, ಚರಂಡಿ ವ್ಯವಸ್ಥೆ, ಶೌಚಾಲಯ ಹೀಗೆ ಅನೇಕ ಸಮಸ್ಯೆಗಳು ತಾಂಡವವಾಡುತ್ತಿವೆ ಮತ್ತು ರಸ್ತೆ ಕಾಮಗಾರಿಗಳನ್ನು ಕಳಪೆ ಮಟ್ಟದಿಂದ ಮಾಡಲಾಗಿದೆ. ಈ ಹಿನ್ನಲೆಯಲ್ಲಿ ಕೂಡಲೇ ಇಲ್ಲಿನ ಗಂಭೀರ ಸಮಸ್ಯೆಗಳಿಗೆ ಪರಿಹಾರ ಒದಗಿಸಿ, ಕಳಪೆ ಕಾಮಗಾರಿ ಮಾಡಿದವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿ ಅಧ್ಯಕ್ಷರು ಮತ್ತು ಸಿಬ್ಬಂದಿಗಳು ಪ್ರತಿದಿನ ಹಾಜರಿದ್ದು ಸಾರ್ವಜನಿಕ ಸಮಸ್ಯೆಗಳ ಕುಂದು ಕೊರತೆಗಳನ್ನು ಆಲಿಸಬೇಕು ಎಂದು ಒತ್ತಾಯಿಸಿದರು.
ನಮ್ಮ ಬೇಡಿಕೆಗಳು ಈಡೇರಿಸದಿದ್ದಲ್ಲಿ ಮುಂಬರುವ ದಿನಗಳಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದರು..
ಬಳಿಕ ಮಾತನಾಡಿದ ತಾಲೂಕು ಪಂಚಾಯತ್ ನ ಕಾರ್ಯನಿರ್ವಾಹಕ ಅಧಿಕಾರಿ ರಮೇಶ್ ಸುಲ್ಫಿ, ಗ್ರಾಮ ಪಂಚಾಯತ್ ನ ಅಧ್ಯಕ್ಷರು, ಪಿಡಿಒ, ಸಿಬ್ಬಂದಿಗಳು ಹಾಗೂ ಸರ್ವ ಸದಸ್ಯರು ಸೇರಿ ಆಗಾಗ ಸಭೆ ನಡೆಸಬೇಕು ಮತ್ತು ಸಭೆಯಲ್ಲಿ ನಿರ್ಣಯಿಸಿದ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಕ್ರಮವಾಗಿ ಕೆಲಸ ಮಾಡಿಕೊಂಡು ಬಂದಾಗ ಇಂತಹ ಸಮಸ್ಯೆಗಳು ಉಲ್ಬಣಗೊಳ್ಳುವುದಿಲ್ಲ, ಸಮಸ್ಯೆಯ ಕುರಿತು ಪರಿಶೀಲನೆ ನಡೆಸುವುದಾಗಿ ತಿಳಿಸಿದರು.
ಇದನ್ನೂ ಓದಿ: Indira Canteen: ಇಂದಿರಾ ಕ್ಯಾಂಟೀನ್‌ಗೆ ಸುಸ್ವಾಗತ; ಸೋಮವಾರ ಟು ಶನಿವಾರ ತಿಂಡಿ-ತಿನಿಸಿನ ಜರ್ನಿ ಹೀಗಿದೆ!
ಈ ವೇಳೆ ಶಿವಾನಂದ ಕುಂಬಾರ, ಲಕ್ಷ್ಮೀಪುತ್ರ, ರಾಮಲಿಂಗ ಮಂಜುಳಕರ, ಬಸವರಾಜ ಪಾಟೀಲ, ಅಂಕುಶ ರಾಥೋಡ, ಯಶವಂತರಾಯ ಪಾಟೀಲ, ರಾಜಶೇಖರ ಪಾಟೀಲ, ಮಾಂತು ಉಡಗಿ, ಸಿದ್ದು ಘಾಣೂರ ಸೇರಿದಂತೆ ಇತರರು ಪಾಲ್ಗೊಂಡಿದ್ದರು.