Site icon Vistara News

Kalaburagi News: ಜೂ.14ರಂದು ಸಿಎಂ ನೇತೃತ್ವದಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಪ್ರಗತಿ ಪರಿಶೀಲನಾ ಸಭೆ

KKRDB Chairman Dr Ajay Singh pressmeet in Kalaburagi

ಕಲಬುರಗಿ: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರ ನೇತೃತ್ವದಲ್ಲಿ ಇದೇ ಜೂನ್ 14ರಂದು ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ ಎಂದು ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷ ಡಾ. ಅಜಯ್ ಸಿಂಗ್ (Kalaburagi News) ಹೇಳಿದರು.

ಇಲ್ಲಿನ ಕೆ.ಕೆ.ಆರ್.ಡಿ.ಬಿ ಸಭಾಂಗಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸಕ್ತ 2024-25ನೇ ಸಾಲಿಗೆ 5,000 ಕೋಟಿ ರೂ. ಅನುದಾನ ನೀಡಿದ್ದು, ಇದನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರಲು ಮತ್ತು ಸದರಿ ಅನುದಾನ ಇದೇ ವರ್ಷದಲ್ಲಿ ಖರ್ಚು ಮಾಡುವ ಸಂಬಂಧ ಯೋಜನಾ ಇಲಾಖೆಯ ಹಿರಿಯ ಅಧಿಕಾರಿಗಳು ಸೇರಿದಂತೆ ಕ.ಕ. ಭಾಗದ ಸಚಿವರನ್ನು ಸಹ ಸಭೆಗೆ ಆಹ್ವಾನಿಸಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: Gold Rate Today: ಚಿನ್ನದ ದರ ಮತ್ತೆ ಗಗನಮುಖಿ; ಇಂದಿನ ಬೆಲೆ ಇಷ್ಟಿದೆ

ಸಿಎಂ ಸಭೆ ನಂತರ ಇದೇ ಜೂನ್ 28ಕ್ಕೆ ಮಂಡಳಿ ಸಭೆ ನಡೆಸಲು ನಿರ್ಧರಿಸಿದ್ದು, 15 ದಿನದೊಳಗೆ ಪ್ರದೇಶದ ಶಾಸಕರಿಂದ ಕ್ರಿಯಾ ಯೋಜನೆ ಪಡೆದು ಪ್ರಸಕ್ತ ಸಾಲಿನ ಕೆಲಸಗಳು ಆರಂಭಿಸಲಾಗುವುದು ಎಂದರು. ಕಳೆದ ವರ್ಷ ನಮ್ಮ ಸರ್ಕಾರ ಈ ಭಾಗಕ್ಕೆ 5 ಸಾವಿರ ಕೋಟಿ ರೂ. ಅನುದಾನ ಘೋಷಿಸಿ 3 ಸಾವಿರ ಕೋಟಿ ರೂ. ಅನುದಾನ ಹಂಚಿಕೆ ಮಾಡಿದ್ದು, ಅದರಂತೆ ಪ್ರದೇಶದಲ್ಲಿ ರಸ್ತೆ, ಚರಂಡಿ ನಿರ್ಮಾಣ, ಮೂಲಸೌಕರ್ಯ ಕೆಲಸ ಭರದಿಂದ ಸಾಗಿದೆ. ಇದರೊಂದಿಗೆ ಪ್ರದೇಶದಲ್ಲಿ ವಿಶೇಷವಾಗಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಅಕ್ಷರ ಆವಿಷ್ಕಾರ, ಆರೋಗ್ಯ ಆವಿಷ್ಕಾರ ಯೋಜನೆ ಜಾರಿಗೆ ತರಲಾಗಿದೆ ಎಂದು ಹೇಳಿದರು.

ನೀಟ್ ಪರೀಕ್ಷೆ ಅವ್ಯವಹಾರ ಕುರಿತಂತೆ ಪ್ರತಿಕ್ರಿಯಿಸಿದ ಡಾ.ಅಜಯ್ ಸಿಂಗ್, ಲೋಕಸಭಾ ಚುನಾವಣಾ ಫಲಿತಾಂಶ ದಿನವೇ ಪರೀಕ್ಷೆ ರಿಸಲ್ಟ್ ಘೋಷಣೆ ಮಾಡಿದ್ದು, ಹಲವು ಅವಮಾನಕ್ಕೆ ಎಡೆಮಾಡಿಕೊಟ್ಟಿದೆ. ಎಲ್ಲೆಡೆ ಅವ್ಯವಹಾರ ಕೇಳಿ ಬರುತ್ತಿದೆ ಎಂದು ಆರೋಪಿಸಿದ ಅವರು, ಕೂಡಲೇ ತನಿಖೆ ನಡೆಸಿ, ತಪ್ಪಿತಸ್ಥರ ಮೇಲೆ ಕ್ರಮ‌ ಕೈಗೊಳ್ಳಬೇಕು ಎಂದು ಒತ್ತಾಯಿಸಿದ ಅವರು, ಮಕ್ಕಳ ಭವಿಷ್ಯದ ಜತೆಗೆ ಚೆಲ್ಲಾಟವಾಡುವುದನ್ನು ನಮ್ಮ ಸರ್ಕಾರ ಸಹಿಸುವುದಿಲ್ಲ‌ ಎಂದು ತಿಳಿಸಿದರು.

ಇದನ್ನೂ ಓದಿ:Tata Motors: ಟಾಟಾ ಮೋಟಾರ್ಸ್‌ನಿಂದ ʼಆಲ್ಟ್ರೋಜ್ ರೇಸರ್ʼ ಬಿಡುಗಡೆ; ದರ ಎಷ್ಟು?

ಶಿಕ್ಷಣಕ್ಕೆ ಹೆಚ್ಚಿನ ಒತ್ತು

ಪ್ರದೇಶದಲ್ಲಿ ಶಿಕ್ಷಕರ ಕೊರತೆ ಇರುವುದು ನಿಜ. ಮಂಡಳಿ ಅತಿಥಿ ಶಿಕ್ಷಕರನ್ನು ನೇಮಿಸಬಹುದು. ಪೂರ್ಣ ಪ್ರಮಾಣದಲ್ಲಿ ಶಿಕ್ಣಕರ ನೇಮಕ ಸರ್ಕಾರದ ಹಂತದಲ್ಲಿಯೇ ನಡೆಯಬೇಕಾಗುತ್ತದೆ. ಮುಖ್ಯಮಂತ್ರಿಗಳಲ್ಲಿ ಶಿಕ್ಷಕರ ಹುದ್ದೆ ಭರ್ತಿಗೆ ಒತ್ತಾಯ ಮಾಡಲಾಗುವುದು. ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆ ನಿಟ್ಟಿನಲ್ಲಿ ಅನುಭವಿ ಶಿಕ್ಷಣ ತಜ್ಞರ ಸಮಿತಿ ರಚಿಸಿ ಅವರ ಸಲಹೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು. ಕಳೆದ ವರ್ಷ ಮಂಡಳಿಯು ಶಿಕ್ಷಣ ಕ್ಷೇತ್ರಕ್ಕೆ ಮೀಸಲಿಡಲಾದ 652 ಕೋಟಿ ರೂ. ಮೊತ್ತದಲ್ಲಿ ಫಲಿತಾಂಶ‌ ಸುಧಾರಣೆ ನಿಟ್ಟಿನಲ್ಲಿ ಕೇವಲ 3 ಕೋಟಿ ರೂ. ಖರ್ಚು ಮಾಡಿದೆ. ಮುಂದಿನ‌ ದಿನದಲ್ಲಿ ಈ ಮೊತ್ತ ಹೆಚ್ಚಿಸಲಾಗುವುದು ಎಂದು ತಿಳಿಸಿದರು.

2,009 ಕೋಟಿ ರೂ. ಖರ್ಚು

ಕೆ.ಕೆ.ಆರ್.ಡಿ.ಬಿ. ಮಂಡಳಿಗೆ 2023-24ನೇ ಸಾಲಿಗೆ ರಾಜ್ಯ ಸರ್ಕಾರ 5 ಸಾವಿರ ಕೋಟಿ ರೂ. ಅನುದಾನ ಘೋಷಿಸಿ, 3 ಸಾವಿರ ಕೋಟಿ ರೂ. ಹಂಚಿಕೆ‌ ಮಾಡಲಾಗಿದೆ. ಇದರಲ್ಲಿ ಇದುವರೆಗೆ 2,009 ಕೋಟಿ ರೂ. ಖರ್ಚು ಮಾಡಿದ್ದು, ಬರುವ ಆಗಸ್ಟ್ ಮಾಹೆವರೆಗೆ ಉಳಿದ ಅನುದಾನ ಸಹ ಖರ್ಚು ಮಾಡಲಾಗುವುದು ಎಂದರು.

ಇದನ್ನೂ ಓದಿ: Bird Flu: ದೇಶದಲ್ಲಿ ಎರಡನೇ ಹಕ್ಕಿ ಜ್ವರದ ಪ್ರಕರಣ ಪತ್ತೆ; ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ

371ಜೆ ಮೀಸಲಾತಿ ವಿರೋಧಕ್ಕೆ ಖಂಡನೆ

ದೇಶದಲ್ಲಿ ಅತ್ಯಂತ ಹಿಂದುಳಿದ ಪ್ರದೇಶವೆಂದು ಕಲ್ಯಾಣ ಕರ್ನಾಟಕ ಭಾಗಕ್ಕೆ ದಶಕಗಳ ಹೋರಾಟ ಫಲವಾಗಿ 371(ಜೆ) ಮೀಸಲಾತಿ ದೊರಕಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಕೆಲವು ಸಂಘಟನೆಗಳು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವುದಕ್ಕೆ ಖಂಡಿಸುತ್ತೇನೆ ಎಂದ ಅವರು, ಈ ಭಾಗಕ್ಕೆ ಸಂವಿಧಾನ ಬದ್ಧ ಸಿಗಬೇಕಾದ ಸವಲತ್ತು ದೊರಕಿಸಲು ಮತ್ತು ಮೀಸಲಾತಿ ರಕ್ಷಣೆ‌ಗೆ ತಾವು ಬದ್ಧರಾಗಿದ್ದೇವೆ. ಯಾವುದೇ ಹಂತದ ಹೋರಾಟಕ್ಕೂ ಹಿಂಜರಿಯುವುದಿಲ್ಲ ಎಂದು ತಿಳಿಸಿದರು.

Exit mobile version