Site icon Vistara News

Kalaburagi News: ಕಲಬುರಗಿಯಲ್ಲಿ ಕೃಷಿ ಮಾಹಿತಿ ರಥಕ್ಕೆ ಸಚಿವ ಡಾ. ಶರಣಪ್ರಕಾಶ್‌ ಪಾಟೀಲ್‌ ಚಾಲನೆ

Minister Dr Sharanprakash Patil drives Agricultural Information Chariot in Kalaburagi

ಕಲಬುರಗಿ: ನಗರದ ಜಿಲ್ಲಾಧಿಕಾರಿಗಳ ಕಚೇರಿ (DC office) ಅವರಣದಲ್ಲಿ ಬುಧವಾರ ಕೃಷಿ (Agriculture) ಇಲಾಖೆಯ “ಕೃಷಿ ಮಾಹಿತಿ ರಥ” ಸಂಚಾರಿ ವಾಹನಗಳಿಗೆ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್‌ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ಕಳೆದ ವರ್ಷ ಈ ಭಾಗದ ಪ್ರಮುಖ ಬೆಳೆ‌ ತೊಗರಿ ನೆಟೆ ರೋಗದಿಂದ ತತ್ತರಿಸಿ ಬಹಳಷ್ಟು ಹಾನಿಯಾಗಿತ್ತು. ಈ ವರ್ಷ ಇದು ಮರುಕಳಿಸದಂತೆ ಹೊಸ ತಳಿಯ ಬೀಜವನ್ನು ನೀಡಲಾಗುತ್ತಿದೆ. ಜತೆಗೆ ನೆಟೆ ರೋಗ ನಿರ್ವಹಣಾ ಕ್ರಮಗಳು, ಪರ್ಯಾಯ ಬೆಳೆ‌ ಬಿತ್ತನೆಗೆ ಸಲಹೆ, ಬಸವನ ಹುಳು ನಿಯಂತ್ರಣ ಸಂಬಂಧ ರೈತಾಪಿ ವರ್ಗಕ್ಕೆ ಹಳ್ಳಿಗಳಿಗೆ ಹೋಗಿ ಈ ಸಂಚಾರಿ ವಾಹನಗಳು ಮಾಹಿತಿ ನೀಡಲಿವೆ. ರೈತ ಬಾಂಧವರು ಇದರ ಪ್ರಯೋಜನವನ್ನು ಪಡೆಯಬೇಕು. ತಾಂತ್ರಿಕ ಮಾಹಿತಿಗೆ ರೈತ ಸಂಪರ್ಕ ಅಧಿಕಾರಿಗಳನ್ನು‌ ಸಂಪರ್ಕಿಸಬೇಕು ಎಂದು ತಿಳಿಸಿದರು.

ಇದನ್ನೂ ಓದಿ: Congress Guarantee: ವಿದ್ಯುತ್‌ ಬಳಕೆ ಸರಾಸರಿ ಮೀರಿದರೆ ಎಷ್ಟು ಕಟ್ಟಬೇಕು? ಇಲ್ಲಿದೆ ಸರ್ಕಾರದ ಹೊಸ ನಿಯಮ

ತೊಗರಿ ನೆಟೆ ರೋಗಕ್ಕೆ ಪರಿಹಾರ

ಕಳೆದ‌ ವರ್ಷ ಜಿಲ್ಲೆಯಲ್ಲಿ ನೆಟೆ ರೋಗದಿಂದ‌ ಬಹಳಷ್ಟು ತೊಗರಿ ಬೆಳೆ ಹಾನಿಯಾಗಿದ್ದು, ಹಿಂದಿನ ಸರ್ಕಾರ ಪರಿಹಾರ ಮಾತ್ರ ಘೋಷಿಸಿದ್ದು, ಪರಿಹಾರ‌ ನೀಡಿರಲಿಲ್ಲ. ಇದೀಗ ನಮ್ಮ‌ ಸರ್ಕಾರ‌ ಅಸ್ತಿತ್ವಕ್ಕೆ ಬಂದಿದ್ದು, ಪರಿಹಾರ ನೀಡುವ ನಿಟ್ಟಿನಲ್ಲಿ ಸರ್ಕಾರದ ಹಂತದಲ್ಲಿ‌ ಚರ್ಚೆ ಮಾಡಲಾಗುತ್ತಿದೆ‌ ಎಂದರು.

ಮಾಹಿತಿ ರಥದ ಸಂಚಾರದ ವಿವರ

ಕೃಷಿ ಮಾಹಿತಿ ರಥಗಳು ಒಟ್ಟು 14 ಇದ್ದು, ಪ್ರತಿ ತಾಲೂಕಿಗೆ 2ರಂತೆ ಜಿಲ್ಲೆಯ 32 ಹೋಬಳಿಗಳಲ್ಲಿ ವಾಹನ‌ಗಳು ಸಂಚರಿಸಲಿವೆ. ಈ ರಥಗಳು ಪ್ರತಿ ತಾಲೂಕಿನ ಹೋಬಳಿ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿ‌ ಸಂಚರಿಸಿ ಮುಂಗಾರು ಹಂಗಾಮಿನ ಪೂರ್ವ ಸಿದ್ಧತೆ, ನೆಟೆ ರೋಗ, ಬಸವನ ಹುಳು ನಿಯಂತ್ರಣ ಮತ್ತು ಹತೋಟಿ ಕ್ರಮದ ಕುರಿತು ಧ್ವನಿವರ್ಧಕ ಮೂಲಕ ಜಿಂಗಲ್ಸ್ ಪ್ರಸಾರದ ಜತೆಗೆ ಕರಪತ್ರಗಳನ್ನು ರೈತರಿಗೆ ಹಂಚುವ ಮೂಲಕ ಮಾಹಿತಿ ನೀಡಲಾಗುತ್ತದೆ.

ಇದನ್ನೂ ಓದಿ: Text Book: ಪಠ್ಯ ಪರಿಷ್ಕರಣೆ ಸಮಿತಿಗೆ ಅಧ್ಯಕ್ಷ ಆಗಲಾರೆ; ಸರ್ಕಾರದ ಆಫರ್‌ ತಿರಸ್ಕರಿಸಿದ ಬರಗೂರು ರಾಮಚಂದ್ರಪ್ಪ

ಇದೇ ಸಂದರ್ಭದಲ್ಲಿ ರೈತರಿಗೆ ದೊರೆಯುವ ಯೋಜನೆಗಳು, ಬೀಜೋಪಚಾರ, ಪಿ.ಎಂ- ಕಿಸಾನ್ ಈ-ಕೆವೈಸಿ, ತೊಗರಿ ನೆಟ ರೋಗ ಹಾಗೂ ಬಸವನ ಹುಳು ನಿಯಂತ್ರಣದ ಕುರಿತು ಕರಪತ್ರಗಳನ್ನು ಸಹ ಸಚಿವರು ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಡಿ.ಸಿ. ಯಶವಂತ ವಿ. ಗುರುಕರ್, ಜಿಲ್ಲಾ ಪಂಚಾಯತ್ ಸಿಇಒ ಡಾ.ಗಿರೀಶ್ ಡಿ. ಬದೋಲೆ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಿದ್ರಾಮಪ್ಪ‌ ಧಂಗಾಪೂರ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸಮದ್ ಪಟೇಲ್, ಉಪ ನಿರ್ದೇಶಕರಾದ ಸೋಮಶೇಖರ ಬಿರಾದಾರ, ಅನುಸೂಯಾ, ಸಹಾಯಕ ನಿರ್ದೇಶಕ‌ ಚಂದ್ರಕಾಂತ ಜೀವಣಗಿ, ಆಹಾರ ಇಲಾಖೆ ಉಪನಿರ್ದೇಶಕ ಶಾಂತಗೌಡ ವಿ. ಗುಣಕಿ, ಜಿಲ್ಲಾ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಜಗದೇವ ಗುತ್ತೇದಾರ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Exit mobile version