Site icon Vistara News

Kalburagi News: ಕ್ರೀಡೆಗಳು ದೈಹಿಕ, ಮಾನಸಿಕ ಆರೋಗ್ಯಕ್ಕೆ ಸಹಕಾರಿ: ತಹಸೀಲ್ದಾರ್ ಗುರುರಾಜ ಸಂಗಾವಿ

Shahabad Hobli Level High School Sports Inauguration

ಶಹಾಬಾದ್‌: ಕ್ರೀಡೆಗಳು (Sports) ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ (Health) ಸಹಕಾರಿಯಾಗಿದೆ ಎಂದು ತಹಸೀಲ್ದಾರ್ ಗುರುರಾಜ ಸಂಗಾವಿ ತಿಳಿಸಿದರು.

ಇಲ್ಲಿನ ಬಿ.ವಿ.ಎಂ. (ರೈಲ್ವೆ ಮೈದಾನ) ಶಾಲೆಯ ಆವರಣದಲ್ಲಿ ಶಹಾಬಾದ್‌ ಹೋಬಳಿ ಮಟ್ಟದ ಪ್ರೌಢಶಾಲೆಯ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕ್ರೀಡೆಯಲ್ಲಿ ಸೋಲು-ಗೆಲುವನ್ನು ಸಮನಾಗಿ ಸ್ವೀಕರಿಸಿ, ತೀರ್ಪುಗಾರರು ನೀಡುವ ತೀರ್ಪು ಗೌರವಿಸಿ. ಎರಡು ದಿನ ಸಂಭ್ರಮದಿಂದ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಸಾಧಕರಾಗಿ ಶಾಲೆಗಳಿಗೆ ತೆರಳಿ ಎಂದು ಹೇಳಿದರು.

ಇದನ್ನೂ ಓದಿ: Agriculture APP : ರೈತರಿಗಾಗಿ AI ಆಧಾರಿತ ಆ್ಯಪ್ ಶೀಘ್ರ; ಕೃಷಿ ಇಲಾಖೆಯಿಂದ ಮಹತ್ವದ ಹೆಜ್ಜೆ

ತಾ. ಪಂ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿನಾಥ ರಾವೂರ, ಹೋಬಳಿ ಮಟ್ಟದ ಕ್ರೀಡಾಕೂಟದ ಕ್ರೀಡಾಜ್ಯೋತಿ ಬೆಳಗಿಸಿದರು. ಬಳಿಕ ಮಾತನಾಡಿದ ಅವರು, ಗೆಲುವು ಜವಾಬ್ದಾರಿ ಹೆಚ್ಚಿಸುತ್ತದೆ, ಸೋಲು ಹಿಂದಿನ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಮಾರ್ಗದರ್ಶನ ನೀಡುತ್ತದೆ. ಮಕ್ಕಳು ಸ್ನೇಹಪೂರ್ವಕವಾಗಿ ಕ್ರೀಡೆಗಳಲ್ಲಿ ಭಾಗವಹಿಸಬೇಕು,

ತೀರ್ಪುಗಾರರು ವಸ್ತು ನಿಷ್ಠೆಯಿಂದ ತೀರ್ಪು ನೀಡಿ, ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಗುರುತಿಸಿ ನಿಜವಾದ ಪ್ರತಿಭೆಗಳನ್ನು ಆಯ್ಕೆ ಮಾಡಿ ಎಂದು ಸಲಹೆ ನೀಡಿದರು.

ಬಳಿಕ ನಗರಸಭೆಯ ಪೌರಾಯುಕ್ತೆ ಪಂಕಜ ಮಾತನಾಡಿ, ಶಿಕ್ಷಣದ ಜತೆಗೆ ಕ್ರೀಡೆ ಅಗತ್ಯ, ಶಿಕ್ಷಣ ಇಲಾಖೆ ಕ್ರೀಡೆಗಳಿಗೆ ಹೆಚ್ಚಿನ ಆದ್ಯತೆ ಕಲ್ಪಿಸಬೇಕು, ಉತ್ತಮ ಆರೋಗ್ಯವಿರುವ ದೇಹದಲ್ಲಿ ಆರೋಗ್ಯಕರ ಮನಸ್ಸು ಇರುತ್ತದೆ, ವಿದ್ಯಾರ್ಥಿಗಳಲ್ಲಿ ದಿನನಿತ್ಯದ ದೈನಂದಿನ ಚಟುವಟಿಕೆಗಳ ಜತೆಗೆ ಕ್ರೀಡಾ ಆಸಕ್ತಿ ಮೈಗೂಡಿಸಿಕೊಳ್ಳಬೇಕು, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹೋಬಳಿ ಮಟ್ಟದಿಂದ, ತಾಲೂಕು, ಜಿಲ್ಲೆ ಸೇರಿದಂತೆ ರಾಜ್ಯ ಮಟ್ಟವನ್ನು ಪ್ರತಿನಿಧಿಸುವ ಮೂಲಕ ಕೀರ್ತಿ ತರಬೇಕೆಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ದೇವೇಂದ್ರ ರೆಡ್ಡಿ ಅಧ್ಯಕ್ಷತೆ ವಹಿಸಿದ್ದರು.

ಇದನ್ನೂ ಓದಿ: Neeraj Chopra: ಖಂಡಿತವಾಗಿಯೂ 90 ಮೀ. ದೂರ ಜಾವೆಲಿನ್‌ ಎಸೆಯುವೆ; ನೀರಜ್‌ ವಿಶ್ವಾಸ

ಈ ಸಂದರ್ಭದಲ್ಲಿ ನಗರ ಪೋಲಿಸ್ ಠಾಣೆಯ ಎಎಸ್‌ಐ ಶ್ರೀಕಾಂತ ನಾಯಕ, ಬಿಆರ್‌ಪಿ ಅಶ್ವಿನಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಈರಣ್ಣ ಕೆಂಭಾವಿ, ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಿದಾನಂದ ಕುಡ್ಡನ್, ಶಿವಪುತ್ರ ಕರಣಿಕ್ ಹಾಗೂ ಇತರರು ಇದ್ದರು.

ಸುಮಾರು 25 ಪ್ರೌಢಶಾಲೆಗಳ 1000ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸುಮಾರು 30 ಕ್ಕೂ ಹೆಚ್ಚು ದೈಹಿಕ ಶಿಕ್ಷಕರು ಹಾಗೂ ಸಹ ಶಿಕ್ಷಕರು ಪಾಲ್ಗೊಂಡಿದ್ದರು.

Exit mobile version