Site icon Vistara News

Kalaburagi News: ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನಿಲುವು ಖಂಡಿಸಿ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ

BJP Raitha Morcha protest against Congress government at Jewargi

ಜೇವರ್ಗಿ: ಕಾಂಗ್ರೆಸ್ ಸರ್ಕಾರದ (Karnataka Congress government) ರೈತ ವಿರೋಧಿ ನಿಲುವು ಖಂಡಿಸಿ, ಪಟ್ಟಣದಲ್ಲಿ ಬಿಜೆಪಿ ರೈತ ಮೋರ್ಚಾ ಘಟಕದಿಂದ ಶುಕ್ರವಾರ ಬೃಹತ್ ಪ್ರತಿಭಟನೆ (BJP Protest) ನಡೆಸಲಾಯಿತು.

ಪಟ್ಟಣದ ಹಳೇ ತಹಸೀಲ್ದಾರ್‌ ಕಚೇರಿಯಿಂದ ಅಂಬೇಡ್ಕರ್ ವೃತ್ತದ ಮಾರ್ಗವಾಗಿ ತಹಸೀಲ್ದಾರ್‌ ಕಚೇರಿಯವರಿಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ದಿಕ್ಕಾರ ಕೂಗಲಾಯಿತು.

ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಜನರಿಗೆ ಸುಳ್ಳು ಆಶ್ವಾಸನೆಗಳನ್ನು ನೀಡಿ ಮೋಸ ಮಾಡಿದ್ದಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಅನುದಾನವನ್ನು ಬಿಟ್ಟಿ ಭಾಗ್ಯಗಳಿಗೆ ದುರ್ಬಳಕ್ಕೆ ಮಾಡಿಕೊಂಡಿದ್ದಾರೆ ಮತ್ತು ಅನೇಕ ಅಭಿವೃದ್ಧಿಗಾಗಿ ನೀಡುವ ಅನುದಾನವನ್ನು ಈಗಿನ ಕಾಂಗ್ರೆಸ್ ಸರ್ಕಾರ ವಿವಿಧ ಭಾಗ್ಯಗಳಿಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಅವರು ಆರೋಪಿಸಿದರು.

ಇದನ್ನೂ ಓದಿ: Tips for Healthy Travel: ಪ್ರವಾಸ ಮಾಡುತ್ತಿದ್ದೀರಾ? ಆಹಾರದ ಸಮತೋಲನಕ್ಕಾಗಿ ಹೀಗೆ ಮಾಡಿ

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರು ತಿಂಗಳಾಗಿದೆ. ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡದೆ ಬಿಟ್ಟಿ ಭಾಗ್ಯಗಳಿಗೆ ಅಭಿವೃದ್ಧಿ ಹಣ ಬಳಸಿಕೊಳ್ಳುತ್ತಿದೆ. ಜತೆಗೆ ರೈತ ವಿರೋಧಿ ನಿಲುವನ್ನು ಅನುಸರಿಸುತ್ತಿದೆ ಎಂದು ಅವರು ದೂರಿದರು.

ಪಕ್ಷದ ಮುಖಂಡರಾದ ಶೋಭಾ ಬಾಣಿ ಮಾತನಾಡಿ, ತಾಲೂಕಿನಲ್ಲಿ ನಡೆಯುತ್ತಿರುವ ಮಲ್ಲಾಬಾದ್‌ ಏತ ನೀರಾವರಿ ಕಾಮಗಾರಿಗೆ ಬಿಜೆಪಿ ಸರ್ಕಾರದಿಂದ ಅನುದಾನ ನೀಡಲಾಗಿದೆ. ಕಾಂಗ್ರೆಸ್ ಶಾಸಕರು ತಾವೇ ಅನುದಾನ ತಂದ ಹಾಗೆ ಪ್ರಚಾರ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿದ ಅವರು, ಯಾವ ಸರ್ಕಾರದಲ್ಲಿ ಎಷ್ಟು ಅಭಿವೃದ್ಧಿಗೆ ಅನುದಾನ ತರಲಾಗಿದೆ ಎಂದು ತಾಲೂಕಿನ ಜನರಿಗೆ ಗೊತ್ತಿದೆ ಎಂದು ಹೇಳಿದರು. ನಂತರ ತಹಸೀಲ್ದಾರ್‌ ರಾಜೇಶ್ವರಿ ಪಿಎಸ್ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.

ಇದನ್ನೂ ಓದಿ: Kalaburagi News: ಹೋನಗುಂಟಾ ಗ್ರಾಮದಲ್ಲಿ ಕಸದ ಬುಟ್ಟಿಗಳ ವಿತರಣೆ

ಪ್ರತಿಭಟನೆಯಲ್ಲಿ ಬಿಜೆಪಿಯ ಹಿರಿಯ ಮುಖಂಡ ಮಲ್ಲಿನಾಥಗೌಡ ಯಲಗೌಡ, ಧರ್ಮಣ್ಣ ದೊಡಮನಿ, ರೇವಣಸಿದ್ದಪ್ಪ ಸಂಕಾಲಿ, ಬಾಪುಗೌಡ ಬಿರಾಳ, ಮರೆಪ್ಪ ಬಡಿಗೇರ, ಬಾಬು ಪಾಟೀಲ್, ಸುರೇಶ ಕಟ್ಟಿಸಂಗಾವಿ, ಸಂಗಣ್ಣಗೌಡ ರದ್ದೇವಾಡಗಿ, ಸಂತೋಷ ಮಲ್ಲಾಬಾದ, ಸುರೇಶ ನೇದಲಗಿ, ಸುರೇಶ ಹಿಪ್ಪರಗಿ, ವಿಶ್ವರಾಧ್ಯ ಬಡಿಗೇರ ಭಾಗೇಶ ಹೊತ್ತಿನಮಡು ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Exit mobile version