ಕಲಬುರಗಿ: ಗ್ರಾಮ ಸಹಾಯಕರ ಹುದ್ದೆಯನ್ನು ಕಂದಾಯ (Revenue) ಇಲಾಖೆ ಡಿ ದರ್ಜೆಗೇರಿಸಿ ಹಾಗೂ ವೇತನ ಪರಿಷ್ಕರಣೆ ಜತೆಗೆ ಸೇವಾ ಭದ್ರತೆ ಒದಗಿಸಬೇಕು ಎಂದು ಕಂದಾಯ ಇಲಾಖೆ ಗ್ರಾಮ ಸಹಾಯಕರ ಸಂಘದ ರಾಜ್ಯ ಅಧ್ಯಕ್ಷ ಎಚ್.ಎನ್. ದೇವರಾಜ ಸರ್ಕಾರಕ್ಕೆ ಆಗ್ರಹಿಸಿದರು.
ನಗರದ ಜೈ ಭವಾನಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕ ಪ್ರಾದೇಶಿಕ ವಿಭಾಗದ ಗ್ರಾಮ ಸಹಾಯಕರ ಬೃಹತ್ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಳೆದ 45 ವರ್ಷಗಳಿಂದ ಗ್ರಾಮ ಸಹಾಯಕರಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವ ಗ್ರಾಮ ಸಹಾಯಕರಿಗೆ ಭದ್ರತೆ ಒದಗಿಸುವಂತೆ ಹಲವಾರು ಬಾರಿ ಮನವಿ ಮಾಡಿದರೂ ನಮ್ಮನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಇದನ್ನೂ ಓದಿ: Snake world : ನಾಗರಹಾವನು ನಾಗರ ಹಾವೇ ನುಂಗಿತ್ತಾ.. ನೋಡವ್ವಾ ತಂಗಿ!
ಸಂಘದ ಕಲಬುರರ್ಗಿ ವಿಭಾಗದ ಉಪಾಧ್ಯಕ್ಷ ಲಕ್ಷ್ಮೀಪುತ್ರ ಸಾಗರ ಹಾಗೂ ಅಫಜಲಪುರ ತಾಲೂಕು ಗ್ರಾಮ ಸಹಾಯಕರ ಸಂಘದ ಅಧ್ಯಕ್ಷ ಅಣ್ಣರಾಯ ಜಮಾದಾರ ಮಾತನಾಡಿ, ಗ್ರಾಮ ಸಹಾಯಕರು ದಿನದ 24 ಗಂಟೆಗಳ ಕಾಲ ಪ್ರಮಾಣಿಕವಾಗಿ ಜನರ ಸೇವೆ ಮಾಡುತ್ತಾರೆ ಆದರೆ ಅವರು ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ಯಾವುದೇ ಅನಾಹುತ ಸಂಭವಿಸಿದರೂ ಸೇವಾ ಭದ್ರತೆ ಇಲ್ಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಗ್ರಾಮ ಸಹಾಯಕರು ಮರಣ ಹೊಂದಿದರೆ ಅವರ ಕುಟುಂಬ ಸದಸ್ಯರಿಗೆ ಅನುಕಂಪದ ಆಧಾರದಲ್ಲಿ ಕೆಲಸ ಕೊಡಬೇಕು ಮತ್ತು ಸೇವೆಯಿಂದ ನಿವೃತ್ತರಾದವರಿಗೆ ಪಿಂಚಣಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಸರ್ಕಾರ ಮುಂದಾಗಬೇಕು ಎಂದು ಸಭೆಯಲ್ಲಿ ಅವರು ಒತ್ತಾಯಿಸಿದರು.
ಇದನ್ನೂ ಓದಿ: Benefits Of Tamarind: ಬಾಯಲ್ಲಿ ನೀರೂರಿಸುವ ಹುಣಸೆ ಹಣ್ಣಿನ ಲಾಭಗಳು ಗೊತ್ತೇ?
ಸಭೆಯಲ್ಲಿ ಮುಖಂಡರಾದ ಹೊನ್ನೇಶಪ್ಪ, ಮಡಿವಾಳಪ್ಪ ವನ್ನೂರ, ಪಾವಗಡ ಶ್ರೀರಾಮ, ರಾಜ ಅಹ್ಮದ್, ಅಪ್ಪು ಜಮಾದಾರ, ಸಿದ್ದಲಿಂಗ ನಾಟೀಕಾರ, ವೆಂಕಟೇಶ ಶಿರಗುಪ್ಪ, ಸದಾಶಿವ ವಾಲಿಕಾರ ಸೇರಿದಂತೆ ಗ್ರಾಮ ಸಹಾಯಕರು ಹಾಗೂ ಇತರರು ಉಪಸ್ಥಿತರಿದ್ದರು.