ಕಲಬುರಗಿ: ಕಲಬುರಗಿ ಜಿಲ್ಲೆಯ (Kalaburagi news) ಚಿತ್ತಾಪುರ ತಾಲೂಕಿನ ಕನಗನಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟ (mid day meal) ಸ್ವೀಕರಿಸಿದ 33 ವಿದ್ಯಾರ್ಥಿಗಳು (children ill) ಅಸ್ವಸ್ಥರಾಗಿದ್ದಾರೆ. ಇದು ಕಲಬುರಗಿ ಜಿಲ್ಲೆಯಲ್ಲಿ ಮೂರು ದಿನಗಳಲ್ಲಿ ನಡೆಯುತ್ತಿರುವ ಎರಡನೇ ಇಂಥ ಘಟನೆ. ಒಂದು ದಿನದ ಹಿಂದೆ ಜೇವರ್ಗಿಯಲ್ಲಿ ಹೀಗಾಗಿತ್ತು.
ಚಿತ್ತಾಪುರ ತಾಲೂಕಿನ ಕನಗನಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು, ಮಳೆನೀರಿನಿಂದ ಕಲುಷಿತಗೊಂಡಿದ್ದ ಮಧ್ಯಾಹ್ನದ ಬಿಸಿಯೂಟವನ್ನು ಉಂಡ ಪರಿಣಾಮ 33 ವಿದ್ಯಾರ್ಥಿಗಳು ಅಸ್ವಸ್ಥಗೊಂಡರು. ಸೋಮವಾರ ಶಾಲೆಯಲ್ಲಿ ಮಧ್ಯಾಹ್ನದ ಊಟ ಮಾಡಿದ ನಂತರ ಒಟ್ಟು 33 ವಿದ್ಯಾರ್ಥಿಗಳಿಗೆ ಹೊಟ್ಟೆ ನೋವು, ವಾಂತಿ, ಭೇದಿ ಮುಂತಾದ ಲಕ್ಷಣಗಳು ಕಾಣಿಸಿಕೊಂಡವು. ಕೂಡಲೇ ಅವರನ್ನು ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ವಾಡಿಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಯಿತು ಎಂದು ಜಿಲ್ಲಾ ಆರೋಗ್ಯಾಧಿಕಾರಿ (ಡಿಎಚ್‌ಒ) ಡಾ.ಶರಣಬಸಪ್ಪ ಗಣಜಲಖೇಡ್ ತಿಳಿಸಿದರು.
ಹೆಚ್ಚು ತೀವ್ರವಾಗಿ ಅಸ್ವಸ್ಥಗೊಂಡ ಐದು ವಿದ್ಯಾರ್ಥಿಗಳನ್ನು ವಾಡಿಯ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರಿಗೆ ಕೊಲ್ಲೂರು ಪಿಎಚ್‌ಸಿಯಲ್ಲಿ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಮಕ್ಕಳು ಚೇತರಿಸಿಕೊಂಡಿದ್ದಾರೆ ಮತ್ತು ಸೋಮವಾರ ರಾತ್ರಿಯ ವೇಳೆಗೆ ಡಿಸ್ಚಾರ್ಜ್ ಆಗಿದ್ದಾರೆ. ಆದರೂ ಹೆಚ್ಚು ಪೀಡಿತರು ಇನ್ನೂ ವಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ಸುಧಾರಿಸುತ್ತಿದ್ದಾರೆ.
“ನಮಗೆ ಬಡಿಸಿದ ಅನ್ನದೊಂದಿಗೆ ಮಳೆನೀರು ಹೇಗೆ ಮಿಶ್ರವಾಯಿತು ಎಂದು ನಮಗೆ ತಿಳಿದಿಲ್ಲ” ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ. ಮಧ್ಯಾಹ್ನ 3 ಗಂಟೆಯ ವೇಳೆಗೆ ಅನೇಕ ವಿದ್ಯಾರ್ಥಿಗಳು ತೀವ್ರ ಹೊಟ್ಟೆ ನೋವು, ವಾಂತಿ ಮತ್ತು ನಿರ್ಜಲೀಕರಣವನ್ನು ಅನುಭವಿಸಿದರು. ಅಕ್ಕಿ ಹಾಳಾಗಿದ್ದು, ಕೆಟ್ಟ ವಾಸನೆ ಬರುತ್ತಿದೆ ಎಂದು ಕೆಲ ವಿದ್ಯಾರ್ಥಿಗಳು ದೂರಿದ್ದರು.
“ನಾವು ತಕ್ಷಣ ಎಸ್‌ಡಿಎಂಸಿ ಸದಸ್ಯರು, ವಿದ್ಯಾರ್ಥಿಗಳ ಪೋಷಕರು ಮತ್ತು ಬ್ಲಾಕ್ ಶಿಕ್ಷಣಾಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ ಮತ್ತು ಸಂತ್ರಸ್ತ ವಿದ್ಯಾರ್ಥಿಗಳನ್ನು ಆಸ್ಪತ್ರೆಗಳಿಗೆ ಕರೆದೊಯ್ದಿದ್ದೇವೆ” ಎಂದು ಶಿಕ್ಷಕರು ತಿಳಿಸಿದ್ದಾರೆ.
ಚಿತ್ತಾಪುರ ತಾಲೂಕಿನ ಕರ್ನಾಟಕ ರಕ್ಷಣಾ ವೇದಿಕೆಯ ಸದಸ್ಯರು ತ್ವರಿತವಾಗಿ ಕಾರ್ಯಾಚರಣೆಗಿಳಿದರು. ಅಸ್ವಸ್ಥ ವಿದ್ಯಾರ್ಥಿಗಳನ್ನು ಆಂಬ್ಯುಲೆನ್ಸ್‌ಗಾಗಿ ಕಾಯದೆ ಬೈಕ್ ಮತ್ತು ಟ್ರ್ಯಾಕ್ಟರ್‌ಗಳಲ್ಲಿ ಆಸ್ಪತ್ರೆಗಳಿಗೆ ಸಾಗಿಸಿದರು. ಚಿತ್ತಾಪುರ ಬ್ಲಾಕ್ ಶಿಕ್ಷಣಾಧಿಕಾರಿ (ಬಿಇಒ) ಜಗದೇವಿ ಹತ್ತೂರ್ ಅವರು ಗ್ರಾಮಸ್ಥರು ಮತ್ತು ಎಸ್‌ಡಿಎಂಸಿ ಸದಸ್ಯರು ಕೈಗೊಂಡ ತ್ವರಿತ ಕ್ರಮವನ್ನು ಶ್ಲಾಘಿಸಿದರು. “ಹೆಚ್ಚಿನ ಮಕ್ಕಳು ಬೇಗನೆ ಚೇತರಿಸಿಕೊಂಡರು. ಏಕೆಂದರೆ ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಗ್ರಾಮಸ್ಥರು ಮತ್ತು ಎಸ್‌ಡಿಎಂಸಿ ಸದಸ್ಯರಿಗೆ ಕೃತಜ್ಞತೆ ಸಲ್ಲಿಸುತ್ತೇನೆ” ಎಂದು ಹತ್ತೂರು ಹೇಳಿದರು.
ತಹಶೀಲ್ದಾರ್ ಅಂಬರೀಶ್ ಬಿರಾದಾರ್ ಮಾತನಾಡಿ, “ವೈದ್ಯರು ಮುಂಜಾಗ್ರತಾ ಕ್ರಮವಾಗಿ ಎಲ್ಲ ವಿದ್ಯಾರ್ಥಿಗಳನ್ನು ತಪಾಸಣೆ ನಡೆಸಿದ್ದು, ಅದೇ ಊಟ ಸೇವಿಸಿದ ಇತರರಲ್ಲಿ ಯಾವುದೇ ಸೋಂಕು ಪತ್ತೆಯಾಗಿಲ್ಲ” ಎಂದಿದ್ದಾರೆ.
ಒಂದು ದಿನದ ಹಿಂದೆ ಜೇವರ್ಗಿಯ ಮುರಾರ್ಜಿ ದೇಸಾಯಿ ವಸತಿ ಶಾಲೆಯ 17 ವಿದ್ಯಾರ್ಥಿಗಳು ಉಪಾಹಾರ ಸೇವಿಸಿದ ಬಳಿಕ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.
ಇದನ್ನೂ ಓದಿ: Students Fall Sick: ಬಿಸಿಯೂಟ ಸೇವಿಸಿ ಸರ್ಕಾರಿ ಶಾಲೆಯ 70ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ; ಆರೋಗ್ಯ ವಿಚಾರಿಸಿದ ಶಾಸಕ