ಕಲಬುರಗಿ: ಭಾರತವು ಜಗತ್ತಿನಲ್ಲಿ ನಂಬರ್ ಒನ್ ರಾಷ್ಟ್ರವಾಗಲು ನರೇಂದ್ರ ಮೋದಿ (PM Narendra Modi) ಅವರು ಮೂರನೇ ಬಾರಿಗೆ ಪ್ರಧಾನಿಯಾಗುವುದು ಅವಶ್ಯ ಎಂದು ಸಂಸದ, ಕಲಬುರಗಿ (Kalaburagi News) ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಉಮೇಶ್ ಜಾಧವ್ ಅಭಿಪ್ರಾಯಪಟ್ಟರು.
ಜಿಲ್ಲೆಯ ಅಫಜಲಪುರ ತಾಲೂಕಿನ ಬಡದಾಳ ಮಹಾಶಕ್ತಿ ಕೇಂದ್ರದಲ್ಲಿ ಭಾನುವಾರ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಮುಂದಿನ ಪೀಳಿಗೆಯ ಉತ್ತಮ ಭವಿಷ್ಯಕ್ಕಾಗಿ ಮೂರನೇ ಬಾರಿಗೆ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾಗಿ ಅಧಿಕಾರ ಪಡೆದು, ಉಜ್ವಲ ಭಾರತದ ನಿರ್ಮಾಣಕ್ಕೆ ಮತದಾರರು ಬಿಜೆಪಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ: Gold Rate Today: ಬಂಗಾರದ ಬೆಲೆ ದಾಖಲೆ ಏರಿಕೆ; ₹71,620 ತಲುಪಿದ 24 ಕ್ಯಾರಟ್ ಚಿನ್ನ!
ಕಾಂಗ್ರೆಸ್ಸಿನ ನಾಯಕರು ಪ್ರಧಾನಿಯವರನ್ನು ಯಾವ ಅಭಿವೃದ್ಧಿ ಮಾಡಿದ್ದಾರೆ ಎಂದು ಪ್ರಶ್ನಿಸುತ್ತಿರುವುದು ಹಾಸ್ಯಾಸ್ಪದ. ನಿರುದ್ಯೋಗ ನಿವಾರಣೆಗಾಗಿ ಜವಳಿ ಪಾರ್ಕ್, ನೀಲೂರು ಕೆಳ ಸೇತುವೆ ನಿರ್ಮಾಣ ಮಾಡಿದರೂ ಅಭಿವೃದ್ಧಿ ಅವರ ಕಣ್ಣಿಗೆ ಕಾಣುತ್ತಿಲ್ಲ. ಸ್ವತಃ ಮಲ್ಲಿಕಾರ್ಜುನ ಖರ್ಗೆ ಅವರೇ ರೈಲ್ವೆ ಖಾತೆಯ ಸಚಿವರಾಗಿದ್ದರೂ ಒಂದು ರೈಲು ಕೊಡಲಾಗದ ದುಸ್ಥಿತಿ ಕಾಂಗ್ರೆಸ್ಸಿನದು ಎಂದು ಆರೋಪಿಸಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಬಾಲರಾಜ್ ಗುತ್ತೇದಾರ್ ಮಾತನಾಡಿ, ಕಲಬುರ್ಗಿ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಅಭ್ಯರ್ಥಿ ಡಾ. ಉಮೇಶ್ ಜಾಧವ್, ಜಿಲ್ಲೆಯ ಜೆಡಿಎಸ್‌ನ 2 ಲಕ್ಷ 50 ಸಾವಿರ ಮತಗಳನ್ನು ನೇರವಾಗಿ ಪಡೆಯಲಿದ್ದಾರೆ. ಈ ಹಿಂದೆ ವಿಧಾನಸಭಾ ಚುನಾವಣೆಯಲ್ಲಿ 1 ಲಕ್ಷದ 83 ಸಾವಿರ ಮತಗಳನ್ನು ಜಿಲ್ಲೆಯಲ್ಲಿ ಜೆಡಿಎಸ್ ಪಡೆದಿತ್ತು ಎಂದು ಹೇಳಿದರು.
ಬಿಜೆಪಿ ಹಿರಿಯ ಮುಖಂಡ, ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ, ಅವ್ವಣ್ಣ ಮ್ಯಾಕೇರಿ, ಯುವ ಮುಖಂಡ ರಿತೇಶ್ ಗುತ್ತೇದಾರ್ ಬಿಜೆಪಿ ಗ್ರಾಮೀಣ ಅಧ್ಯಕ್ಷ ಶಿವರಾಜ್ ಪಾಟೀಲ್ ರದ್ದೇವಾಡಗಿ ಮಾತನಾಡಿದರು.
ಇದನ್ನೂ ಓದಿ: Water Crisis: ತುಂಗಭದ್ರಾ ಜಲಾಶಯ ಖಾಲಿ ಖಾಲಿ! ಮುಂದಿನೆರಡು ತಿಂಗಳಿಗೆ ಕೇವಲ 1 ಟಿಎಂಸಿ ಲಭ್ಯ
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಬೀರಣ್ಣ ಪೂಜಾರಿ ತಲ್ಲೂರು, ಮುಖಂಡರಾದ ಅಶೋಕ್ ಬಗಲಿ, ಶಂಕರಪ್ಪ ಗುಡಿ, ಮಾಂತೇಶ ಹುಡಗಿ, ಡಾ. ಇಂದಿರಾ ಶಕ್ತಿ, ಸಿದ್ಧಾಜಿ ಪಾಟೀಲ್, ಶಾಂತಪ್ಪ ಕೋಡ್ಲಿ ಹಾಗೂ ಇತರರು ಇದ್ದರು ಪ್ರಕಾಶ್ ನಿರೂಪಿಸಿದರು. ವಿದ್ಯಾಧರ ಮಂಗಳೂರೆ ಪ್ರಾಸ್ತಾವಿಕ ಭಾಷಣ ಮಾಡಿದರು.