Site icon Vistara News

Kalaburagi News : ಕಲಬುರಗಿಯಲ್ಲಿ ನರೇಗಾ ಕಾರ್ಮಿಕನ ಬಲಿ ಪಡಿಯಿತಾ ರಣ ಬಿಸಿಲು!

kalaburagi News

ಕಲಬುರಗಿ: ನರೇಗಾ ಕೂಲಿ ಕೆಲಸ ಮಾಡುವಾಗ (NREGA worker) ಕುಸಿದು ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಕಲಬುರಗಿ ಜಿಲ್ಲೆಯ (Kalaburagi News) ಆಳಂದ ತಾಲೂಕಿನ ದಣ್ಣೂರ ಗ್ರಾಮದಲ್ಲಿ ನಡೆದಿದೆ. ಶರಣಪ್ಪ ಸಮಗಾರ (42) ನರೇಗಾ ಕೆಲಸ ಮಾಡುವಾಗ ಕುಸಿದು ಬಿದ್ದು ಮೃತಪಟ್ಟವರು.

ಮೇಲ್ನೋಟಕ್ಕೆ ರಣ ಬಿಸಿಲಿಗೆ (summer heat) ಶರಣಪ್ಪ ಸಮಗಾರ ಬಲಿಯಾದರಾ ಎಂಬ ಅನುಮಾನವಿದೆ. ಬಿಸಿಲಿನ ತಾಪದಿಂದ ಅಥವಾ ಹೃದಯಾಘಾತದಿಂದ ಮೃತಪಟ್ಟಿರಬಹುದೆಂದು ಶರಣಪ್ಪರ ಪತ್ನಿ ಶಂಕಿಸಿದ್ದಾರೆ. ಸದ್ಯ ಶರಣಪ್ಪ ಸಮಗಾರ ಮರಣೋತ್ತರ ಪರೀಕ್ಷೆಗಾಗಿ ಅಧಿಕಾರಿಗಳು ಕಾಯುತ್ತಿದ್ದಾರೆ.

ಬಿಸಿಲಿನ ಹೊಡೆತಕ್ಕೆ ಶರಣಪ್ಪನ ಸಾವನ್ನಪ್ಪಿರಬಹುದು ಶಂಕಿಸಲಾಗಿದೆ. ಸದ್ಯ ನರೋಣಾ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಇನ್ನೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚಾಗುತ್ತಿದೆ. ತಾಪಮಾನ ಏರಿಕೆ ನಡುವೆ ಹೀಟ್‌ ವೇವ್ಸ್‌ ಕೂಡ ಹೆಚ್ಚಾಗುತ್ತಿದೆ. ಪ್ರತಿನಿತ್ಯ 41 ಡಿ.ಸೆ ನಿಂದ 42 ಡಿಗ್ರಿ ಸೆಲ್ಸಿಯಸ್‌ನಷ್ಟು ಬಿಸಿಲಿನ ತಾಪಮಾನ ದಾಖಲಾಗುತ್ತಿದೆ. ಕಲಬುರಗಿ ಮಂದಿ ಬಿಸಿಲಿನ ಹೊಡೆತಕ್ಕೆ ಕಂಗೆಟ್ಟು ಹೋಗಿದ್ದಾರೆ. ಮನೆಯಿಂದ ಹೊರ ಬರುವುದಕ್ಕೂ ಲೆಕ್ಕಾಚಾರ ಹಾಕುವುಂತಾಗಿದೆ. ಇತ್ತ ಬಿಸಿಲಿನ ತಾಪಮಾನ ಹೆಚ್ಚಳ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಹಾಗೂ ಜಿಲ್ಲಾಡಳಿತ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದೆ. ಮಕ್ಕಳು, ವಯಸ್ಸಾದವರು, ಬಾಣಂತಿಯರು‌ ಬಿಸಿಲಿನ ತಾಪದಿಂದ ಪಾರಾಗಲು ಮನೆಯಲ್ಲೆ ಇರಲು ಸಲಹೆ ನೀಡಿದ್ದಾರೆ. ಮಧ್ಯಾಹ್ನ 12 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಗರಿಷ್ಟ ತಾಪಮಾನ ದಾಖಲಾಗುತ್ತಿದೆ.

ಇದನ್ನೂ ಓದಿ: ಗಂಡನ ಬಿಟ್ಟು ಇನ್‌ಸ್ಟಾದಲ್ಲಿ ಸಿಕ್ಕವನ ಜತೆಗಿದ್ದ ಬೆಂಗಳೂರು ಮಹಿಳೆಗೆ ಮೋಸ; ಇದೆ ಒಂದು ಟ್ವಿಸ್ಟ್

ಆರೋಗ್ಯ ಇಲಾಖೆಯ ಮಾರ್ಗಸೂಚಿ ಹೀಗಿದೆ..

ಸೂರ್ಯನ ತಾಪವು ಜನರನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ಬೇವರಿಸುವ ಸೂರ್ಯನ ಶಾಖವು ಜನರು ಆರೋಗ್ಯದ ಮೇಲೂ ಪರಿಣಾಮ (Health Tips) ಬೀರುತ್ತಿದೆ. ಹೀಗಾಗಿ ಆರೋಗ್ಯ ಇಲಾಖೆಯು (Health Department) ಕೆಲವು ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಸಾರ್ವಜನಿಕರು ಏನು ಮಾಡಬೇಕು ಏನು ಮಾಡಬಾರದು ಎಂಬ ಸಲಹೆಗಳನ್ನೂ ನೀಡಲಾಗಿದೆ. ಜತೆಗೆ ಮಾಲೀಕರು ಹಾಗೂ ಕೆಲಸಗಾರರಿಗೂ ಒಂದಷ್ಟು ಮುಂಜಾಗ್ರತಾ ಕ್ರಮಗಳನ್ನು (Health Tips) ಕೈಗೊಳ್ಳಲಾಗಿದೆ.

ತಾಪಮಾನದಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳೇನು?

ಸಾಮಾನ್ಯವಾಗಿ ದೇಹದ ಉಷ್ಣತೆಯು 36.4 ಡಿ.ಸೆ ನಿಂದ 37.2 ಡಿ.ಸೆ ಇರಲಿದೆ. ಒಳಾಂಗಣ ಹಾಗೂ ಹೊರಾಂಗಣ ಪ್ರದೇಶಗಳಲ್ಲಿ ಹೆಚ್ಚಿನ ಉಷ್ಣತೆಯಿಂದಾಗಿ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಸಾಧಾರಣದಿಂದ ತೀವ್ರ ಜ್ವರ, ಗಂಧೆಗಳು (prickly heat), ಊತಗಳು ( ಕೈ-ಕಾಲುಗಳು ಹಾಗೂ ಮೊಣಕಾಲು), ಉಷ್ಣತೆಯಿಂದ ಸೆಳೆತ (ಸ್ನಾಯುಗಳ ಸೆಳೆತ), ಪ್ರಜ್ಞೆ ತಪ್ಪುವುದು, ಸುಸ್ತಾಗುವುದು ಹಾಗೂ ಪಾಶ್ವವಾಯು ಉಂಟಾಗಲಿದೆ. ಕೆಲವೊಮ್ಮೆ ಅತಿಯಾದ ಉಷ್ಣತೆಯಿಂದಾಗಿ ಹೃದ್ರೋಗ, ಉಸಿರಾಟದ ಸಮಸ್ಯೆಗಳು ಹಾಗೂ ಕಿಡ್ನಿ ಸಮಸ್ಯೆಗಳು ಹೆಚ್ಚಾಗುತ್ತದೆ. ಅತಿಯಾದ ಬಾಯಾರಿಕೆ, ವಾಕರಿಕೆ ಅಥವಾ ವಾಂತಿಯಾಗುವುದು, ತಲೆನೋವು ಹಾಗೂ ಮೂತ್ರ ವಿಸರ್ಜನೆ ಪ್ರಮಾಣದಲ್ಲಿ ಕಡಿಮೆಯಾಗುವುದು ಹಾಗೂ ಹಳದಿ ಬಣ್ಣದ ಮೂತ್ರ, ಏರು ಗತಿಯ ಉಸಿರಾಟ ಹಾಗೂ ಹೃದಯದ ಬಡಿತ ಹೆಚ್ಚಾಗಲಿದೆ.

ಏನು ಮಾಡಬೇಕು?
-ತಕ್ಷಣವೇ ತಂಪಾದ ಸ್ಥಳಕ್ಕೆ ತೆರಳಿ ಮತ್ತು ದ್ರವಾಹಾರವನ್ನು ಸೇವಿಸಿ. ನೀರಿನ ಸೇವನೆ ಅತ್ಯುತ್ತಮ.
-ಹೆಚ್ಚು ನೀರು ಕುಡಿಯುವುದು. ಬಾಯಾರಿಕೆ ಇಲ್ಲದಿದ್ದರೂ ಆಗಾಗ ನೀರು ಸೇವಿಸಿ. ಜತೆಗೆ ನಿಂಬೆ ಹಣ್ಣಿನ ಶರಬತ್ತು, ಮಜ್ಜಿಗೆ, ಲಸ್ಸಿ ಹಾಗು ಹಣ್ಣಿನ ಜ್ಯೂಸ್‌ಗಳನ್ನು ಒಂದು ಚಿಟಿಕೆ ಉಪ್ಪಿನೊಂದಿಗೆ ಸೇವಿಸುವುದು ಉತ್ತಮ.
-ಈ ಋತುಮಾನದಲ್ಲಿ ಲಭ್ಯವಿರುವ ಹಾಗೂ ಹೆಚ್ಚು ನೀರಿನ ಅಂಶವನ್ನು ಹೊಂದಿರುವ ಹಣ್ಣು ಹಾಗೂ ತರಕಾರಿಗಳಾದ ಕಲ್ಲಂಗಡಿ, ಕರಬೂಜ, ಕಿತ್ತಳೆ, ದ್ರಾಕ್ಷಿ, ಅನಾನಸ್, ಸೌತೆಕಾಯಿ, ಲೆಟೂಸ್, ಎಳನೀರುಗಳನ್ನು ಹೆಚ್ಚಾಗಿ ಸೇವಿಸಬೇಕು.
-ತಿಳಿ ಬಣ್ಣದ, ಅಳಕವಾದ (loose fitting) ಹತ್ತಿಯ ಬಟ್ಟೆಯನ್ನು ಧರಿಸುವುದು ಉತ್ತಮ.
-ಬಿಸಿಲಿನಲ್ಲಿ ಹೊರ ಹೋಗುವ ಸಂದರ್ಭಗಳಲ್ಲಿ ಛತ್ರಿ, ಟೋಪಿ/ಹ್ಯಾಟ್, ಟವೆಲ್ ಅಥವಾ ಇನ್ನಾವುದೇ ಸಾಂಪ್ರದಾಯಿಕ ಪದ್ಧತಿಯನ್ನು ಅನುಸರಿಸಿ ಬಿಸಿಲಿನಿಂದ ರಕ್ಷಣೆ ಪಡೆಯಿರಿ.
-ಬಿಸಿಲಿನಲ್ಲಿ ನಡೆಯುವ ಸಂದರ್ಭದಲ್ಲಿ ಪಾದರಕ್ಷೆ / ಚಪ್ಪಲಿ ಅಥವಾ ಶೂಸ್‌ಗಳನ್ನು ಧರಿಸಬೇಕು.
-ಸಾಧ್ಯವಾದಷ್ಟು ಒಳಾಂಗಣದಲ್ಲಿದ್ದು, ಉತ್ತಮ ಗಾಳಿ ಬೀಸುವ ಹಾಗೂ ತಣ್ಣಗಿರುವ ಪ್ರದೇಶದಲ್ಲಿರಿ. ನೇರವಾಗಿ ಸೂರ್ಯನ ಬೆಳಕು ಹಾಗೂ ಬಿಸಿ ಗಾಳಿಯು ಮನೆಯ ಒಳಗೆ ಬರದಂತೆ ತಡೆಯಲು ಹಗಲು ಹೊತ್ತಿನಲ್ಲಿ ಕಿಟಕಿಗಳನ್ನು ಪರದೆಗಳಿಂದ ಮುಚ್ಚಿ.

ಇದನ್ನೂ ಓದಿ: Side Effects Of Pillow: ಎತ್ತರದ ದಿಂಬು ಬಳಸುತ್ತೀರಾ? ಸಮಸ್ಯೆ ತಪ್ಪಿದ್ದಲ್ಲ!

ಈ ಕೆಲಸವನ್ನು ಮಾಡಬಾರದು

-ಬಿಸಿಲಿನಲ್ಲಿ ಅಂದರೆ ಮಧ್ಯಾಹ್ನ 12 ಗಂಟೆಯಿಂದ 3 ಗಂಟೆಯವರೆಗೆ ಹೊರಹೋಗುವುದನ್ನು ತಪ್ಪಿಸಿ.
-ಮಧ್ಯಾಹ್ನದ ಸಮಯದಲ್ಲಿ ಶ್ರಮದಾಯಕ ಹೊರಾಂಗಣ ಚಟುವಟಿಕೆಗಳನ್ನು ಕೈಗೊಳ್ಳಬಾರದು. ಚಪ್ಪಲಿ ಧರಿಸದೆ ಹೊರಹೋಗುವ ಅಭ್ಯಾಸವನ್ನು ತಪ್ಪಿಸಿ.
-ಮಧ್ಯಾಹ್ನ ಅಡುಗೆ ಮಾಡುವುದು ತಪ್ಪಿಸಿ. ಅಡುಗೆ ಸಿದ್ಧಪಡಿಸುವ ಪ್ರದೇಶದಲ್ಲಿ ಕಿಟಕಿ ಹಾಗೂ ಬಾಗಿಲುಗಳನ್ನು ತೆರೆದಿಡಿ.
-ಮಧ್ಯಪಾನ, ಟೀ, ಕಾಫಿ ಮತ್ತು ಕಾರ್ಬೋನೇಟೆಡ್ ಪಾನೀಯಗಳು ಅಥವಾ ಹೆಚ್ಚು ಸಕ್ಕರೆ ಅಂಶವನ್ನು ಹೊಂದಿದ ಪಾನೀಯಗಳಿಂದ ದೂರವಿರಿ. ಇಂತಹ ಪಾನೀಯಗಳು ದೇಹವನ್ನು ನಿರ್ಜಲೀಕರಣಗೊಳಿಸುತ್ತವೆ ಅಥವಾ ಹೊಟ್ಟೆ ನೋವನ್ನು ಉಂಟುಮಾಡುತ್ತವೆ.
-ಹೆಚ್ಚು ಪ್ರೊಟೀನ್ ಭರಿತವಾದ ಹಾಗೂ ಹಳೆಯದಾದ ಆಹಾರ ಪದಾರ್ಥಗಳನ್ನು ಸೇವಿಸಬೇಡಿ.
-ಮಕ್ಕಳು ಅಥವಾ ಸಾಕು ಪ್ರಾಣಿಗಳನ್ನು ನಿಲುಗಡೆ ಮಾಡಿರುವ ವಾಹನಗಳಲ್ಲಿ ಬಿಡಬೇಡಿ. ವಾಹನಗಳ ಒಳಾಂಗಣದಲ್ಲಿನ ಹೆಚ್ಚಿನಾಪಮಾನವು ಅಪಾಯಕಾರಿಯಾಗಬಹುದು.
-ಕೆಲಸದ ಸ್ಥಳದಲ್ಲಿ ಕೆಲಸಗಾರರಿಗೆ ಕುಡಿಯಲು ತಣ್ಣನೆಯ ನೀರಿನ ವ್ಯವಸ್ಥೆ ಮಾಡಬೇಕು. 20 ನಿಮಿಷಗಳಿಗೊಮ್ಮೆ ಒಂದು ಗ್ಲಾಸ್‌ ಅಥವಾ ಅದಕ್ಕಿಂತ ಹೆಚ್ಚಿನ ನೀರು ಕುಡಿಬೇಕು

ಅಗ್ನಿ ಅವಘಡದ ಕುರಿತು ಎಚ್ಚರಿಕೆ ವಹಿಸಿ

ಬೇಸಿಗೆ ಸಮಯದಲ್ಲಿ ಅತಿಯಾದ ತಾಪಮಾನದಿಂದ ಆರೋಗ್ಯ ಕೇಂದ್ರಗಳಲ್ಲಿ ಅಗ್ನಿ ಅನಾಹುತಗಳಾಗುವ ಸಾಧ್ಯತೆ ಇದೆ. ಹೀಗಾಗಿ ಮುಂಜಾಗ್ರತೆಯನ್ನು ವಹಿಸುವಂತೆ ಆರೋಗ್ಯ ಇಲಾಖೆಯ ಆಯುಕ್ತ ರಂದೀಪ್‌ ಎಲ್ಲಾ ಆಸ್ಪತ್ರೆಗಳಿಗೂ ಸೂಚನೆ ನೀಡಿದ್ದಾರೆ.

ಪ್ರಾಥಮಿಕ ಆರೋಗ್ಯ ಕೇಂದ್ರಗಳೂ ಸೇರಿದಂತೆ ಎಲ್ಲಾ ಹಂತದ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ, ವೈದ್ಯಕೀಯ ಕಾಲೇಜು ಆಸ್ಪತ್ರೆ ಹಾಗೂ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ, ಬೆಂಕಿ ನಂದಿಸುವ ಉಪಕರಣಗಳ ಲಭ್ಯತೆ ಇರಬೇಕು. ಅಗ್ನಿಶಾಮಕ ದಳದಿಂದ No Objection Certificate ಅನ್ನು ಹೊಂದಿರಬೇಕು. ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಅಗತ್ಯ ಕ್ರಮಗಳನ್ನು ಕೈಗೊಂಡು ಆರೋಗ್ಯ ಸಂಸ್ಥೆಗಳಲ್ಲಿ ಅಗ್ನಿ ಅವಘಡಗಳನ್ನು ತಡೆಗಟ್ಟುವಂತೆ ಸೂಚಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version