Site icon Vistara News

Lok Sabha Election 2024: ಕೋಲಿ ಸಮುದಾಯದ ಬಗ್ಗೆ ಕಾಂಗ್ರೆಸ್‌ ಮೊಸಳೆ ಕಣ್ಣೀರು: ಡಾ. ಉಮೇಶ್ ಜಾಧವ್ ಕಿಡಿ

Kalaburagi MP Dr. Umesh Jadav spoke in booth level workers meeting Chittapur assembly constituency

ಕಲಬುರಗಿ: ಸಂಸತ್ತಿನಲ್ಲಿ ಪರಿಶಿಷ್ಟ ವರ್ಗ ಮೀಸಲಾತಿ ಚರ್ಚೆಯ ಸಂದರ್ಭದಲ್ಲಿ ಕೋಲಿ ಸಮಾಜವನ್ನು ಎಸ್‌ಟಿಗೆ ಸೇರ್ಪಡೆ ಮಾಡುವ ಬಗ್ಗೆ ಮಾತನಾಡುವ ಅವಕಾಶವಿದ್ದರೂ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರು ಆ ದಿನ ರಾಜ್ಯಸಭೆಗೆ ಬಹಿಷ್ಕಾರ ಹಾಕಿ ಹೊರ ನಡೆದದ್ದು ಕೋಲಿ ಸಮಾಜದವರಿಗೆ ಮಾಡಿದ ಮಹಾ ಮೋಸ ಎಂದು ಸಂಸದ ಡಾ. ಉಮೇಶ್ ಜಾಧವ್ (Lok Sabha Election 2024) ಆರೋಪಿಸಿದ್ದಾರೆ.

ಚಿತ್ತಾಪುರ ವಿಧಾನಸಭಾ ಕ್ಷೇತ್ರದ ಭಂಕೂರ್ ಮತ್ತು ರಾವೂರ್ ಮಹಾಶಕ್ತಿ ಕೇಂದ್ರಗಳ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಸೋಮವಾರ ಮಾತನಾಡಿದ ಅವರು, ಕೋಲಿ ಸಮುದಾಯದವರನ್ನು ಎಸ್‌ಟಿ ಪಂಗಡಕ್ಕೆ ಸೇರಿಸಲು ಸಂಸತ್ತಿನಲ್ಲಿ ಚರ್ಚೆಗೆ ಬಂದಾಗ ನಾನು ದಾಖಲೆ ಪತ್ರಗಳ ಸಹಿತ ಚರ್ಚೆ ಮಾಡಿ ವಿಷಯ ಪ್ರಸ್ತಾಪಿಸಿದ ಬಗ್ಗೆ ಪಾರ್ಲಿಮೆಂಟಿನ ಕಡತದಲ್ಲಿ ದಾಖಲಾಗಿದೆ. ಆದರೆ, ಮಲ್ಲಿಕಾರ್ಜುನ ಖರ್ಗೆಯವರು ಈ ಚರ್ಚೆಯ ವೇಳೆ ರಾಜ್ಯಸಭೆಯಲ್ಲಿ ಪಾಲ್ಗೊಳ್ಳದೆ ಬಹಿಷ್ಕಾರ ಹಾಕಿರುವುದರಿಂದ ಕೋಲಿ ಸಮುದಾಯದವರಿಗೆ ನ್ಯಾಯ ಒದಗಿಸುವ ವಿಶೇಷ ಅವಕಾಶವನ್ನು ಕಳೆದುಕೊಂಡರು. ಈ ಬಗ್ಗೆ ರಾಜ್ಯಸಭಾ ಸದಸ್ಯರಾದ ಜಗ್ಗೇಶ್ ಅವರು ಖರ್ಗೆಯವರ ನಡೆಯನ್ನು ತೀವ್ರವಾಗಿ ಟೀಕಿಸಿದ್ದರು ಎಂದು ಜಾಧವ್ ನೇರವಾಗಿ ಆರೋಪಿಸಿದರು.

ಇದನ್ನೂ ಓದಿ: UPSC Result 2024: ಯುಪಿಎಸ್‌ಸಿ ಫಲಿತಾಂಶ ಪ್ರಕಟ; ಆದಿತ್ಯ ಶ್ರೀವಾಸ್ತವ ಪ್ರಥಮ ರ್‍ಯಾಂಕ್

ಕೋಲಿ ಸಮಾಜದವರನ್ನು ಎಸ್ ಟಿ ಪಂಗಡಕ್ಕೆ ಸೇರಿಸಲು ಜಾಧವ್ ಅವರು ಏನು ಮಾಡಿದ್ದಾರೆ ಎಂದು ಪ್ರಶ್ನಿಸುತ್ತಿರುವವರು ಕೋಲಿ ಸಮುದಾಯದವರಿಗೆ ಎಸ್‌ಟಿಗೆ ಸೇರಿಸುವ ವಿಚಾರ ಪ್ರಸ್ತಾಪ ಮಾಡಲು ಅವಕಾಶ ಬಳಸದೆ ರಾಜ್ಯಸಭೆಯಿಂದ ಹೊರ ನಡೆದ ಖರ್ಗೆಯವರು ಕೋಲಿ ಸಮುದಾಯಕ್ಕೆ ಉತ್ತರ ನೀಡಬೇಕು. ಹೊರತಾಗಿ ಜಾಧವ್ ಏನು ಮಾಡಿದ್ದಾರೆ ಎಂದು ಪದೇ ಪದೆ ಕೇಳುವ ಬದಲು ಪಾರ್ಲಿಮೆಂಟಿನ ಕಡತದಲ್ಲಿ ಎಸ್‌ಟಿಗೆ ಸೇರಿಸಬೇಕೆಂದು ದಾಖಲೆ ಪತ್ರ ಹಾಗೂ ವಿಚಾರ ಮಂಡಿಸಿದ ಬಗ್ಗೆ ನೋಡಿ ತಿಳಿದುಕೊಳ್ಳಲಿ ಎಂದು ತಿರುಗೇಟು ನೀಡಿದರು.

ಕೋಲಿ ಸಮುದಾಯದ ಬಗ್ಗೆ ಮೊಸಳೆ ಕಣ್ಣೀರು ಸುರಿಸಿ ಕೇವಲ ಅನುಕಂಪ ಪಡೆಯಲು ಕಾಂಗ್ರೆಸ್ ಈ ರೀತಿಯ ನಾಟಕವನ್ನು ಮಾಡುತ್ತಿದೆ. ಹಿಂದುಳಿದ ವರ್ಗಗಳ ಬಗ್ಗೆ ನಿಜವಾದ ಕಾಳಜಿ ಬಿಜೆಪಿಗಿದ್ದು ಆ ಕೆಲಸವನ್ನು ಮಾಡುತ್ತಿದೆ. ಬೆಳಿಗ್ಗೆ ಎದ್ದ ತಕ್ಷಣ ಮೋದಿ ಕೆಲಸ ಏನು? ಜಾಧವ್ ಕೆಲಸ ಏನು? ಎಂದು ಪ್ರಶ್ನಿಸುವ ಕಾಂಗ್ರೆಸ್‌ನವರು 60 ವರ್ಷಗಳಲ್ಲಿ ಮಾಡಿದ ಕೆಲಸದ ಲೆಕ್ಕವನ್ನು ಕೊಡಲಿ ಎಂದು ತಿಳಿಸಿದರು.

ಇದನ್ನೂ ಓದಿ: Innova Hycross: ಇನ್ನೋವಾ ಹೈಕ್ರಾಸ್ ಪೆಟ್ರೋಲ್ GX (O) ಗ್ರೇಡ್ ಬಿಡುಗಡೆ; ದರ ಎಷ್ಟು?

1972 ರಿಂದ ಬರಗಾಲ ಕಾಡಿದ ನಮ್ಮ ಭಾಗದಲ್ಲಿ ಎಂಎಸ್‌ಕೆ ಮಿಲ್, ಶಹಾಬಾದಿನ ಸಿಮೆಂಟ್ ಕಾರ್ಖಾನೆಗಳು ಮುಚ್ಚಿದ್ದು, ಈ ಭಾಗದಿಂದ ಉದ್ಯೋಗಕ್ಕಾಗಿ ವಲಸೆ ಹೋಗುವುದು ಹೆಚ್ಚಾಗಿರುವುದರಿಂದ ಪ್ರಧಾನಿ ನರೇಂದ್ರ ಮೋದಿ ಅವರು ಒಂದು ಲಕ್ಷ ನೇರ ಮತ್ತು ಎರಡು ಲಕ್ಷ ಪರೋಕ್ಷ ಉದ್ಯೋಗ ಸೃಷ್ಟಿಯ ಮೆಗಾ ಜವಳಿ ಪಾರ್ಕ್ ಕೊಡುಗೆ ನೀಡಿದ್ದಾರೆ. 1575 ಕೋಟಿ ರೂಪಾಯಿ ವೆಚ್ಚದ ಸೂರತ್-ಚೆನ್ನೈ ಭಾರತ್ ಮಾಲ್ ರಸ್ತೆ, 200 ಕೋಟಿ ರೂಪಾಯಿ ವೆಚ್ಚದಲ್ಲಿ ಅಮೃತ ಭಾರತ್ ಸ್ಟೇಷನ್ ಅಭಿವೃದ್ಧಿ ಅಡಿಯಲ್ಲಿ ವಾಡಿ, ಶಹಾಬಾದ್‌, ಕಲಬುರಗಿ ಮತ್ತು ಸ್ಟೇಷನ್ ಗಾಣಗಾಪುರ ರೈಲು ನಿಲ್ದಾಣಗಳ ಅಭಿವೃದ್ಧಿ, 68 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಗಿಣಾ ನದಿಗೆ ಮಳಖೇಡದಲ್ಲಿ ಸೇತುವೆ, ಹುಮ್ನಾಬಾದ್ ಬೇಸ್‌ನಿಂದ ರಾಮಮಂದಿರದವರೆಗೆ 58 ಕೋಟಿ ರೂಪಾಯಿ ವೆಚ್ಚದ ಸರ್ವಿಸ್ ರಸ್ತೆ, ನಂದೂರು (ಕೆ) ಕೈಗಾರಿಕಾ ಪ್ರದೇಶದಲ್ಲಿ 250 ಕೋಟಿ ರೂಪಾಯಿ ವೆಚ್ಚದಲ್ಲಿ ಗತಿ ಶಕ್ತಿ ಯೋಜನೆಯಲ್ಲಿ ಬಿಪಿಸಿಎಲ್ ಕಂಪೆನಿಯ ಪೆಟ್ರೋಲಿಯಂ ತೈಲಾಗಾರ ಸಂಗ್ರಹ ಮತ್ತು ಅಲ್ಲಿವರೆಗೆ ರೈಲು ಹಳಿ ವಿಸ್ತರಣೆ, ಇಎಸ್ಐ ಆಸ್ಪತ್ರೆಯಲ್ಲಿ ರಕ್ತ ನಿಧಿ ಕೇಂದ್ರ, ವಿವಿಧ ಕೋರ್ಸ್‌ಗಳ ಆರಂಭ, ದ್ರವೀಕೃತ ಆಮ್ಲಜನಕ ಘಟಕ ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.

ಅನೇಕ ಅಭಿವೃದ್ಧಿ ಕಾರ್ಯ ಕೈಗೊಂಡರು ಕಾಂಗ್ರೆಸ್‌ನವರಿಗೆ ಮಾತ್ರ ಯಾವುದು ಕಣ್ಣಿಗೆ ಕಾಣುತ್ತಿಲ್ಲ. ಮೋದಿ ಅವರನ್ನು ಮೂರನೇ ಬಾರಿಗೆ ಪ್ರಧಾನಿಯನ್ನಾಗಿಸಲು ಮತ್ತು ಎರಡನೇ ಬಾರಿಗೆ ನನ್ನನ್ನು ಲೋಕಸಭೆಗೆ ಆಯ್ಕೆ ಮಾಡಿದರೆ ಈ ಹಿಂದಿನ ಬಡ್ಡಿ ಸಮೇತ ಜನಸೇವೆ ಮಾಡಲು ಸಿದ್ಧ. 18ನೇ ಲೋಕಸಭಾ ಚುನಾವಣೆ ಬಹಳ ಮಹತ್ವಪೂರ್ಣವಾಗಿದ್ದು ಸನಾತನ ಧರ್ಮದ ರಕ್ಷಣೆ, ದೇಶದ ಸುಂದರ ಭವಿಷ್ಯಕ್ಕಾಗಿ ನಿಮ್ಮ ವೋಟಿನ ಶಕ್ತಿ ಮೋದಿಯವರಿಗೆ ಶಕ್ತಿ ತುಂಬುತ್ತದೆ ಎಂದು ಹೇಳಿದರು.

ಬಿಜೆಪಿಯ ನಗರ ಅಧ್ಯಕ್ಷ ಚಂದು ಪಾಟೀಲ್ ಮಾತನಾಡಿ, ಕಾಂಗ್ರೆಸ್‌ನವರ ಅನ್ಯಾಯವನ್ನು ತಾಳಿಕೊಂಡು ಚಿತ್ತಾಪುರದಲ್ಲಿ ಸತತವಾಗಿ ಬಿಜೆಪಿಗೆ ಬೆಂಬಲಿಸಿದ್ದೀರಿ. ಈ ಬಾರಿಯೂ ಲೋಕಸಭಾ ಚುನಾವಣೆಯಲ್ಲಿ ಅತ್ಯಧಿಕ ಮತ ನೀಡಿ ಮೂರನೇ ಬಾರಿ ಪ್ರಧಾನಿಯವರಿಗೆ ಅವಕಾಶ ನೀಡಬೇಕು ಮತ್ತು ಎರಡನೇ ಬಾರಿ ಜಾದವ್ ಅವರನ್ನು ಸಂಸತ್ತಿಗೆ ಕಳಿಸಿ, ಅವರನ್ನು ಸಚಿವರನ್ನಾಗಿ ನಾವೆಲ್ಲ ಕಾಣಬೇಕು ಎಂದು ತಿಳಿಸಿದರು.

ಇದನ್ನೂ ಓದಿ: IPL 2024: ವಿಮಾನ ಚಲಾಯಿಸಿದ ಯಜುವೇಂದ್ರ ಚಹಲ್; ವಿಡಿಯೊ ವೈರಲ್​

ಇದೇ ವೇಳೆ ಮಾಜಿ ಸಚಿವ ದಿ. ಗುರುನಾಥ್ ಅವರ ಪುತ್ರಿ ಜ್ಯೋತಿ, ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು. ಇವರನ್ನು ಸಂಸದ ಡಾ. ಉಮೇಶ್ ಜಾಧವ್, ಬಿಜೆಪಿ ಉಸ್ತುವಾರಿ ಶರಣಪ್ಪ ತಳವಾರ್ ಸೇರಿದಂತೆ ನಾಯಕರು ಬಿಜೆಪಿ ಶಾಲು ಹಾಕಿ, ಪಕ್ಷಕ್ಕೆ ಬರಮಾಡಿಕೊಂಡರು.

Exit mobile version