ಕಲಬುರಗಿ: ಜಿಲ್ಲೆಯ ಕಮಲಾಪುರ ಹೊರ ವಲಯದಲ್ಲಿ ಖಾಸಗಿ ಸ್ಲೀಪರ್ ಬಸ್ ಮತ್ತು ಟೆಂಪೊ ನಡುವೆ ಶುಕ್ರವಾರ ಬೆಳಗ್ಗೆ 6.30ಕ್ಕೆ ಮುಖಾಮುಖಿ ಡಿಕ್ಕಿ ಸಂಭವಿಸಿ, ಬಸ್ ಹೊತ್ತಿ ಉರಿದು ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಸ್ ನಲ್ಲಿದ್ದ ಬಹುತೇಕ ಪ್ರಯಾಣಿಕರು ತಕ್ಷಣ ಹೊರಗಡೆ ಬಂದು ಪಾರಾಗಿದ್ದಾರೆ.
ಈ ದುರಂತದಲ್ಲಿ ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ. ಬೀದರ್- ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಪೊಲೀಸರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ಕೈಗೊಂಡಿದ್ದಾರೆ. ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೇಂಜ್ ಟೂರ‍್ಸ್ ಆಂಡ್ ಟ್ರಾವೆಲ್ಸ್ ಗೆ ಸೇರಿದ ಖಾಸಗಿ ಬಸ್ ಗೋವಾದಿಂದ ಹೈದರಾಬಾದ್ ಗೆ ತೆರಳುತ್ತಿದ್ದಾಗ ಎದುರಿನಿಂದ ಬರುತ್ತಿದ್ದ ಟೆಂಪೊ ಅಪ್ಪಳಿಸಿ ಈ ದುರ್ಘಟನೆ ಸಂಭವಿಸಿದೆ. ಬಸ್‌ನಲ್ಲಿ ಒಟ್ಟು 35 ಜನರಿದ್ದರು ಎನ್ನಲಾಗಿದೆ. ಈ ಪೈಕಿ 22 ಪ್ರಯಾಣಿಕರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮುಖಾಮುಖಿ ಡಿಕ್ಕಿ ನಂತರ ಬಸ್ ಪಕ್ಕದ ಸೇತುವೆಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ನಂತರ ಬೆಂಕಿ ಹೊತ್ತಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಸ್ ಸುಟ್ಟು ಭಸ್ಮ: ಅಪಘಾತದ ತೀವ್ರತೆಗೆ ಖಾಸಗಿ ಬಸ್ ಹೊತ್ತಿ ಉರಿದಿದೆ. ಇದು ಅರುಣಾಚಲ ಪ್ರದೇಶದ ಪಾಸಿಂಗ್ ಇರುವ ಬಸ್ ಆಗಿದೆ. ಒಬ್ಬನೇ ವ್ಯಕ್ತಿಯ ಹೆಸರಲ್ಲಿ ಇಪ್ಪತ್ತು ಜನರ ಸೀಟ್ ಬುಕ್ಕಿಂಗ್ ಮಾಡಿದ್ದು ಗಮನಕ್ಕೆ ಬಂದಿದೆ. ಬಸ್ ನಲ್ಲಿ ಒಂದೇ ಕುಟುಂಬಕ್ಕೆ ಸೇರಿದ ಹಲವರು ಇದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಇದನ್ನೂ ಓದಿ | ಬೆಳಗಾವಿಯಲ್ಲಿ ಕಾರು-ಲಾರಿ ಭೀಕರ ಅಪಘಾತದಲ್ಲಿ ನಾಲ್ವರ ಸಾವು