ಕಲಬುರಗಿ: ಆಗಿಂದಾಗ್ಗೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕುರಿತು ಪ್ರಸ್ತಾಪಿಸುವ ಸಚಿವ ಉಮೇಶ್ ಕತ್ತಿ ತಮ್ಮ ವರಸೆಯನ್ನು ಮುಂದುವರಿಸಿದ್ದಾರೆ. ಪ್ರತ್ಯೇಕ ರಾಜ್ಯ ಆಗುವುದಷ್ಟೆ ಅಲ್ಲ, ಆ ಭಾಗಕ್ಕೆ ತಮ್ಮ ಮಗ ಮುಖ್ಯಮಂತ್ರಿ ಆಗಲಿ ಎಂದಿದ್ದಾರೆ.
ಕಲಬುರಗಿ ಜಿಲ್ಲೆಯ ಚಿಂಚೋಳಿಯಲ್ಲಿ ಮಾತನಾಡಿದ ಸಚಿವ ಉಮೇಶ್ ಕತ್ತಿ, ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕು ಎಂದು ಹತ್ತು ವರ್ಷದಿಂದಲೂ ಹೇಳುತ್ತಲೇ ಬಂದಿದ್ದೇನೆ. ಈಗಲೂ ಹೇಳುತ್ತೇನೆ. ಅಭಿವೃದ್ಧಿ ದೃಷ್ಟಿಯಿಂದ ದೇಶದಲ್ಲಿ 50 ರಾಜ್ಯಗಳಾಗಬೇಕು ಎಂದಬ ಚಿಂತನೆ ಹೈಕಮಾಂಡ್ ಮಟ್ಟದಲ್ಲಿ ನಡೆಯುತ್ತಿದೆ. ಆಗ ಉತ್ತರ ಕರ್ನಾಟಕವೂ ಒಂದು ರಾಜ್ಯವಾಗಲಿ ಎಂದು ಹೇಳುತ್ತೇನೆ.
ಸಿದ್ದರಾಮಯ್ಯ ಅವಧಿಯಲ್ಲಿ ಒಂದೇ ರಾಜ್ಯದಲ್ಲಿ ತಾರತಮ್ಯ ಆಗಿದೆ. ದಕ್ಷಿಣದಲ್ಲಿರುವ ಆಕಳಿ-ಹಸುಗಳಿಗೆ ಪರಿಹಾರ ಕೊಟ್ಟರು, ನಮ್ಮ ಭಾಗದಲ್ಲಿರುವ ಎಮ್ಮೆ-ಕೋಣೆಗಳಿಗೆ ಪರಿಹಾರ ಕೊಡಲಿಲ್ಲ. ಈ ರೀತಿ ನೀವೇ ರಾಜ್ಯವನ್ನು ಇಬ್ಭಾಗ ಮಾಡುತ್ತಿದ್ದೀರ, ಮಾಡುವುದಾದರೆ ಸರಿಯಾಗಿ ಮಾಡಿ ಎಂದು ಹೇಳಿದ್ದೆ. ಈಗಲೂ ಅದನ್ನೇ ಹೇಳುತ್ತೇನೆ ಎಂದರು.
ಪ್ರತ್ಯೇಕ ರಾಜ್ಯ ಮಾಡಿಕೊಂಡು ಆ ಭಾಗದ ಮುಖ್ಯಮಂತ್ರಿ ಆಗಬೇಕೆಂಬ ಬಯಕೆ ಹೊಂದಿದ್ದೀರ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕತ್ತಿ, ಒಟ್ಟು 224 ಶಾಸಕರ ಪೈಕಿ ನಾನೇ ಅತ್ಯಂತ ಹಿರಿಯ ಸದಸ್ಯ. 9 ಬಾರಿ ಶಾಸಕನಾಗಿದ್ದೇನೆ. ನಾನು ಅಖಂಡ ರಾಜ್ಯಕ್ಕೆ ಸಿಎಂ ಆಗಬೇಕು ಅನ್ನೋನು. ಮುಂದೆ ಉತ್ತರ ಕರ್ನಾಟಕ ಪ್ರತ್ಯೇಕವಾದ ಸಂದರ್ಭದಲ್ಲಿ ನನ್ನ ಮಗ ಬೇಕಿದ್ದರೆ ಮುಖ್ಯಮಂತ್ರಿ ಆಗಲಿ ಎಂದು ತಿಳಿಸಿ ಹೊರಟು ಹೋದರು.
ಇದನ್ನೂ ಓದಿ| ನಾನು 65 ವರ್ಷದ ಯುವಕ, 75ರವರೆಗೂ Young: CM ಆಗುವ ಅವಕಾಶವಿದೆ ಎಂದ ಉಮೇಶ್ ಕತ್ತಿ