ತುಮಕೂರು: ಉದ್ಯಮದಲ್ಲಿ ಆಸಕ್ತಿ ಇರುವ ಮಹಿಳೆಯರಿಗೆ ಸೂಕ್ತ ನೆರವು ನೀಡಿ ಪ್ರೋತ್ಸಾಹಿಸಬೇಕಿದೆ ಎಂದು ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಮತ್ತು ಉಬುಂಟು ಕನ್ಸೋರ್ಟಿಯಂ ಸ್ಥಾಪಕ ಅಧ್ಯಕ್ಷರಾದ ಕೆ. ರತ್ನಪ್ರಭಾ (K. Ratna prabha) ಅವರು ಅಭಿಪ್ರಾಯಪಟ್ಟರು.
ಕಲ್ಪಾಮೃತ ಫುಡ್ ಆ್ಯಂಡ್ ಬೆವರೇಜಸ್ ಪ್ರೈ.ಲಿ. (Kalpamrutha Food and Beverages) ಸಂಸ್ಥೆಯಿಂದ ಆಯೋಜಿಸಿದ್ದ ಕಲ್ಪಾಮೃತ ನೂತನ ಶುದ್ಧ ಗಾಣದ ಎಣ್ಣೆ ಉತ್ಪಾದನಾ ಘಟಕ ಪ್ರಾರಂಭೋತ್ಸವ, ಮಳಿಗೆ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಹಿಳೆಯರು ಇಂದು ಎಲ್ಲ ವಲಯಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಉದ್ಯಮ ರಂಗದಲ್ಲೂ ಯಶಸ್ಸನ್ನು ಸಾಧಿಸಿ ಮಾದರಿಯಾಗುತ್ತಿದ್ದಾರೆ. ಆದರೆ ಮಹಿಳೆಯರು ಉದ್ಯಮ ರಂಗಕ್ಕೆ ಕಾಲಿಟ್ಟು ಮುನ್ನಡೆಯುವುದು ಸುಲಭವಲ್ಲ. ಕುಟುಂಬದಿಂದ ಮೊದಲ್ಗೊಂಡು ಸಾಮಾಜಿಕ ಮತ್ತು ಅಧಿಕಾರಶಾಹಿ ವಲಯದಲ್ಲಿ ಅವರು ಅಡೆತಡೆಗಳನ್ನು ಎದುರಿಸುತ್ತಿದ್ದಾರೆ. ಉದ್ಯಮ ನಡೆಸಲು ಮಹಿಳೆಯರಿಗೆ ಮುಕ್ತ ಅವಕಾಶ ಮತ್ತು ನೆರವು ನೀಡಬೇಕಾದ ಅಗತ್ಯ ಇದೆ ಎಂದು ರತ್ನಪ್ರಭಾ ಅವರು ಹೇಳಿದರು.
ಇದನ್ನೂ ಓದಿ | Money Guide: 1.5 ಲಕ್ಷ ರೂ. ಹೂಡಿಕೆ ಮಾಡಿ 2.27 ಕೋಟಿ ರೂ. ಗಳಿಸಿ! ಯಾವುದು ಈ ಸ್ಕೀಂ?
ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಕೆ.ಬಿ. ಕ್ರಾಸ್ ರಸ್ತೆಯ ಮುನಿಯೂರು ಗೇಟ್ ಬಳಿಯ ಕಲ್ಪಾಮೃತ ಫುಡ್ & ಬೆವರೇಜಸ್ ಪ್ರೈ.ಲಿ. (ಕೆಎಫ್‌ಬಿ) ಆವರಣದಲ್ಲಿ ಈ ಕಾರ್ಯಕ್ರಮ ನಡೆಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಮಾಜಿ ಸಚಿವ ಜೆ.ಸಿ ಮಾಧುಸ್ವಾಮಿ, ಇಂದು ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಸ್ಟಾರ್ಟಪ್‌ಗಳನ್ನು ಆರಂಭಿಸಿ ಯಶ ಕಾಣುತ್ತಿದ್ದಾರೆ. ಆದರೆ ಅವರಿಗೆ ಪ್ರೋತ್ಸಾಹದ ಕೊರತೆ ಇದೆ. ಮಹಿಳೆಯರೇ ಆರಂಭಿಸುವ ಸ್ಟಾರ್ಟಪ್‌ಗಳಿಗೆ ಸರ್ಕಾರ ಮತ್ತಷ್ಟು ನೆರವು ನೀಡಬೇಕಿದೆ ಎಂದು ಸಲಹೆ ನೀಡಿದರು.
ವಿಸ್ತಾರ ನ್ಯೂಸ್ ಕಾರ್ಯ ನಿರ್ವಾಹಕ ಸಂಪಾದಕ ಶರತ್ ಎಂ ಎಸ್, ಕಲ್ಪಾಮೃತ ಫುಡ್ ಆ್ಯಂಡ್ ಬೆವರೇಜನ್ ಪ್ರೈವೇಟ್ ಲಿಮಿಟೆಡ್ ಗೌರವ ಸಲಹೆಗಾರರು ಮತ್ತು ಮಾರ್ಗದರ್ಶಕ ಎಂ.ಬಿ. ಸಿದ್ಧಬಸಪ್ಪ, ಸಂಸ್ಥಾಪಕರು ಮತ್ತು ಸಿಇಒ ದಿವ್ಯ ಎಂ.ಬಿ., ನಿರ್ದೇಶಕರಾದ ಪ್ರೇಮಾ ಸಿದ್ದಬಸಪ್ಪ ಉಪಸ್ಥಿತರಿದ್ದರು.
ಏನಿದರ ವಿಶೇಷ?
ಕಲ್ಪತರು ನಾಡಿನ ಕಲ್ಪಾಮೃತ ಫುಡ್ & ಬೆವರೇಜಸ್ ಪ್ರೈ.ಲಿ. ಸಂಸ್ಥೆಯು ಸಾಂಪ್ರದಾಯಿಕ ಗಾಣಗಳನ್ನು ಬಳಸಿ ಶುದ್ಧ ಕೊಬ್ಬರಿ, ಕಡಲೇಕಾಯಿ ಬೀಜಗಳಿಂದ ತಯಾರಿಸಿದ ಎಣ್ಣೆ ಹಾಗೂ ಕಲ್ಪತರು ನಾಡಿನ ತೆಂಗಿನಿಂದ ತಯಾರಿಸಿದ ವಿಶೇಷ ಸಿಹಿ ತಿನಿಸುಗಳನ್ನು ಗ್ರಾಹಕರಿಗೆ ಪೂರೈಸಲು ಮುಂದಾಗಿದೆ.
ಇದನ್ನೂ ಓದಿ | Kannada Pustaka Habba: ಡಿ. 3ರಂದು ರಾಷ್ಟ್ರೋತ್ಥಾನ ಸಾಹಿತ್ಯದ ʼಕನ್ನಡ ಪುಸ್ತಕ ಹಬ್ಬʼ ಸಮಾರೋಪ
ತುರುವೇಕೆರೆ ಸ್ವ-ಸಹಾಯ ಸಂಘ ಹಾಗೂ ಮಹಿಳಾ ಉದ್ಯಮಿಗಳ ಜಾಗತಿಕ ವೇದಿಕೆ ʼಉಬುಂಟುʼ ಸದಸ್ಯರಾಗಿರುವ ದಿವ್ಯ ಎಂ.ಬಿ. ಅವರು ಯುವ ಮಹಿಳಾ ಉದ್ಯಮಿಯಾಗಿ ಈ ಬಹುದೊಡ್ಡ ಯೋಜನೆಯ ಪ್ರಾರಂಭದಲ್ಲಿ ಜಿನಿವಾದಿಂದ ಐ.ಎಫ್.ಆರ್.ಸಿ. (ಅಂತಾರಾಷ್ಟ್ರೀಯ ರೆಡ್ ಕ್ರಾಸ್ ಸಂಸ್ಥೆ)ಯ ಸ್ಪರ್ಧೆಯಲ್ಲಿ ಭಾಗವಹಿಸಿ ಸೀಡ್ ಮನಿಯನ್ನು ಪಡೆದ ಕರ್ನಾಟಕ ಮೂಲದ ಮಹಿಳಾ ಪ್ರತಿನಿಧಿಯಾಗಿದ್ದಾರೆ.