ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿ ನವೆಂಬರ್ 25 ಮತ್ತು 26ರಂದು ಕಂಬಳ ಕೂಟ ಆಯೋಜಿಸಲಾಗಿದೆ. ರಾಜಧಾನಿಯಲ್ಲಿ ಪ್ರಥಮ ಬಾರಿಗೆ ಕರಾವಳಿ ಭಾಗದ ಜಾನಪದ ಕ್ರೀಡೆಯನ್ನು ಆಯೋಜಿಸುತ್ತಿರುವುದು ವಿಶೇಷವಾಗಿದ್ದು, ಇದರಲ್ಲಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಕೇರಳದ ಕಾಸರಗೋಡು ಭಾಗದಿಂದ 130ಕ್ಕೂ ಹೆಚ್ಚು ಜೋಡಿ ಕೋಣಗಳು ಭಾಗವಹಿಸಲಿವೆ. ಇನ್ನು ಕಂಬಳ ಓಟದ ಸ್ಪರ್ಧೆ (Kambala Festival) ವೀಕ್ಷಿಸಲು ವಿವಿಧೆಡೆಯಿಂದ 7 ರಿಂದ 8 ಲಕ್ಷ ಜನರು ಭಾಗಿಯಾಗುವ ನಿರೀಕ್ಷೆ ಇದೆ.
ಈ ಬಗ್ಗೆ ಪುತ್ತೂರು ಶಾಸಕ ಹಾಗೂ ಬೆಂಗಳೂರು ಕಂಬಳ ಸಮಿತಿಯ ಸಂಚಾಲಕ ಅಶೋಕ್ ಕುಮಾರ್ ರೈ ಅವರು ಮಾಹಿತಿ ನೀಡಿದ್ದಾರೆ. ಕಂಬಳ ವೀಕ್ಷಿಸಲು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಚಿತ್ರನಟ ರಜನಿಕಾಂತ್, ನಟಿ ಐಶ್ವರ್ಯ ರೈ ಮತ್ತಿತರರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | Cauvery Water Dispute : ಕಾವೇರಿ ಒಳಹರಿವು ಹೆಚ್ಚಳ, ರಾಜ್ಯ ನಿರಾಳ: ಡಿಸಿಎಂ ಡಿ.ಕೆ. ಶಿವಕುಮಾರ್
ಮಂಗಳೂರಿನಿಂದ ಬೆಂಗಳೂರಿಗೆ ಲಾರಿಗಳಲ್ಲಿ ಕೋಣಗಳನ್ನು ತರಲಾಗುತ್ತದೆ. ಹಾಸನದಲ್ಲಿ ಕೋಣಗಳಿಗೆ ವಿಶ್ರಾಂತಿ ವ್ಯವಸ್ಥೆ ಮಾಡಿದ್ದು, ಪಶುವೈದ್ಯರು ಜತೆಗಿರುತ್ತಾರೆ. ಪಶುವೈದ್ಯಕೀಯ ಆಂಬ್ಯುಲೆನ್ಸ್‌ಗಳು ಬೆಂಗಳೂರು ತಲುಪಿದ ಮೇಲೆ ಕೋಣಗಳಿಗೆ ಒಂದು ದಿನ ವಿಶ್ರಾಂತಿ ನೀಡಲಾಗುತ್ತದೆ. ಇದಕ್ಕಾಗಿ ಎಲ್ಲ ವ್ಯವಸ್ಥೆ ಮಾಡಲಾಗಿದೆ. ಇನ್ನು ಕಂಬಳ ಕೋಣಗಳ ಮಾಲೀಕರಿಗೆ 150 ಕೊಠಡಿಗಳನ್ನು ಕಾಯ್ದಿರಿಸಿದ್ದು, ಕೋಣಗಳಿಗೆ ಕುಡಿಯುವ ನೀರನ್ನು ದಕ್ಷಿಣ ಕನ್ನಡದಿಂದಲೇ ಸರಬರಾಜು ಮಾಡಲಾಗುತ್ತದೆ. ಇನ್ನು 125 ಅಂಗಡಿಗಳು ಇರಲಿದ್ದು, ಅಲ್ಲಿ ಕರಾವಳಿ ಭಾಗದ ವಿವಿಧ ಖಾದ್ಯಗಳು ಸಿಗಲಿವೆ.
ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳನ್ನು ಉಲ್ಲಂಘಿಸದೆ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ. ನಮ್ಮ ಸಂಸ್ಕೃತಿಯನ್ನು ಪ್ರಪಂಚದಾದ್ಯಂತ ಹರಡುವುದು ಮತ್ತು ಬೆಂಗಳೂರಿನಲ್ಲಿ ತುಳು ಭವನವನ್ನು ನಿರ್ಮಿಸಲು ಸರ್ಕಾರವನ್ನು ಒತ್ತಾಯಿಸುವುದು ನಮ್ಮ ಉದ್ದೇಶವಾಗಿದೆ. ಕಾರ್ಯಕ್ರಮಕ್ಕೆ 6 ಕೋಟಿ ರೂಪಾಯಿ ವೆಚ್ಚವಾಗುತ್ತದೆ ಎಂದು ಅಂದಾಜಿಸಿದ್ದೇವೆ. ನಾವು ಸರ್ಕಾರದ ಬೆಂಬಲವನ್ನು ಸಹ ಕೋರುತ್ತೇವೆ ಎಂದರು.
ಇದನ್ನೂ ಓದಿ | Carpooling Ban: ಬೆಂಗಳೂರಿನಲ್ಲಿ ಕಾರ್‌ಪೂಲಿಂಗ್ ನಿಷೇಧ? ಉಲ್ಲಂಘಿಸಿದರೆ 10 ಸಾವಿರ ರೂ.ದಂಡ
ಕನ್ನಡ ಮತ್ತು ತುಳುವಿನಲ್ಲಿ ಕಾಮೆಂಟರಿ ಇರಲಿದ್ದು, ಎಲ್ಲಾ ಕೋಣಗಳಿಗೆ ಪದಕ ಇರುತ್ತದೆ. ಪ್ರಥಮ ಬಹುಮಾನ 2 ಪವನು ಚಿನ್ನ ಹಾಗೂ ದ್ವಿತೀಯ ಬಹುಮಾನ ಒಂದು ಪವನು ಚಿನ್ನ ಸಿಗಲಿದೆ ಎಂದು ಮಾಹಿತಿ ನೀಡಿದ್ದಾರೆ.