ಉಡುಪಿ: ಕರಾವಳಿಯ ಅಪ್ಪಟ ಜನಪದ ಆಟ, ಕೆಸರು ಗದ್ದೆಯಲ್ಲಿ ಕೊಬ್ಬಿದ ಕೋಣಗಳ ಓಟ. ಅದುವೇ ಕರಾವಳಿಯ ಹೆಮ್ಮೆಯ ಕಂಬಳ. ಕಾಂತಾರ ಸಿನಿಮಾ ಬಂದ ಬಳಿಕವಂತೂ ಕಂಬಳದ ಬಗ್ಗೆ ಜನರಲ್ಲಿ ಆಸಕ್ತಿ ಹೆಚ್ಚಾಗಿದೆ. ಕಂಬಳದ ಗದ್ದೆಯಲ್ಲಿ ಕೋಣಗಳನ್ನು ಓಡಿಸುವುದು ಸರ್ವೇ ಸಾಮಾನ್ಯ. ಈ ಮಧ್ಯೆ, ಉಡುಪಿ ಜಿಲ್ಲೆಯ ಗಡಿಯಲ್ಲಿರುವ ಪಡುಬಿದ್ರಿಯಲ್ಲಿ ಆಯೋಜಿಸಿದ್ದ ಸಾಂಪ್ರದಾಯಿಕ ಜೋಡುಕರೆ ಕಂಬಳ (Kambala Festival) ನೋಡುಗರ ಗಮನ ಸೆಳೆಯಿತು.
ಜಿಲ್ಲೆಯಲ್ಲಿ ಸಾಂಪ್ರದಾಯಿಕ ಕಂಬಳ ಸಾಕಷ್ಟು ನಡೆದರೂ ಆಧುನಿಕ ಜೋಡುಕರೆ ಕಂಬಳ ನಡೆಯುವುದು ಕಡಿಮೆ. ನಡೆದರೂ ಕೆಲವೇ ಕೆಲ ಕಡೆಗಳಲ್ಲಿ ಮಾತ್ರ. ಆದರೆ, ಕಳೆದ ೩೦ ವರ್ಷಗಳಿಂದ ಉಡುಪಿ ಜಿಲ್ಲೆಯ ಪಡುಬಿದ್ರಿಯ ಸಮೀಪದ ಅಡ್ವೆಯಲ್ಲಿ ಕೋಟಿ ಚೆನ್ನಯ ಜೋಡುಕರೆ ಕಂಬಳ ಅದ್ಧೂರಿಯಾಗಿ ನಡೆಸಲಾಗುತ್ತಿದೆ. ಈ ಬಾರಿ ಹೊಸ ಉತ್ಸಾಹದೊಂದಿಗೆ ಪಡುಬಿದ್ರಿಯಲ್ಲಿ ಭಾನುವಾರ ಶುರುವಾದ ಅಡ್ವೆ ಕಂಬಳ, ಸೋಮವಾರ ಸಂಜೆವರೆಗೆ ನಡೆಯಿತು.
ಇದನ್ನೂ ಓದಿ | ವಿಶೇಷ ಲೇಖನ | ಮೋಹನ್ ಭಾಗವತ್ ಅವರ ಮಾತುಗಳ ಅರ್ಥವೇನು?
ಈ ಬಾರಿ ಕಂಬಳಗಳಲ್ಲಿ ಅತಿ ಹೆಚ್ಚು ಕೋಣಗಳು ಭಾಗವಹಿಸುತ್ತಿರುವುದು ವಿಶೇಷವೆನಿಸಿದೆ. ಒಂದು ಹಂತದಲ್ಲಿ ಕಂಬಳಕ್ಕೆ ಸಂಪೂರ್ಣ ಬ್ರೇಕ್ ಬೀಳುತ್ತದೆ ಎನ್ನುವ ಹಂತದಲ್ಲಿದ್ದಾಗ, ಕಂಬಳ ಪ್ರಿಯರು ಆತಂಕಗೊಂಡಿದ್ದು ನಿಜ. ಆದರೆ, ಸಿನಿಮಾಗಳ ಮೂಲಕ ಕಂಬಳದ ಕುರಿತ ಪರಿಚಯ ದೇಶದಾದ್ಯಂತ ಆಗುತ್ತಿರುವುದು, ಹೊಸಬರ ಕುತೂಹಲಕ್ಕೆ ಕಾರಣವಾಗಿದೆ.
ಈ ಬಾರಿ ಕಂಬಳ ಕೂಟದಲ್ಲಿ ನೇಗಿಲು ಹಿರಿಯ, ನೇಗಿಲು ಕಿರಿಯ, ಹಗ್ಗ ಹಿರಿಯ, ಹಗ್ಗ ಕಿರಿಯ ಕನೆ ಹಲಗೆ, ಅಡ್ಡ ಹಲಗೆ ಹೀಗೆ ಬೇರೆ ಬೇರೆ ವಿಭಾಗದಲ್ಲಿ ಸುಮಾರು ಇನ್ನೂರಕ್ಕೂ ಅಧಿಕ ಜೋಡಿ ಕೋಣಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಕಂಬಳ ವೀಕ್ಷಿಸಲು ಸಾವಿರಾರು ಮಂದಿ ಆಗಮಿಸಿದ್ದರು. ದೂರದ ಮುಂಬೈ, ಹೊರ ದೇಶದಲ್ಲಿ ಇರುವವರು ಕೂಡ ಅಡ್ವೆ ಕಂಬಳದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.
ಇದನ್ನೂ ಓದಿ | National Youth Festival | ರಾಜ್ಯ ಯುವನೀತಿಗೆ ಸ್ವಾಮಿ ವಿವೇಕಾನಂದರ ಸಂದೇಶವೇ ಪ್ರೇರಣೆ: ಸಿಎಂ ಬೊಮ್ಮಾಯಿ