Site icon Vistara News

‘ಎಂಜಿನ್ ಬದಲಾಗಿದ್ದರಿಂದ ನಾವು ಉಳಿದೆವು’; ಒಡಿಶಾ ರೈಲು ದುರಂತದ ಕ್ಷಣ ವಿವರಿಸಿದ ಕನ್ನಡದ ನಟ ಪ್ರೀತಮ್​

Kannada Actor Preetham Explain About Odisha Train Accident

#image_title

ಒಡಿಶಾ ಬಳಿ ಅಪಘಾತಕ್ಕೀಡಾದ ಬೆಂಗಳೂರು-ಹೌರಾ ರೈಲಿನಲ್ಲಿ (Odisha Train Accident)ಕರ್ನಾಟಕದ ಅದರಲ್ಲೂ ಚಿಕ್ಕಮಗಳೂರಿನ ಅನೇಕರು ಇದ್ದರು. ಇಲ್ಲಿನ ಜೈನ ಮತದವರು ಜಾರ್ಖಂಡ್​​ನಲ್ಲಿರುವ ಶಿಕರ್ಜಿಗೆ ಯಾತ್ರೆ ಹೊರಟಿದ್ದರು. ಅದೃಷ್ಟಕ್ಕೆ ಅವರೆಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಈ ಒಡಿಶಾ ರೈಲು ದುರಂತದಲ್ಲಿ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾದವರಲ್ಲಿ ಚಿತ್ರನಟ ಪ್ರೀತಮ್​ ಕೂಡ ಒಬ್ಬರು. ‘ಶುಕ್ರವಾರ ರಾತ್ರಿ ಏನಾಯಿತು? ತಾವು ಹೇಗೆ ಪಾರಾದೆವು’ ಎಂಬಿತ್ಯಾದಿ ವಿವರಗಳನ್ನು ನಟ ಪ್ರೀತಮ್​ ವಿಸ್ತಾರ ನ್ಯೂಸ್ ವೆಬ್​ಸೈಟ್​ಗೆ ತಿಳಿಸಿದ್ದಾರೆ. ಅಂದಹಾಗೇ, ಮೂಲತಃ ಹೊರನಾಡಿನವರಾದ ಪ್ರೀತಮ್ ​ ‘ಮಾಂಗಲ್ಯಂ ತಂತುನಾನೇನ’ ಎಂಬ ಧಾರಾವಾಹಿಯಲ್ಲಿ ನಟಿಸಿದ್ದಾರೆ. ಇವರ ಅಭಿನಯದ ‘ನೋಡದ ಪುಟಗಳು’ ಸಿನಿಮಾ ಇತ್ತೀಚೆಗಷ್ಟೇ ತೆರೆ ಕಂಡಿತ್ತು.

ಘಟನೆ ಬಗ್ಗೆ ವಿವರ ಬಿಚ್ಚಿಟ್ಟ ನಟ ಪ್ರೀತಮ್​
ಜೈನ ಮುನಿಗಳಾದ ಮಹಿಮಾ ಸಾಗರ್ ಅವರು ಶಿಕರ್ಜಿ ಯಾತ್ರೆಯನ್ನು ಆಯೋಜಿಸಿದ್ದರು. ನಾವು 110 ಯಾತ್ರಾರ್ಥಿಗಳು ಬೆಂಗಳೂರು-ಹೌರಾ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದೆವು. ಕೋಲ್ಕತ್ತದವರೆಗೆ ಹೋಗಿ, ಅಲ್ಲಿಂದ ರೈಲು ಬದಲಿಸಿ, ಶಿಕರ್ಜಿಗೆ ಹೋಗಬೇಕಿತ್ತು. ಓಡಿಶಾ ಬಳಿ ನಾವು ಪ್ರಯಾಣಿಸುತ್ತಿದ್ದ ರೈಲಿನ ಹಿಂಬದಿಗೆ ಮತ್ತೊಂದು ಪ್ರಯಾಣಿಕರ ರೈಲು (ಕೋರಮಂಡಲ ರೈಲು) ಬಂದು ಡಿಕ್ಕಿ ಹೊಡೆಯಿತು. ನಮ್ಮ ರೈಲಿನ ಹಿಂಭಾಗದ ಮೂರು ಬೋಗಿಗಳು ಜಖಂ ಆಗಿವೆ. ನಮಗೆ ಮುಂಭಾಗದಲ್ಲಿ ಇದ್ದವರಿಗೆ ಅಪಘಾತದ ಬಗ್ಗೆ ತಕ್ಷಣವೇ ಗೊತ್ತಾಗಲಿಲ್ಲ. ಐ​ಆರ್​ಸಿಟಿಸಿಯಿಂದ ಆಹಾರ ಪೂರೈಕೆ ಮಾಡುವವರು ನಮ್ಮ ಬೋಗಿಗೆ ಬಂದಾಗ ಅವರಿಂದಲೇ ಈ ಅಪಘಾತದ ವಿಷಯ ಗೊತ್ತಾಯಿತು’ ಎಂದಿದ್ದಾರೆ ನಟ ಪ್ರೀತಮ್​.

ದೇವರು-ನಮ್ಮ ಗುರುಗಳು ಕಾಪಾಡಿದರು!
ಇಲ್ಲಿ ಪ್ರೀತಮ್ ಮತ್ತು ಇತರ 110 ಜನರು ಅಪಾಯದಿಂದ ಪವಾಡವೆಂಬಂತೆ ಪಾರಾಗಿದ್ದಾರೆ. ಬೆಂಗಳೂರಿಂದ ಹೌರಾ ರೈಲು ಹೊರಟಾಗ ಪ್ರೀತಮ್​ ಮತ್ತು ಅವರ ಸ್ನೇಹಿತರು, ಸಂಗಡ ಇದ್ದವರೆಲ್ಲ ಕುಳಿತಿದ್ದು, ರೈಲಿನ ಹಿಂಬದಿಯ ಬೋಗಿಗಳಲ್ಲೇ. ಅದರಲ್ಲೂ ಕೊನೇ ಮೂರು ಬೋಗಿಗಳಲ್ಲೇ ಸೀಟ್ ಬುಕ್ ಆಗಿ ಕುಳಿತಿದ್ದರಂತೆ. ವಿಶಾಖಪಟ್ಟಣದಲ್ಲಿ ರೈಲು ನಿಲ್ಲಿಸಿ, ಎಂಜಿನ್​ ಬದಲಾವಣೆ ಮಾಡಿದಾಗ ಇವರ ಬೋಗಿಗಳು ಮುಂಭಾಗಕ್ಕೆ ಬಂದವು. ಅಷ್ಟೊತ್ತು ಮುಂಭಾಗದಲ್ಲಿದ್ದ ಬೋಗಿಗಳು ಹಿಂಬದಿಯಾಗಿದ್ದವು. ರೈಲಿನ ದಿಕ್ಕು ಬದಲಾಗುವ ವೇಳೆ ಹೀಗೆ ಎಂಜಿನ್ ಬದಲಾವಣೆ ಮಾಡುತ್ತಾರೆ. ಅದೇ ಈಗ ನಟ ಪ್ರೀತಮ್​ ಮತ್ತಿತರರನ್ನು ಕಾಪಾಡಿದೆ. ಈ ವಿಷಯವನ್ನು ನಮ್ಮೊಂದಿಗೆ ಹಂಚಿಕೊಂಡ ಪ್ರೀತಮ್​ ಅವರು ‘ನಿಜಕ್ಕೂ ನಮ್ಮ ಗುರುಗಳ ಆಶೀರ್ವಾದ (ಮಹಿಮಾ ಸಾಗರ್​) ಮತ್ತು ದೇವರ ಕೃಪೆಯಿಂದಲೇ ಪಾರಾದೆವು’ ಎನ್ನುತ್ತಾರೆ.

ಇದನ್ನೂ ಓದಿ: ಒಡಿಶಾ ರೈಲು ದುರಂತ; ಅಪಘಾತಕ್ಕೀಡಾದ ರೈಲಲ್ಲಿದ್ದ ಚಿಕ್ಕಮಗಳೂರು ಯಾತ್ರಾರ್ಥಿ ಹೇಳಿದ್ದೇನು?

‘ಅಪಘಾತವಾದ ಕೆಲವು ಹೊತ್ತಲ್ಲಿ ಒಡಿಶಾದ ಅಧಿಕಾರಿಗಳು ನಮಗೆ ಬಸ್​ ವ್ಯವಸ್ಥೆ ಮಾಡಿಕೊಟ್ಟರು. ಇಲ್ಲಿಂದ ಮುಂದಿನ ರೈಲ್ವೆ ಸ್ಟೇಶನ್​ವರೆಗೆ ಬಸ್​​ನಲ್ಲಿ ಹೋಗಿ, ಅಲ್ಲಿಂದ ಬೇರೆ ರೈಲಿಗೆ ಕೋಲ್ಕತ್ತಕ್ಕೆ ಹೋಗುವಂತೆ ತಿಳಿಸಿದರು. ಈ ಬಗ್ಗೆ ನಾವು ರೈಲ್ವೆ ಇಲಾಖೆ ಅಧಿಕಾರಿಗಳೊಟ್ಟಿಗೆ ಚರ್ಚೆ ಮಾಡಿದಾಗ, ಅವರು ಸ್ವಲ್ಪ ತಡೆಯುವಂತೆ ಹೇಳಿ, ಅಪಘಾತವಾದ ರೈಲಲ್ಲೇ ನಮ್ಮನ್ನು ಅಲ್ಲಿಂದ ಕಳಿಸಿಕೊಟ್ಟಿದ್ದಾರೆ. ಹಿಂದಿನ ಮೂರು ಬೋಗಿಗಳು ಮಾತ್ರ ತುಂಬ ಜಖಂ ಆಗಿದ್ದರಿಂದ ರೈಲಿನ ಸಂಚಾರಕ್ಕೆ ತೊಂದರೆಯಾಗಲಿಲ್ಲ. ನಾವೀಗ ಯಾತ್ರೆ ಮುಂದುವರಿಸಿದ್ದೇವೆ’ ಎಂದು ಪ್ರೀತಮ್​ ತಿಳಿಸಿದ್ದಾರೆ.

Exit mobile version